ಬಂಧನ
ಕನಕಪುರ (ರಾಮನಗರ): ಹಿಂದೂ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದ ಪ್ರೇಮಿಗಳಿಬ್ಬರ ಮೇಲೆ ಗುಂಪೊಂದು ಚಪ್ಪಲಿಯಿಂದ ಹಲ್ಲೆ ನಡೆಸಿದೆ. ಇಬ್ಬರ ತಲೆಯನ್ನು ಅರ್ಧ ಬೋಳಿಸಿ ಮತೀಯ ಗೂಂಡಾಗಿರಿ ಪ್ರದರ್ಶಿಸಿದೆ.
ಈ ಘಟನೆ ಪಟ್ಟಣದ ಇಂದಿರಾನಗರದಲ್ಲಿ ಶನಿವಾರ ನಡೆದಿದೆ. ಮಹೇಶ್ ಮತ್ತು ಆಸಿನ್ ತಾಜ್ ಹಲ್ಲೆಗೊಳಗಾದವರು.
ಘಟನೆಗೆ ಸಂಬಂಧಿಸಿದಂತೆ ಮಹೇಶ್ ಮತ್ತು ಆಸಿನ್ ನೀಡಿರುವ ಪ್ರತ್ಯೇಕ ದೂರಿನ ಮೇರೆಗೆ ಆಸಿನ್ ಕಡೆಯವರಾದ ಶೇಕ್ ಕಬೀರ್, ಸುಹೇಲ್ ಷರೀಫ್, ಸೈಯದ್ ನಯಾಜ್, ನವಾಜ್ ಖಾನ್, ಸಾಜಿದಾ ಬೇಗಂ, ಸಯಿದಾ ಸೇರಿ 7 ಮಂದಿ ವಿರುದ್ದ ಕನಕಪುರ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಐವರನ್ನು ಬಂಧಿಸಿ, ಉಳಿದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಹೇಶ್ ಕೂಡ ವಿವಾಹಿತರಾಗಿದ್ದು ಪತ್ನಿ ತೀರಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆ.18ರಂದು ತಾಮಸಂದ್ರದಲ್ಲಿರುವ ಮಹೇಶ್ ಸ್ನೇಹಿತನ ಮನೆಗೆ ಇಬ್ಬರೂ ಹೋಗಿ ಉಳಿದಿದ್ದರು. ಈ ವಿಷಯ ತಿಳಿದ ಆರೋಪಿಗಳು, ಮಾರನೇ ದಿನ ಸಂಜೆ 4.30ರ ಸುಮಾರಿಗೆ ತಾಮಸಂದ್ರಕ್ಕೆ ಕಾರಿನಲ್ಲಿ ಹೋಗಿ ಇಬ್ಬರನ್ನೂ ಕನಕಪುರಕ್ಕೆ ಕರೆ ತಂದು ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ರಸ್ತೆಯಲ್ಲಿ ಹಲ್ಲೆ: ನಂತರ ಇಂದಿರಾನಗರದ ಕರಿಯಪ್ಪ ರಸ್ತೆಯಲ್ಲಿರುವ ವಿದ್ಯುತ್ ಕಂಬದ ಬಳಿ ಇಬ್ಬರನ್ನೂ ಕೂರಿಸಿ, ಚಪ್ಪಲಿಯಿಂದ ಹೊಡೆದಿದ್ದಾರೆ. ಬಿಡಿಸಿಕೊಳ್ಳಲು ಬಂದ ಮಹೇಶ್ ಕುಟುಂಬದವರ ಮೇಲೂ ಹಲ್ಲೆ ನಡೆಸಲಾಗಿದೆ. ಆರೋಪಿಗಳ ಪೈಕಿ ಕಬೀರ್, ಟ್ರಿಮ್ಮರ್‌ನಿಂದ ಇಬ್ಬರ ತಲೆಯನ್ನು ಅರ್ಧ ಬೋಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ ಗೌಡ, ಹೆಚ್ಚುವರಿ ವರಿಷ್ಠಾಧಿಕಾರಿ ರಾಜೇಂದ್ರ, ಡಿವೈಎಸ್‌ಪಿ ಗಿರಿ ಭೇಟಿ ನೀಡಿ ಮಾಹಿತಿ ಪಡೆದರು.
ವಿವಾಹಿತರು:
15 ವರ್ಷಗಳ ಹಿಂದೆಯೇ ಮದುವೆಯಾಗಿರುವ ಆಸಿನ್ ತಾಜ್‌ಗೆ ಪುತ್ರನಿದ್ದು, ಪತಿ ಆರು ತಿಂಗಳ ಹಿಂದೆ ಬಿಟ್ಟು ಹೋಗಿದ್ದಾರೆ. ಇವರು ಇಂದಿರಾನಗರದ ಮಹೇಶ್ ಅವರನ್ನು ಮೂರು ವರ್ಷದಿಂದ ಪ್ರೀತಿಸುತ್ತಿದ್ದರು.
‘ಮತೀಯ ಗೂಂಡಾಗಿರಿ ವಿರುದ್ಧ ಕ್ರಮ’
‘ಮತೀಯ ಗೂಂಡಾಗಿರಿಯನ್ನು ಯಾರೂ ಮಾಡುವಂತಿಲ್ಲ. ಅಂತಹ ಘಟನೆ ಕಂಡು ಬಂದರೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರೇಮಿಗಳ ಮೇಲಿನ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರನ್ನು ಕರೆಯಿಸಿ ಶಾಂತಿ ಸಭೆ ನಡೆಸಲಾಗಿದೆ. ಮತ್ತೆ ಇಂತಹ ಘಟನೆಗಳು ಮರುಕಳಿಸಲು ಅವಕಾಶ ನೀಡದಂತೆ ಎಚ್ಚರಿಕೆ ನೀಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ ಗೌಡ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಘಟನೆ ಕುರಿತು ಸಾರ್ವಜನಿಕರು ಪ್ರಚೋದನಾ ಹೇಳಿಕೆಗಳಿಗೆ ಕಿವಿಗೊಡದೆ ಸಂಯಮದಿಂದ ವರ್ತಿಸಬೇಕು. ಇತರರ ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ರೀತಿಯಲ್ಲಿ ವರ್ತಿಸಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.