ADVERTISEMENT

ಶಾಲೆ ಮುಚ್ಚುವುದು ಸಂವಿಧಾನ ವಿರೋಧಿ: ಸಿ. ಪುಟ್ಟಸ್ವಾಮಿ

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಸಮಾವೇಶ; ಪೋಷಕರು, ವಿದ್ಯಾರ್ಥಿಗಳು, ಸಂಘಟನೆಗಳ ಮುಖಂಡರು ಭಾಗಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 4:45 IST
Last Updated 2 ಮಾರ್ಚ್ 2026, 4:45 IST
<div class="paragraphs"><p>ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ರಾನಗರದ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಎಐಡಿಎಸ್‌ಒ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ‘ನಮ್ಮೂರ ಶಾಲೆ ಉಳಿಸಿ’ ಪ್ರತಿಭಟನಾ ಸಮಾವೇಶದಲ್ಲಿ ಗಣ್ಯರು ಯೋಜನೆಯ ನಡಾವಳಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.</p></div>

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ರಾನಗರದ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಎಐಡಿಎಸ್‌ಒ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ‘ನಮ್ಮೂರ ಶಾಲೆ ಉಳಿಸಿ’ ಪ್ರತಿಭಟನಾ ಸಮಾವೇಶದಲ್ಲಿ ಗಣ್ಯರು ಯೋಜನೆಯ ನಡಾವಳಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

   

ರಾಮನಗರ: ‘ಸರ್ಕಾರಿ ಶಾಲೆಗಳನ್ನು ಮುಚ್ಚಿ ಬಡವರ ಮಕ್ಕಳ ಶಿಕ್ಷಣದ ಹಕ್ಕು ಕಸಿದುಕೊಳ್ಳುವುದು ದೇಶದ್ರೋಹದ ಜೊತೆಗೆ ಸಂವಿಧಾನ ವಿರೋಧಿ ನಡೆ. ಸರ್ಕಾರ ಜಾರಿಗೆ ತಂದಿರುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹಿಂದೆ ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಬಲವಾದ ಪೆಟ್ಟು ಕೊಡುವ ಹುನ್ನಾರವಿದೆ’ ಎಂದು ಹಿರಿಯ ರೈತ ಮುಖಂಡ ಸಿ. ಪುಟ್ಟಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ನಗರದ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ‘ನಮ್ಮೂರ ಶಾಲೆ ಉಳಿಸಿ’ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬಡವರ ಶಿಕ್ಷಣಕ್ಕೆ ಆಸರೆಯಾಗಿರುವ ಹಳ್ಳಿ ಶಾಲೆಗಳನ್ನು ಮುಚ್ಚುವುದು ಅವಿವೇಕದ ಜೊತೆಗೆ ಜನ ವಿರೋಧಿಯಾಗಿದೆ’ ಎಂದರು.

ADVERTISEMENT

‘ಕೆಪಿಎಸ್ ಶಾಲೆಗಳ ಹೆಸರಿನಲ್ಲಿ ಹಳ್ಳಿಗಳಲ್ಲಿ ಶಾಲೆ ಮುಚ್ಚುವುದು ಎಷ್ಟು ಸರಿ? ಶಾಲೆ ಮುಚ್ಚಲು ಅಧಿಕಾರ ಕೊಟ್ಟವರು ಯಾರು? ಇಂತಹ ಕೆಲಸ ಮಾಡುವವರು ಎಂದಿಗೂ ಉದ್ಧಾರವಾಗುವುದಿಲ್ಲ. ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಎಐಡಿಎಸ್ಒ ಆರಂಭಿಸಿರುವ ಹೋರಾಟ ರಾಜ್ಯ ವ್ಯಾಪಿಯಾಗಬೇಕು’ ಎಂದರು.

‌‌‌ಎಸ್‌ಡಿಎಂಸಿ ಅಧ್ಯಕ್ಷ ಶಂಭುಗೌಡ ಮಾತನಾಡಿ, ‘ಸರ್ಕಾರಿ ಶಾಲೆಗಳು‌ ಈಗಾಗಲೇ ಶಿಕ್ಷಕರ ಕೊರತೆ ಹಾಗೂ ಮೂಲಸೌಕರ್ಯವಿಲ್ಲದೆ ಬಳಲುತ್ತಿವೆ. ಅಂತಹ ಶಾಲೆಗಳಿಗೆ ಜೀವ ತುಂಬುವ ಕೆಲಸ ಮಾಡದ ಸರ್ಕಾರ, ಹೊಸ ಯೋಜನೆ ಮೂಲಕ ಶಾಲೆಗಳನ್ನು ಮುಚ್ಚುವುದು ಎಷ್ಟು ಸರಿ? ಈ ನಿರ್ಧಾರದ ಹಿಂದೆ‌ ಶಿಕ್ಷಣ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರವಿದೆ’ ಎಂದು ಶಂಕೆ ವ್ಯಕ್ತಪಡಿಸಿದರು.

ಎಐಡಿಎಸ್‌ಒ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಬಿ. ಮಾತನಾಡಿ, ‘ಶಿಕ್ಷಣದ ಚಳವಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಹಲವು ಮಹನೀಯರ ಹೋರಾಟದ ಫಲವಾಗಿ ಹಳ್ಳಿ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳು ತಲೆ ಎತ್ತಿವೆ. ಅಂತಹ ಶಾಲೆಗಳನ್ನು ಮುಚ್ಚಿದರೆ ತಳಮಟ್ಟದ ಜನರಿಗೂ ಶಿಕ್ಷಣ ಸಿಗಬೇಕೆಂಬ ಆಶಯ‌ ಮಣ್ಣು ಪಾಲಾಗಲಿದೆ’ ಎಂದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ನವಾಜ್, ‘ಮ್ಯಾಗ್ನೆಟ್ ಯೋಜನೆ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳನ್ನು ತುಂಬದೆ, ಆ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ. ಶಾಲೆ ಉಳಿವಿಗಾಗಿ ಗ್ರಾಮಮಟ್ಟದಲ್ಲಿ ಸಮಿತಿ ರಚಿಸಿ ಹೋರಾಟ ರೂಪಿಸಲಾಗುವುದು. ಬೆಂಗಳೂರಿನಲ್ಲಿ ದೊಡ್ಡ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ಸಮಿತಿ ರಚನೆ: ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು. ಸಲಹೆಗಾರರಾಗಿ ಸಿ. ಪುಟ್ಟಸ್ವಾಮಿ ಮತ್ತು ಶಂಭುಗೌಡ ಅವರನ್ನು, ಅಧ್ಯಕ್ಷರಾಗಿ ಮಂಜಣ್ಣ, ಕಾರ್ಯದರ್ಶಿಯಾಗಿ ರೋಹಿತ್ ಎಂ.ಆರ್, 15 ಮಂದಿ ಉಪಾಧ್ಯಕ್ಷರು ಹಾಗೂ 80 ಮಂದಿಯನ್ನು ಸದಸ್ಯರನ್ನಾಗಿ ನೇಮಿಸಲಾಯಿತು.

ಎಐಡಿವೈಒ ಜಿಲ್ಲಾ ಸಂಚಾಲಕ ರೋಹಿತ್ ಎಂ.ಆರ್, ಮುಖಂಡರಾದ ವಿನಯ್ ಸಾರಥಿ, ಮಿಥುನ್ ಕುಮಾರ್, ಪ್ರಕೃತಿ, ಎಐಎಂಎಸ್‌ಎಸ್‌ ರಾಜ್ಯ ಮಹಿಳಾ ನಾಯಕಿ ಎ. ಶಾಂತ,  ಐಯುಟಿಯುಸಿ ರಮಾ ಟಿ.ಸಿ ಹಾಗೂ ಇತರರು ಇದ್ದರು.

ಸುತ್ತೋಲೆಗೆ ಬೆಂಕಿ ಹಚ್ಚಿ ಆಕ್ರೋಶ

ವೇದಿಕೆ ಕಾರ್ಯಕ್ರಮದ ನಡುವೆಯೇ ಗಣ್ಯರು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕುರಿತ ಶಿಕ್ಷಣ ಇಲಾಖೆಯ ನಡಾವಳಿ ಪ್ರತಿಗಳಿಗೆ ಬೆಂಕಿ ಹಚ್ಚುವ ಮೂಲಕ ಯೋಜನೆ ವಿರುದ್ಧ ಆಕ್ರೋಶ ಹೊರಹಾಕಿದರು. ಸಿ. ಪುಟ್ಟಸ್ವಾಮಿ ಅವರ ನೇತೃತ್ವದಲ್ಲಿ ಇತರ ಗಣ್ಯರು ವಿದ್ಯಾರ್ಥಿಗಳು ಪೋಷಕರು ಹಾಗೂ ಎಐಡಿಎಸ್‌ಒ ಪದಾಧಿಕಾರಿಗಳು ಸಹ ನಡಾವಳಿ ಪ್ರತಿಯನ್ನು ಸುಟ್ಟರು. ಸರ್ಕಾರಿ ಶಾಲೆಗಳನ್ನು ಮುಚ್ಚುವುದಕ್ಕೆ ಯಾವುದೇ ಕಾರಣಕ್ಕು ಬಿಡುವುದಿಲ್ಲ ಎಂದು ಘೋಷಣೆಗಳನ್ನು ಕೂಗಿದರು.

ನಮ್ಮೂರು ಶಾಲೆ ಮುಚ್ಚಲು ಇವರ‍್ಯಾರು?

‘ಮಳೆಗೆ ನಮ್ಮೂರ ಶಾಲೆ ಗೋಡೆ ಕುಸಿದಾಗ ದೇವಸ್ಥಾನದಲ್ಲಿ ತರಗತಿ ಆರಂಭಿಸಲು ಹಳ್ಳಿಯವರು ವ್ಯವಸ್ಥೆ ಮಾಡಿದೆವು. ಆಗ ಶಿಕ್ಷಣ ಇಲಾಖೆ ಅಧಿಕಾರಿಗಳು ನಮ್ಮೂರಿನತ್ತ ಸುಳಿಯಲಿಲ್ಲ. ಶಾಲೆ ಮತ್ತು ಮಕ್ಕಳ ಸ್ಥಿತಿಗತಿ ವಿಚಾರಿಸಲಿಲ್ಲ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಶಾಲೆ ಮುಚ್ಚಿಸುವುದಕ್ಕೆ ಇಲಾಖೆಯ ಉಪ ನಿರ್ದೇಶಕರೇ ಊರಿಗೆ ಬಂದರು. ನಿಮ್ಮೂರ ಶಾಲೆ ಮುಚ್ಚುತ್ತಿದ್ದೇವೆ. ಪಕ್ಕದ ಹೊಂಗೂರಿನಲ್ಲಿರುವ ಸುಸಜ್ಜಿತ ಶಾಲೆಗೆ ನಿಮ್ಮ ಮಕ್ಕಳನ್ನು ಕಳಿಸಿ ಎಂದರು. ಅದಕ್ಕೆ ನಾವು ಶಾಲೆ ಮುಚ್ಚಲು ನೀವ್ಯಾರು? ಇಲ್ಲೇನು ಮಕ್ಕಳಿಲ್ಲವೆ? ಶಾಲೆ ಬಗ್ಗೆ ಪೋಷಕರು ದೂರು ಕೊಟ್ಟಿದ್ದಾರೆಯೇ? ಎಂದು ಪ್ರಶ್ನಿಸಿದಾಗ ಮುಖ ಸಿಂಡರಿಸಿಕೊಂಡು ಹೋದರು.

1954ರಲ್ಲಿ ನಮ್ಮ ಹಿರಿಯರ ಶ್ರಮದಿಂದ ಶುರುವಾದ ಶಾಲೆ ಸಾವಿರಾರು ಜನರಿಗೆ ವಿದ್ಯೆ ನೀಡಿದೆ. ಸುಮಾರು 70 ಮಕ್ಕಳಿರುವ ಸುಸಜ್ಜಿತವಾದ ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ’ ಎಂದು ಸಂತೆಮೊಗೇ‌ನಹಳ್ಳಿಯ ಮಂಜಣ್ಣ ಬೇಸರ ವ್ಯಕ್ತಪಡಿಸಿದರು.

ಯಾವ ಗ್ರಾಮದಲ್ಲಿ ಸರ್ಕಾರಿ ಶಾಲೆ ಮುಚ್ವುತ್ತದೊ ಅಲ್ಲಿ ಮಕ್ಕಳ ಸಂವಿಧಾನದತ್ತ ಹಕ್ಕು ಮೊಟಕುಗೊಳ್ಳುತ್ತದೆ. ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ. ಅದನ್ನು ಕುಡಿದವರು ಘರ್ಜಿಸಲೇಬೇಕು. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ವಿದ್ಯಾವಂತರು ದನಿ ಎತ್ತಬೇಕು.
– ಉಮೇಶ್ ಜಿ. ಗಂಗವಾಡಿ, ರಾಜ್ಯಾಧ್ಯಕ್ಷ, ಎಸ್‌ಡಿಎಂಸಿ ಸಮನ್ವಯ ವೇದಿಕೆ
ಒಂದು‌ ಕಿ.ಮೀ. ವ್ಯಾಪ್ತಿಯಲ್ಲಿರುವ ಮಕ್ಕಳಿಗೆ ಶಿಕ್ಷಣ ಬೇಕಿದ್ದರೆ ಅಲ್ಲಿ ಶಾಲೆ ತೆರೆಯಬೇಕೆಂದು ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆ ಹೇಳುತ್ತದೆ. ಅದನ್ನು ಮೀರಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಮಕ್ಕಳಿದ್ದರೂ ಶಾಲೆ ಮುಚ್ಚುವುದು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
– ಎಂ.ಎನ್. ಶ್ರೀರಾಮ್, ಮಾಜಿ ಅಧ್ಯಕ್ಷ ಎಐಡಿಎಸ್‌ಒ
ರಾಜ್ಯದಲ್ಲಿ ಕಳೆದ ಹತ್ತು ವರ್ಷದಲ್ಲಿ 94 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಿವೆ. ಈ ಅವಧಿಯಲ್ಲಿ 42 ಸಾವಿರ ಖಾಸಗಿ ಶಾಲೆಗಳು ತೆರೆದಿವೆ. ಸರ್ಕಾರಿ ಶಾಲೆ ನಡೆಯುತ್ತಿರುವುದು ಜನರ ಹಣದಿಂದ. ಅಂತಹ ಶಾಲೆಗಳನ್ನು ಮುಚ್ಚಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.
– ತುಳಜಾರಾಂ ಎನ್.ಕೆ, ರಾಜ್ಯ ಕಾರ್ಯದರ್ಶಿ, ಎಐಡಿಎಸ್‌ಒ
ಸಮಾವೇಶದಲ್ಲಿ ಭಾಗವಹಿಸಿದ್ದ ಪೋಷಕರು ಸಂಘಟನೆಗಳ ಮುಖಂಡರು ಹಾಗೂ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.