ADVERTISEMENT

ರಾಮನಗರ: ಕ್ರಷರ್‌ಗಾಗಿ ಸರ್ಕಾರಿ ಶಾಲೆ ಸ್ಥಳಾಂತರಕ್ಕೆ ಹುನ್ನಾರ

ಚನ್ನಮ್ಮನಪಾಳ್ಯ: ಶಾಲೆ ಉಳಿಸಲು ಗ್ರಾಮಸ್ಥರ ಪಣ; ಕ್ರಷರ್ ಲಾಬಿಗೆ ಮಣಿದರೇ ಅಧಿಕಾರಿಗಳು?

ಓದೇಶ ಸಕಲೇಶಪುರ
Published 24 ಜೂನ್ 2025, 4:09 IST
Last Updated 24 ಜೂನ್ 2025, 4:09 IST
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಚನ್ನಮ್ಮನಪಾಳ್ಯದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಚನ್ನಮ್ಮನಪಾಳ್ಯದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ   

ರಾಮನಗರ: ಆ ಊರಿನಲ್ಲಿರುವ ಶಾಲೆಗೆ ಸುತ್ತಲಿನ ನಾಲ್ಕೈದು ಹಳ್ಳಿಗಳ ಮಕ್ಕಳು ಬರುತ್ತಾರೆ. ಇದೇ ಶಾಲೆಯಲ್ಲಿ ಕಲಿತಿರುವ ಒಂದು ತಲೆಮಾರಿನ ವಿದ್ಯಾರ್ಥಿಗಳ ಮಕ್ಕಳು, ಇದೀಗ ಅದೇ ಶಾಲೆಗೆ ಬರುತ್ತಿದ್ದಾರೆ. ಹಳ್ಳಿಗಾಡಿನ ಬಡ ಮಕ್ಕಳ ಶಿಕ್ಷಣಕ್ಕಾಗಿ ಊರಿನ ಇಬ್ಬರು ದಾನ ಮಾಡಿದ ಜಾಗದಲ್ಲಿ ನಡೆಯುತ್ತಿರುವ ಆ ಶಾಲೆಯ ಸ್ಥಳಾಂತರಕ್ಕೆ ಇದೀಗ ಹುನ್ನಾರ ನಡೆದಿದೆ.

ತಾಲ್ಲೂಕಿನ ಬಿಡದಿ ಹೋಬಳಿಯ ಚನ್ನಮ್ಮನಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂತಹದ್ದೊಂದು ಹುನ್ನಾರಕ್ಕೆ ಸಿಲುಕಿದೆ. ಶಾಲೆಯಿಂದ ಸುಮಾರು 430 ಮೀಟರ್ ದೂರದಲ್ಲಿರುವ ಶ್ರೀ ವೆಂಕಟೇಶ್ವರ ಹಿಲ್ ಕ್ರಷರ್‌ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಬಲವಾಗಿ ಆರೋಪಿಸುವ ಗ್ರಾಮಸ್ಥರು, ಶಾಲೆ ಸ್ಥಳಾಂತರದ ವಿರುದ್ಧ ಟೊಂಕ ಕಟ್ಟಿ ನಿಂತಿದ್ದಾರೆ.

ಶಾಲೆಯಲ್ಲಿ ಸಭೆ: ಶಿಕ್ಷಣ ಇಲಾಖೆಯ ಮೌಖಿಕ ಆದೇಶದ ಮೇರೆಗೆ ಗ್ರಾಮದಲ್ಲಿ ಶಾಲೆ ಸ್ಥಳಾಂತರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಜೂನ್ 20ರಂದು ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರು ಹಾಗೂ ಗ್ರಾಮಸ್ಥರ ಸಭೆಯು ಶಿಕ್ಷಕರ ನೇತೃತ್ವದಲ್ಲಿ ನಡೆದಿದೆ. ಈ ವೇಳೆ, ಸ್ಥಳಾಂತರಕ್ಕೆ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದಾರೆ. ಬದಲಿಗೆ ಕ್ರಷರ್‌ನವರೇ ಬೇರೆ ಕಡೆಗೆ ಹೋಗಲಿ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ಗ್ರಾಮಕ್ಕೆ 1977ರಲ್ಲಿ ಮಂಜೂರಾಗಿದ್ದ ಶಾಲೆಯು ನರಸಿಂಹಯ್ಯ ಎಂಬುವರ ಮನೆಯಲ್ಲಿ ನಡೆಯುತ್ತಿತ್ತು. ಎರಡು ವರ್ಷಗಳ ಬಳಿಕ, ನರಸಿಂಹಯ್ಯ ಮತ್ತು ಜಯಮ್ಮ ಎಂಬುವರು ಶಾಲೆಗಾಗಿ ತಮಗೆ ಸೇರಿದ 20 ಗುಂಟೆ ಜಾಗವನ್ನು 1999ರಲ್ಲಿ ಶಿಕ್ಷಣ ಇಲಾಖೆಗೆ ದಾನ ಬರೆದು ಕೊಟ್ಟಿದ್ದರು. ಇಲಾಖೆ ಅಲ್ಲಿ ಎರಡು ಕಟ್ಟಡ ನಿರ್ಮಿಸಿ ಶಾಲೆ ಆರಂಭಿಸಿತ್ತು’ ಎಂದು ಎಸ್‌ಡಿಎಂಸಿ ಅಧ್ಯಕ್ಷ ವೆಂಕಟರಮಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಗೆ ಚನ್ನಮ್ಮನಪಾಳ್ಯ ಸೇರಿದಂತೆ ಸುತ್ತಲಿನ ಕೊಡಿಯಾಲ ಕರೇನಹಳ್ಳಿ, ಹೊಸೂರು ಗೊಲ್ಲಹಳ್ಳಿ, ಲಿಂಗಪ್ಪನದೊಡ್ಡಿ, ಕೆ.ಜಿ. ಗೊಲ್ಲರಪಾಳ್ಯದಿಂದ ಸುಮಾರು 20 ಮಕ್ಕಳು ಶಾಲೆಗೆ ಬರುತ್ತಾರೆ. ಸದ್ಯ ಶಿಕ್ಷಣ ಇಲಾಖೆ ಹೆಸರಿನಲ್ಲಿರುವ ಜಾಗವು ಗ್ರಾಮ ಪಂಚಾಯಿತಿಯಲ್ಲಿ ಇ–ಖಾತೆ ಸಹ ಆಗಿದೆ. ಶಾಲೆ ಪಕ್ಕ ಯಾವಾಗ ಕ್ರಷರ್ ಶುರುವಾಯಿತೊ ಅಂದಿನಿಂದ ಸಮಸ್ಯೆ ಶುರುವಾಗಿದೆ’ ಎಂದರು.

ಜಾಗ ತನ್ನದೆಂದು ಆಕ್ಷೇಪ: ದಾನದ ಜಾಗದಲ್ಲಿ ಶಾಲೆ ಆರಂಭವಾಗಿ ಸುಮಾರು 27 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇದರ ನಡುವೆಯೇ ಬೆಂಗಳೂರಿನ ನಾಗನಾಯಕನಹಳ್ಳಿಯ ನರಸಿಂಹಯ್ಯ ಎಂಬುವರು ಶಾಲೆಯ ಜಾಗ ನನಗೆ ಸೇರಿದ್ದು. ನಾನಿಲ್ಲಿ ಕಟ್ಟಡ ನಿರ್ಮಿಸಬೇಕು. ಹಾಗಾಗಿ, ಜಾಗ ಬಿಟ್ಟುಕೊಡಿ. ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸಿಕೊಳ್ಳಿ ಎಂದು ಊರಿನವರಿಗೆ ತಾಕೀತು ಮಾಡಿದ್ದಾರೆ. ಜಾಗಕ್ಕಾಗಿ ಕೋರ್ಟ್ ಮೆಟ್ಟಿಲೇರಿರುವ ಅವರು, ದಾನಿಗಳಿಗೆ ನೋಟಿಸ್ ಕೂಡ ಜಾರಿಗೊಳಿಸಿದ್ದಾರೆ. ಪ್ರಕರಣ ಸದ್ಯ ಕೋರ್ಟ್‌ನಲ್ಲಿದೆ ಎನ್ನುತ್ತಾರೆ ಮಕ್ಕಳ ಪೋಷಕರು.

2005ರಲ್ಲಿ ಶುರುವಾದ ಕ್ರಷರ್ ಶಾಲೆಯಿಂದ 430 ಮೀಟರ್ ದೂರದಲ್ಲಿದ್ದು, ಮಕ್ಕಳ ಕಲಿಕೆಗೆ ತೀವ್ರ ತೊಂದರೆಯಾಗುತ್ತಿದೆ. ಸುತ್ತಮುತ್ತಲಿನ ಗ್ರಾಮಗಳು ಶಬ್ದಮಾಲಿನ್ಯ ಮತ್ತು ವಾಯುಮಾಲಿನ್ಯಕ್ಕೆ ನಲುಗಿವೆ. ಕ್ರಷರ್‌ನಿಂದ ಇಷ್ಟೆಲ್ಲಾ ಸಮಸ್ಯೆಗಳು ಉದ್ಭವಿಸಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆ, ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೆಲ್ಲರೂ ಮೌನ ವಹಿಸಿದ್ದಾರೆ. ಕ್ರಷರ್‌ನವರು ಪ್ರಭಾವಿಗಳಾಗಿರುವುದರಿಂದ ಈ ವಿಷಯದಲ್ಲಿ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರು
ಊರಿನ ಶಾಲೆಗೆ ಸೂರು ಕಲ್ಪಿಸಲು ನಾವು 20 ಕುಂಟೆ ಜಾಗ ದಾನ ಕೊಟ್ಟೆವು. ಅಲ್ಲಿ ಸರ್ಕಾರವೇ ಕಟ್ಟಡ ನಿರ್ಮಿಸಿ ಶಾಲೆ ನಡೆಸುತ್ತಿದೆ. ಊರಿನಲ್ಲಿ ಕ್ರಷರ್‌ ಶುರುವಾದಾಗಿನಿಂದ ಸಮಸ್ಯೆ ಶುರುವಾಗಿದೆ. ಏನೇ ಆದರೂ ಶಾಲೆ ಸ್ಥಳಾಂತರಕ್ಕೆ ನಾವು ಬಿಡುವುದಿಲ್ಲ
ಜಯಮ್ಮ ಶಾಲೆಗೆ ದಾನ ನೀಡಿದವರು
ಎರಡು ದಶಕಗಳಿಂದ ನಡೆದುಕೊಂಡು ಹೋಗುತ್ತಿದ್ದ ಶಾಲೆಯ ಜಾಗ ತಮ್ಮದೆಂದು ವ್ಯಕ್ತಿಯೊಬ್ಬರು ಆಕ್ಷೇಪ ಎತ್ತಿ ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್‌ ಆದೇಶದ ಅನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಪಿ. ಸೋಮಲಿಂಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ ತಾಲ್ಲೂಕು

‘ಜಾಗ ಕಬಳಿಸಲು ಬಿಡುವುದಿಲ್ಲ’

‘ಗ್ರಾಮದಲ್ಲಿ ಕ್ರಷರ್‌ ನಡೆಸುತ್ತಿರುವವರ ಒತ್ತಡದಿಂದಾಗಿ ಶಾಲೆ ಸ್ಥಳಾಂತರಿಸಿ ಆ ಜಾಗವನ್ನು ಕಬಳಿಸಲು ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಸುತ್ತಮುತ್ತಲಿನ ಊರುಗಳಿಗೂ ಹತ್ತಿರುವ ಈ ಶಾಲೆಯು ಬಡವರು ಮತ್ತು ಕೂಲಿ–ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿದೆ. ನಾನೂ ಇದೇ ಶಾಲೆಯಲ್ಲಿ ಓದಿದ್ದು ಈಗ ನನ್ನ ಮಗ ಸಹ ಓದುತ್ತಿದ್ದಾನೆ. ಯಾವುದೇ ಕಾರಣಕ್ಕೂ ಶಾಲೆ ಎತ್ತಂಗಡಿ ಮಾಡಿ ಜಾಗ ಕಬಳಿಸಲು ನಾವು ಬಿಡುವುದಿಲ್ಲ. ಬೇಕಿದ್ದರೆ ಕ್ರಷರ್‌ನವರೇ ಬೇರೆ ಕಡೆಗೆ ಹೋಗಲಿ. ಶಾಲೆಯಲ್ಲಿ ನಡೆದ ಸಭೆಯಲ್ಲಿ  ಗ್ರಾಮಸ್ಥರು ನಮ್ಮ ನಿರ್ಧಾರವನ್ನು ತಿಳಿಸಿದ್ದೇವೆ’ ಎಂದು ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿ (ಎಸ್‌ಡಿಎಂಸಿ) ವೆಂಕಟರಮಣ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.