ADVERTISEMENT

23 ದಿನ ಕಳೆದರೂ ಸಿಗದ ಬಾಲಕನ ಸುಳಿವು

ವಕೀಲನ ಕಚೇರಿ ಸ್ಥಳಾಂತರಕ್ಕೆ ಹೋದ ವಿದ್ಯಾರ್ಥಿ ಇನ್ನೂ ಮರಳಿ ಬಂದಿಲ್ಲ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 4:21 IST
Last Updated 12 ಜೂನ್ 2022, 4:21 IST
ನಾಪತ್ತೆಯಾಗಿರುವ ಬಾಲಕನ ಶವಕ್ಕಾಗಿ ಕನಕಪುರ ಅರ್ಕಾವತಿ ನದಿ ಪಾತ್ರದಲ್ಲಿ ಶೋಧಿಸುತ್ತಿರುವ ಪೊಲೀಸರು
ನಾಪತ್ತೆಯಾಗಿರುವ ಬಾಲಕನ ಶವಕ್ಕಾಗಿ ಕನಕಪುರ ಅರ್ಕಾವತಿ ನದಿ ಪಾತ್ರದಲ್ಲಿ ಶೋಧಿಸುತ್ತಿರುವ ಪೊಲೀಸರು   

ಕನಕಪುರ: ವಕೀಲರ ಕಚೇರಿ ಸ್ಥಳಾಂತರಕ್ಕೆಂದು ಮನೆಯಿಂದ ಹೊರಟ ಬಾಲಕ ನಾಪತ್ತೆಯಾಗಿ ಶನಿವಾರಕ್ಕೆ ಸರಿಯಾಗಿ 23 ದಿನ ಕಳೆದಿದೆ. ಆದರೆ, ಪೊಲೀಸರಿಗೆ ಇದುವರೆಗೂ ಬಾಲಕನ ಬಗ್ಗೆ ಒಂದು ಸಣ್ಣ ಸುಳಿವು ಸಿಕ್ಕಿಲ್ಲ.

ಇಲ್ಲಿನ ಎಂ.ಜಿ.ರಸ್ತೆಯ ತಾಯಪ್ಪಗಲ್ಲಿಯ ನಿವಾಸಿಯಾಗಿದ್ದ ಪಿಯುಸಿ ವಿದ್ಯಾರ್ಥಿ ಮೇ 19 ರಂದು ಹಳೇಗಬ್ಬಾಡಿ ಗ್ರಾಮದ ವಾಸಿ ವಕೀಲ ಶಂಕರೇಗೌಡ ಎಂಬುವರು ಕಚೇರಿ ಸ್ಥಳಾಂತರ ಮಾಡಲು ಕರೆದಿದ್ದಾರೆ ಎಂದು ತಾಯಿಗೆ ಹೇಳಿ ಹೋದವನು ಇಂದಿಗೂ ಮರಳಿ ಬಂದಿಲ್ಲ.

ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದಬಾಲಕನ ತಂದೆ, ತಾಯಿ ಅಂತಿಮವಾಗಿ ಕನಕಪುರ ಟೌನ್‌ ಪೊಲೀಸ್‌ ಠಾಣೆಗೆ ಮೇ 23 ರಂದು ಮಗ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಸಂಬಂಧ ವಕೀಲ ಶಂಕರೇಗೌಡ ಮತ್ತು ಆತನ ಗೆಳೆಯ ಮೈಸೂರಿನ ಅರುಣ್‌ ಎಂಬುವರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.ಈ ಇಬ್ಬರೂ ಆರೋಪಿಗಳ ವಿರುದ್ದ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆಗೆ ಪೊಲೀಸ್‌ ಕಸ್ಟಡಿಗೆ ಪಡೆದಿದ್ದಾರೆ.

ADVERTISEMENT

ವಿದ್ಯಾರ್ಥಿಯನ್ನು ಅಂದು ರಾತ್ರಿ ಸಲಿಂಗಕಾಮಕ್ಕೆ ಬಳಸಿಕೊಂಡು ಬೆಳಿಗ್ಗೆ ಮನೆಗೆ ಕಳಿಸಿಕೊಟ್ಟಿರುವುದಾಗಿ ವಕೀಲ ಶಂಕರೇಗೌಡತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.ಆರೋಪಿಗಳನ್ನು ಹಳೇಗಬ್ಬಾಡಿ, ಅವರು ಉಳಿದಿದ್ದ ಲಾಡ್ಜ್‌, ಶಂಕರೇಗೌಡ ಉಳಿಯುತ್ತಿದ್ದ ಹಳೆ ಮನೆಯ ಜಾಗ ಮತ್ತು ತೋಟಕ್ಕೆ ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಶಂಕರೇಗೌಡ ಬಳಸಿ ಕೆರೆಯಲ್ಲಿ ಬಿಸಾಡಿದ್ದ ದಿಂಬನ್ನು ಪೊಲೀಸ್‌ ಶ್ವಾನಗಳ ಪತ್ತೆಹಚ್ಚಿವೆ. ಕೆಲವು ಮಹತ್ತರ ದಾಖಲೆಗಳು, ಸಾಕ್ಷ್ಯಗಳು ಪೊಲೀಸರಿಗೆ ಸಿಕ್ಕಿವೆ.ಬೆರಳಚ್ಚು ತಜ್ಞರು ಸಾಕ್ಷ್ಯಗಳನ್ನು ಪರಿಶೀಲಿಸಿದ್ದಾರೆ.

ಬಾಲಕ ಬದುಕುಳಿದಿರುವ ಸಾಧ್ಯತೆ ಕಡಿಮೆ ಇದೆ ಎಂಬ ತೀರ್ಮಾನಕ್ಕೆ ಬಂದಿರುವ ಪೊಲೀಸರು ಕೆರೆಕಟ್ಟೆ, ನದಿ, ಹಳ್ಳ, ಬೆಟ್ಟ, ಗುಡ್ಡಗಾಡು ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ವಿದ್ಯಾರ್ಥಿಯನ್ನು ಶಂಕರೇಗೌಡ ತನ್ನೊಂದಿಗೆ ಕರೆದುಕೊಂಡು ಹೋಗಿರುವುದಕ್ಕೆ ಪೊಲೀಸರ ಬಳಿ ಸಾಕ್ಷಗಳಿವೆ. ಆದರೂ ಆತನನ್ನು ಪೊಲೀಸರು ತೀವ್ರ ವಿಚಾರಣೆಗೆ ಏಕೆ ಒಳಪಡಿಸುತ್ತಿಲ್ಲ? ವಕೀಲನೆಂಬ ಕಾರಣಕ್ಕೆ ಕೈಚಲ್ಲಿದ್ದಾರೆಯೇ?ಅತ್ಯಂತ ಕ್ಲಿಷ್ಟಕರವಾದ, ಸುಳಿವು ಸಿಗದ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಈ ಪ್ರಕರಣದಲ್ಲಿ ಏಕೆ ಇಷ್ಟೊಂದು ವಿಳಂಬ ಮಾಡುತ್ತಿದ್ದಾರೆ’ ಎನ್ನುವುದು ಸಾರ್ವಜನಿಕರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.