ADVERTISEMENT

ರಾಮನಗರ: ಜಲಕ್ರೀಡೆಗೆ ಸಜ್ಜಾದ ರಂಗರಾಯರದೊಡ್ಡಿ ಕೆರೆ

ಕಯಾಕಿಂಗ್, ಪೆಡಲ್ ಬೋಟಿಂಗ್, ವಾಟರ್ ಬೈಕ್, ಬನಾನ ಬೋಟ್‌ ಜಲಕ್ರೀಡೆಗೆ ಸದ್ಯದಲ್ಲೇ ಚಾಲನೆ

ಓದೇಶ ಸಕಲೇಶಪುರ
Published 19 ಸೆಪ್ಟೆಂಬರ್ 2025, 2:30 IST
Last Updated 19 ಸೆಪ್ಟೆಂಬರ್ 2025, 2:30 IST
ರಾಮನಗರದ ಹೊರವಲಯದಲ್ಲಿರುವ ರಂಗರಾಯರದೊಡ್ಡಿ ಕೆರೆ
ರಾಮನಗರದ ಹೊರವಲಯದಲ್ಲಿರುವ ರಂಗರಾಯರದೊಡ್ಡಿ ಕೆರೆ   

ರಾಮನಗರ: ನಗರದ ಹೊರವಲಯದಲ್ಲಿರುವ ರಂಗರಾಯರದೊಡ್ಡಿ ಕೆರೆಯಲ್ಲಿ ಶೀಘ್ರ ಜಲಕ್ರೀಡೆಗಳ ಮೋಜು –ಮಸ್ತಿ ಶುರುವಾಗಲಿದೆ. ಇದುವರೆಗೆ ವಾಯುವಿಹಾರ ಹಾಗೂ ಪ್ರವಾಸ ತಾಣವಾಗಷ್ಟೇ ಉಳಿದಿದ್ದ ಕೆರೆಯಂಗಳದಲ್ಲಿ ಪ್ರವಾಸೋದ್ಯಮ ಇಲಾಖೆಯು ಜಲಕ್ರೀಡೆಗಳನ್ನು ಆರಂಭಿಸಲಿದೆ.

ನಗರದ ಆಕರ್ಷಕ ಸ್ಥಳಗಳಲ್ಲಿ ಒಂದಾಗಿರುವ ಕೆರೆಯು ಸ್ಥಳೀಯರಷ್ಟೇ ಅಲ್ಲದೆ, ಹೊರಗಿನವರ ನೆಚ್ಚಿನ ಪ್ರವಾಸಿ ತಾಣವೂ ಹೌದು. ಇಲ್ಲಿ ಜಲಕ್ರೀಡೆಗಳನ್ನು ಆರಂಭಿಸುವ ಮೂಲಕ ಪ್ರವಾಸೋದ್ಯಮ ಚಟುವಟಿಕೆಗೆ ಉತ್ತೇಜನ ನೀಡಬೇಕು ಎಂಬ ಕೂಗು ಹಿಂದಿನಿಂದಲೂ ಇತ್ತು. ಇದೀಗ, ಅದು ನನಸಾಗುವ ಕಾಲ ಬಂದಿದೆ.

4 ಕೆರೆಗಳಲ್ಲಿ ಜಲಕ್ರೀಡೆ

ADVERTISEMENT

‘ಕೆರೆಯಲ್ಲಿ ಸದ್ಯ ಕಯಾಕಿಂಗ್, ಪೆಡಲ್ ಬೋಟಿಂಗ್, ವಾಟರ್ ಬೈಕ್, ಬನಾನ ಬೋಟ್‌ ಕ್ರೀಡೆಗಳನ್ನು ಆರಂಭಿಸಲಾಗುವುದು. ಮುಂದೆ ಫ್ಲೋಟಿಂಗ್ ರೆಸ್ಟೊರೆಂಟ್ ಆರಂಭಿಸುವ ಆಲೋಚನೆ ಇದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಎಚ್.ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಂಗರಾಯರದೊಡ್ಡಿ ಕೆರೆ ಜೊತೆಗೆ ಜಿಲ್ಲೆಯ ಇತರ ನಾಲ್ಕು ಕೆರೆಗಳಾದ ಬಿಡದಿಯ ನೆಲ್ಲಿಗುಡ್ಡ ಕೆರೆ, ಮಾಗಡಿಯ ವೈ.ಜಿ. ಗುಡ್ಡ ಕೆರೆ ಹಾಗೂ ಹಾರೋಹಳ್ಳಿಯ ರಾವುತ್ತನಹಳ್ಳಿ ಕೆರೆಯಲ್ಲೂ ಜಲಕ್ರೀಡೆಗಳು ಆರಂಭಿಸಲು ತಯಾರಿ ಮಾಡಿಕೊಳ್ಳಲಾಗಿದೆ ಮೊದಲಿಗೆ ರಂಗರಾಯರದೊಡ್ಡಿ ಕೆರೆಯಲ್ಲಿ ಜಲಕ್ರೀಡೆಗಳಿಗೆ ಚಾಲನೆ ಸಿಗಲಿದೆ’ ಎಂದು ಹೇಳಿದರು.

₹3.26 ಲಕ್ಷಕ್ಕೆ ಟೆಂಡರ್

‘ನಾಲ್ಕೂ ಕೆರೆಗಳಲ್ಲಿ ಜಲಕ್ರೀಡೆ ಆರಂಭಿಸಲು ₹3.26 ಲಕ್ಷ ಮೊತ್ತದ ಟೆಂಡರ್ ಅನ್ನು ಎಸ್ಕೇಪ್-2 ಎಕ್ಸ್‌ಪ್ಲೋರ್ ಎಂಬ ಸಂಸ್ಥೆಗೆ ನೀಡಲಾಗಿದೆ. ಈ ಪೈಕಿ, ರಂಗರಾಯರದೊಡ್ಡಿ ಕೆರೆಗೆ ₹76 ಸಾವಿರಕ್ಕೆ ಟೆಂಡರ್ ಆಗಿದೆ. ಕೆರೆಯಲ್ಲಿ 4 ಕ್ರೀಡೆಗಳನ್ನು ಆರಂಭಿಸಲಾಗುವುದು. ಮುಂದೆ ಫ್ಲೋಟಿಂಗ್ ರೆಸ್ಟೊರೆಂಟ್ ಆರಂಭಿಸುವ ಆಲೋಚನೆ ಇದೆ’ ಎಂದು ಮಾಹಿತಿ ನೀಡಿದರು.

ಹೊರೆಯಾಗದಂತೆ ದರ

ಜಲಕ್ರೀಡೆ ಸಂದರ್ಭದಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವಂತೆ ಸಂಸ್ಥೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರವಾಸಿಗರಿಗೆ ಹೊರೆಯಾಗದಂತೆ ದರ ನಿಗದಿಪಡಿಸುವಂತೆ ಸ್ಥಳೀಯ ಶಾಸಕರು ಸೂಚನೆ ನೀಡಿದ್ದಾರೆ. ಜಲಕ್ರೀಡೆಗಳಿಗೆ ಮಕ್ಕಳಿಗೆ ರಿಯಾಯಿತಿ ನೀಡುವಂತೆ ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ. ಜಲಕ್ರೀಡೆಗಳಿಗೆ ಜನರ ಪ್ರತಿಕ್ರಿಯೆ ಆಧರಿಸಿ ಮುಂದೆ ಮತ್ತಷ್ಟು ಚಟುವಟಿಕೆಗಳನ್ನು ಆರಂಭಿಸಲು ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ.

ಕೆರೆಯಲ್ಲಿ ಕಯಾಕಿಂಗ್ ಜಲಕ್ರೀಡೆಯ ದೃಶ್ಯ

ಸೆ. 27ಕ್ಕೆ ಚಾಲನೆ

‘ಪ್ರವಾಸೋದ್ಯಮ ದಿನವಾದ ಸೆ. 27ರಂದು ರಂಗರಾಯರದೊಡ್ಡಿ ಕೆರೆಯಲ್ಲಿ ಜಲಕ್ರೀಡೆಗಳಿಗೆ ಚಾಲನೆ ನೀಡಲಾಗುವುದು. ಬಳಿಕ ಹಂತ ಹಂತವಾಗಿ ಮಾಗಡಿಯ ವೈ.ಜಿ. ಗುಡ್ಡ ಕೆರೆ ಬಿಡದಿಯ ನೆಲ್ಲಿಗುಡ್ಡ ಕೆರೆ ಹಾಗೂ ಹಾರೋಹಳ್ಳಿಯ ರಾವುತ್ತನಹಳ್ಳಿ ಕೆರೆಯಲ್ಲೂ ಆರಂಭಿಸಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಡಿ. ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.