ADVERTISEMENT

ರಾಮನಗರ | ಪುರಸ್ಕಾರದ ಪ್ರೋತ್ಸಾಹ; ಕಲ್ಯಾಣೋತ್ಸವ ಮೆರುಗು

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 4:35 IST
Last Updated 18 ಜನವರಿ 2026, 4:35 IST
<div class="paragraphs"><p>ಬೆಳಿಗ್ಗೆ 6ಕ್ಕೆ ಶುರುವಾದ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಜನ</p></div>

ಬೆಳಿಗ್ಗೆ 6ಕ್ಕೆ ಶುರುವಾದ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಜನ

   

ರಾಮನಗರ: ‌ಚಳಿ ಬಿಟ್ಟು ಹೆದ್ದಾರಿಯಲ್ಲಿ ಉತ್ಸಾಹದಿಂದ ಓಡಿದ ಜನ. ಬಿಸಿಲೇರುತ್ತಿದ್ದಂತೆ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನದ ಗೌರವ. ಸಂಜೆಯಾಗುತ್ತಿದ್ದಂತೆ ಶ್ರೀನಿವಾಸ ಕಲ್ಯಾಣೋತ್ಸವ. ರಾತ್ರಿಯಾಗುತ್ತಿದ್ದಂತೆ ಸಿನಿಮಾ ಮತ್ತು ದೇಶಭಕ್ತಿ ಗೀತೆಗಳ ಅನುರಣನದ ಜೊತೆಗೆ ಜಾನಪದ ನೃತ್ಯಗಳ ಸೊಬಗು.

– ರಾಮನಗರದಲ್ಲಿ ನಡೆಯುತ್ತಿರುವ ರಾಮೋತ್ಸವದ ಮೂರನೇ ದಿನವಾದ ಶನಿವಾರ ನಗರ ಈ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು.

ADVERTISEMENT

ನಗರದ ರಾಮದೇವರ ಬೆಟ್ಟ ರಸ್ತೆಯ ಅಭಯ ಆಂಜನೇಯ ಗೋಪುರದ ಎದುರಿನ ಸ್ಥಳದಲ್ಲಿ ಬೆಳಗ್ಗೆ 6ಕ್ಕೆ ಮ್ಯಾರಥಾನ್‌ಗೆ ಶಾಸಕ ಸಿ.ಪಿ. ಯೋಗೇಶ್ವರ್ ಚಾಲನೆ ನೀಡಿದರು. ಅರ್ಚಕರಹಳ್ಳಿವರೆಗೆ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಹಮ್ಮಿಕೊಂಡಿದ್ದ ಮ್ಯಾರಥಾನ್‌ಗೆ  ಮೊದಲ ಮೂರು ಸ್ಥಾನ ಪಡೆದವರಿಗೆ ನಗದು ಬಹುಮಾನ ಹಾಗೂ ಪಾಲ್ಗೊಂಡವರಿಗೆ ಪದಕ ಮತ್ತು ಟೀ ಶರ್ಟ್ ವಿತರಿಸಲಾಯಿತು.

ಭರಪೂರ ಸನ್ಮಾನ:  ಎಸ್‌ಎಸ್‌ಎಲ್‌ಸಿ, ಪಿಯು, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ 65ಕ್ಕಿಂತ ಹೆಚ್ಚು ಅಂಕ ಗಳಿಸಿದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಾಧಕರ ಸನ್ಮಾನ
ಹಾಗೂ ವಿವಿಧ ಇಲಾಖೆಗಳ ನೌಕರರಿಗೆ ಗೌರವ ಸಮರ್ಪಣೆ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ನಡೆಯಿತು.

ಶಾಸಕ ಎಚ್.ಸಿ. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ನಟ ವಿಜಯ್ ರಾಘವೇಂದ್ರ ಹಾಗೂ ಐಶ್ವರ್ಯ ಡಿ.ಕೆ.ಶಿವಕುಮಾರ್‌ ಪಾಲ್ಗೊಂಡರು.

ನಟ ವಿಜಯ್ ‌ರಾಘವೇಂದ್ರ ಮತ್ತು ಐಶ್ವರ್ಯ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ರಾತ್ರಿ ಶುರುವಾದ ಸಿನಿಮಾ, ದೇಶಭಕ್ತಿ ಗೀತೆ ಹಾಗೂ ಜಾನಪದ ನೃತ್ಯ ಜನರನ್ನು
ಕುಣಿಯುವಂತೆ ಮಾಡಿದವು. ಗ್ಯಾರಂಟಿ ಯೋಜನೆಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿಜಯದೇವ್ ಇದ್ದರು.

ಆರೋಗ್ಯ ಸಮಸ್ಯೆಗೆ ದೈಹಿಕ ಚಟುವಟಿಕೆ ಕಡಿಮೆಯಾಗಿರುವುದು ಕಾರಣ. ಉತ್ತಮ ಆರೋಗ್ಯ ಮತ್ತು ದೈಹಿಕ ಸದೃಢತೆಗಾಗಿ ಒಂದಲ್ಲ ಒಂದು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು
ಸಿ.ಪಿ. ಯೋಗೇಶ್ವರ್, ಚನ್ನಪಟ್ಟಣ ಶಾಸಕ
ವಿದ್ಯಾರ್ಥಿಗಳು ಓದಿ ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಅಲಂಕರಿಸಬೇಕು. ರಾಮೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ಅವರನ್ನು ಪ್ರೋತ್ಸಾಹಿಸಲಾಗುತ್ತಿದೆ
ಎಚ್.ಎ. ಇಕ್ಬಾಲ್‌ ಹುಸೇನ್,ರಾಮನಗರ ಶಾಸಕ
ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಆದರೆ, ಅದನ್ನು ಗುರುತಿಸಿ ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸುವುದು ದೊಡ್ಡ ಕೆಲಸ. ಅಂತಹ ಕೆಲಸವನ್ನು ಶಾಸಕರಾದ ಇಕ್ಬಾಲ್ ಹುಸೇನ್ ಅವರು ರಾಮೋತ್ಸವದ ಮೂಲಕ ಮಾಡಿದ್ದಾರೆ
ವಿಜಯ್ ರಾಘವೇಂದ್ರ,

ದೇವಾಲಯ ಪ್ರತಿಕೃತಿ ಆಕರ್ಷಣೆ: ಸಂಜೆ ನಡೆದ ಶ್ರೀನಿವಾಸ ಕಲ್ಯಾಣೋತ್ಸವಕ್ಕಾಗಿ ನಿರ್ಮಿಸಿದ್ದ ತಿರುಪತಿ ದೇವಾಲಯದ ಪ್ರತಿಕೃತಿ ಸೆಟ್‌ ಜನರನ್ನು ಆಕರ್ಷಿಸಿತು. ಎರಡು ತಾಸು ನಡೆದ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡ ಜನರಿಗೆ ತಿರುಪತಿ ಲಡ್ಡು ವಿತರಿಸಲಾಯಿತು.

ಇಂದಿನ ಕಾರ್ಯಕ್ರಮ

 ಬೆಳಿಗ್ಗೆ 8 ಗಂಟೆ: ಕೆಂಗಲ್ ಹನುಮಂತಯ್ಯ ಸ್ಫೋರ್ಟ್ಸ್‌ ಆ್ಯಂಡ್ ಕಲ್ಚರಲ್ ಸೆಂಟರ್‌ನಲ್ಲಿ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ. ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ ಚಾಲನೆ. ಶಾಂತಿನಗರದ ಈಜುಕೊಳದಲ್ಲಿ 16 ವರ್ಷದೊಳಗಿನವರಿಗೆ ಈಜು ಸ್ಪರ್ಧೆ. ಪರಿಷತ್ ಸದಸ್ಯ ಸುಧಾಮ್ ದಾಸ್ ಚಾಲನೆ.

ಬೆಳಿಗ್ಗೆ 10 ಗಂಟೆ: ಟಿಪ್ಪುನಗರದ ಯೂನಿವರ್ಸಲ್ ಪಬ್ಲಿಕ್ ಶಾಲೆಯಲ್ಲಿ ಮೆಹಂದಿ ಸ್ಪರ್ಧೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಚಾಲನೆ.

ಬೆಳಿಗ್ಗೆ 11 ಗಂಟೆ: ಎಲ್‌ಕೆಜಿ–ಯುಕೆಜಿ ಹಾಗೂ 1ರಿಂದ 4ನೇ ತರಗತಿ ಮಕ್ಕಳಿಗೆ ಫ್ಯಾನ್ಸಿ ಉಡುಪು ಸ್ಪರ್ಧೆ. ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ಚಾಲನೆ.

ಸಂಜೆ 5.30: ಜಿಲ್ಲಾ ಕ್ರೀಡಾಂಗಣದಲ್ಲಿ ದೇಹದಾರ್ಢ್ಯ ಸ್ಪರ್ಧೆ. ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಚಾಲನೆ.

ಸಂಜೆ 6.30: ಅರ್ಜುನ್ ಜನ್ಯ ತಂಡದಿಂದ ಸಂಗೀತ ಸಂಜೆ.
ಸಚಿವ ಜಮೀರ್ ಅಹಮದ್ ಖಾನ್ ಉದ್ಘಾಟನೆ ಮತ್ತು ಬಮೂಲ್
ಅಧ್ಯಕ್ಷ ಡಿ.ಕೆ. ಸುರೇಶ್ ಅಧ್ಯಕ್ಷತೆ. ಸಿನಿಮಾ ನಟರಾದ ಸುದೀಪ್,
ಧ್ರುವ ಸರ್ಜಾ, ನಟಿಯರಾದ ರಚಿತಾ ರಾಮ್, ರಾಗಿಣಿ
ಹಾಗೂ ಇತರರು ಭಾಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.