
ರಾಮನಗರ: ಮಹಾ ಶಿವರಾತ್ರಿ ಹಬ್ಬವನ್ನು ನಗರದಲ್ಲಿ ಭಾನುವಾರ ಭಕ್ತಿ–ಭಾವದಿಂದ ಆಚರಿಸಲಾಯಿತು. ದೇವಾಲಯಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆದವು. ಭಕ್ತರು ಕುಟುಂಬ ಸಮೇತ ಬೆಳಿಗ್ಗೆಯಿಂದ ರಾತ್ರಿವರೆಗೆ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು.
ದೇವಾಲಯಗಳನ್ನು ಶನಿವಾರದಿಂದಲೇ ತಳಿರು ತೋರಣ ಹಾಗೂ ವಿದ್ಯುದ್ದೀಪಗಳಿಂದ ಅದ್ಧೂರಿಯಾಗಿ ಅಲಂಕರಿಸಲಾಗಿತ್ತು. ಹಬ್ಬದ ಪ್ರಯುಕ್ತ ದೇವಾಲಯಗಳಲ್ಲಿ ಶಿವ ಸ್ಮರಣೆಯ ಭಜನೆ, ಹಾಡುಗಳು ಕಿವಿಗಳಿಗೆ ಇಂಪು ತಂದವು. ಹಬ್ಬದ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿತ್ತು.
ಐಜೂರಿನ ಮಲ್ಲೇಶ್ವರದ ಬಡಾವಣೆಯ ಮಲ್ಲೇಶ್ವರದ ದೇವಸ್ಥಾನ, ಛತ್ರದ ಬೀದಿಯ ಅರ್ಕೇಶ್ವರದ ದೇವಾಲಯ, ಅರ್ಕಾವತಿ ಬಡಾವಣೆಯ ಸಂಕಷ್ಟಹರ ಗಣಪತಿ ದೇವಸ್ಥಾನ, ಅರ್ಚಕರಹಳ್ಳಿಯ ಮಹದೇಶ್ವರ, ಅರಳೇಪೇಟೆ ಬಸವೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ದೇವರ ದರ್ಶನ ಪಡೆದರು.
ಇತಿಹಾಸ ಪ್ರಸಿದ್ಧ ಅರ್ಕೇಶ್ವರ ದೇವಸ್ಥಾನದ ಪುನರ್‌ನಿರ್ಮಾಣ ನಡೆಯುತ್ತಿರುವುರಿಂದ ದೇವಾಲಯದ ಹೊರಭಾಗದಲ್ಲಿ ದೇವರ ಮೂರ್ತಿಗಳನ್ನು ಇಟ್ಟು, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಂಜೆ ದೇವಾಲಯದ ಆವರಣದಲ್ಲಿ ವಿಪ್ರ ಮಹಿಳಾ ಮಂಡಳಿ ವಾಸವಿ ಮಹಿಳಾ ಮಂಡಳಿಯಿಂದ ಭಕ್ತಿಗೀತೆ ಮತ್ತು ದೇವರನಾಮ ಸ್ಮರಣೆ ಜರುಗಿತು. ನಂತರ ನಾಗಮಣಿ ತಂಡದವರು ಹಾಗೂ ಶಾಲಾ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ನಗರದ ಪ್ರಮುಖ ರಸ್ತೆಗಳು ಸೇರಿದಂತೆ ದೇವಾಲಯದ ಬೀದಿ ಹಾಗೂ ಮುಖ್ಯರಸ್ತೆಯುದ್ದಕ್ಕೂ ವಿದ್ಯುದ್ದೀಪಗಳಿಂದ ಮಾಡಿದ್ದ ಆಕರ್ಷಕ ಅಲಂಕಾರಗಳು ಕಣ್ಮನ ಸೆಳೆಯಿತು. ಕೆಲ ದೇವಸ್ಥಾನಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಯೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಕೆಲ ದೇವಸ್ಥಾನಗಳಲ್ಲಿ ಜಾಗರಣೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರು ರಾತ್ರಿಪೂರ್ತಿ ಜಾಗರಣೆ ವ್ರತದಲ್ಲಿ ಪಾಲ್ಗೊಂಡರು. ಶಿವಪೂಜೆ, ಭಜನೆ, ಕೀರ್ತನೆ ಹಾಡುವುದರ ಮೂಲಕ ಭಕ್ತಿ ಮೆರೆದು ಶಿವನಿಗೆ ತಮ್ಮ ಹರಕೆಯನ್ನು ತೀರಿಸಿದರು.
ರೇವಣಸಿದ್ದೇಶ್ವರ ಬೆಟ್ಟದ ದೇವಾಲಯಕ್ಕೆ ಭಕ್ತರ ಹರಿವು
ರೇವಣಸಿದ್ದೇಶ್ವರ ಬೆಟ್ಟದ ದೇವಾಲಯಕ್ಕೆ ಮಕ್ಕಳಿಂದಿಡಿದು ವಯಸ್ಕರವರೆಗೆ ಭಕ್ತರ ಹರಿವು ಹೆಚ್ಚಾಗಿತ್ತು. ಬೆಳಿಗ್ಗೆಯಿಂದೇ ದೇವರಿಗೆ ಅಭಿಷೇಕ ವಿಶೇಷ ಪೂಜೆ ರುದ್ರಾಭಿಷೇಕ ಪೂಜೆ ನಡೆದವು. ಬೆಳಿಗ್ಗೆಯೇ ಭಕ್ತರು ರೇವಣ ಸಿದ್ದೇಶ್ವರ ಬೆಟ್ಟವನ್ನು ಏರಿದರು. ಕೆಲವು ಜಿಲ್ಲೆಗಳಿಂದ ಭಕ್ತರು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದರು. ಬೆಟ್ಟ ಹತ್ತುವ ಭಕ್ತರಿಗೆ ಕೆಲವರು ಹೆಸರುಬೇಳೆ ಮಜ್ಜಿಗೆ ವಿತರಿಸಿದರು. ಉದ್ಬವ ಮೂರ್ತಿ ರೇವಣಸಿದ್ದೇಶ್ವರ ಮೂರ್ತಿಗೆ ಅಭಿಷೇಕ ಸಹಸ್ರ ಬಿಲ್ವಾರ್ಚನೆ ಮಹಾ ಮಂಗಳಾರತಿ ಕಾರ್ಯಕ್ರಮಗಳು ನಡೆದವು. ಮಧ್ಯದ ಭೀಮೇಶ್ವರ ದೇವಸ್ಥಾನ ಮರುಳಸಿದ್ದೇಶ್ವರ ವೀರಭದ್ರಸ್ವಾಮಿ ದೇವಾಲಯ ಬೆಟ್ಟದ ತಳಭಾಗದ ತೇರುಬೀದಿ ಅಮ್ಮನವರ ದೇವಾಲಯಗಳಲ್ಲಿ ಪೂಜೆಗಳು ನಡೆದವು.
ದ್ವಾದಶ ಲಿಂಗಗಳ ಪ್ರದರ್ಶನ
ನಗರದ ಎಂ.ಜಿ. ರಸ್ತೆಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಹಬ್ಬದ ಪ್ರಯುಕ್ತ ದ್ವಾದಶ ಲಿಂಗಗಳ ಪ್ರದರ್ಶನ ನಡೆಯಿತು. ದೇವಾಲಯದ ಅಮ್ಮನವರಿಗೆ ಹಾಗೂ ಜಲಕಂಠೇಶ್ವರ ದೇವರಿಗೆ ವಿಶೇಷ ಪೂಜೆಗಳು ಜರುಗಿದವು. ಭಕ್ತರು ಬೆಳಿಗ್ಗೆಯಿಂದ ಸಂಜೆವರೆಗೆ ದೇವಾಲಯಕ್ಕೆ ಭೇಟಿ ನೀಡಿ ದ್ವಾದಶ ಲಿಂಗಗಳ ದರ್ಶನ ಪಡೆದು ಪುನೀತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.