ADVERTISEMENT

ಪಕ್ಷ ಸೂಚಿಸಿದರೆ ಕನಕಪುರದಿಂದ ಸ್ಪರ್ಧೆಗೆ ಸಿದ್ಧ: ಸಿ.ಪಿ ಯೋಗೇಶ್ವರ್‌ 

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 6:55 IST
Last Updated 7 ಜನವರಿ 2022, 6:55 IST
   

ಚನ್ನಪಟ್ಟಣ: 'ಪಕ್ಷದ ವರಿಷ್ಠರು ಎಲ್ಲಿ ಸ್ಪರ್ಧೆ ಮಾಡು ಎನ್ನುತ್ತಾರೋ ಅಲ್ಲಿಂದ ಸ್ಪರ್ಧೆ ಮಾಡುವುದಕ್ಕೆ ಸಿದ್ದನಿದ್ದೇನೆ. ಒಂದು ವೇಳೆ ಕನಕಪುರದಿಂದ ಸ್ಪರ್ಧೆಮಾಡು ಎಂದರೂ ನಾನು ಸಿದ್ಧ’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ ಯೋಗೇಶ್ವರ್‌ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಗೇಶ್ವರ್‌, 1999 ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಶಿವಕುಮಾರ್ ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದರು. ಚನ್ನಪಟ್ಟಣದ ನೀರಾವರಿಗಾಗಿ ಬಿಜೆಪಿ ಸೇರಿದ ನಾನು 2013 ರಲ್ಲಿ ಬಿಜೆಪಿ ಮೂರು ಭಾಗವಾದಾಗ ನನ್ನ ಅಸ್ಥಿತ್ವಕ್ಕಾಗಿ ಮತ್ತೆ ಕಾಂಗ್ರೆಸ್‍ಗೆ ಬಂದೆ. ಆಗಲೂ ಇದೇ ವ್ಯಕ್ತಿ ಮತ್ತೊಮ್ಮೆ ಟಿಕೆಟ್‌ ತಪ್ಪಿಸಿದರು. ಕಳೆದ 25 ವರ್ಷಗಳಿಂದ ನನಗೆ ಕಿರುಕುಳ ಕೊಟ್ಟುಕೊಂಡು ಬಂದಿದ್ದಾರೆ. ಅವರ ಜೊತೆಗೆ ನಾನು ಹೇಗೆ ಹೋಗಲಿ. ಕಾಂಗ್ರೆಸ್‌ ಸೇರಲಾರೆ’ ಎಂದು ಹೇಳಿದರು.

‘ಪಕ್ಷ ಸೂಚಿಸಿದರೆ ನೂರಕ್ಕೆ ನೂರು ಕನಕಪುರದಿಂದ ಸ್ಪರ್ಧೆ ಮಾಡುತ್ತೇನೆ?‘ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಹಳೇ ಮೈಸೂರು ಭಾಗದ ಅನೇಕ ಮುಖಂಡರು ಬಿಜೆಪಿ ಸೇರ್ಪಡೆಗೆ ಉತ್ಸಾಹ ತೋರಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಟರಿಗೂ ಮಾಹಿತಿ ನೀಡಿದ್ದೇನೆ. ಅವರು ಅನುಮತಿ ನೀಡಿದರೆ ಅವರನ್ನೆಲ್ಲ ಪಕ್ಷಕ್ಕೆ ಕರೆತರುತ್ತೇನೆ ಎಂದರು. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದ್ದೆವು. ಆದರೆ ಮತದಾರರು ವೈಯಕ್ತಿಕ ನಿಲುವಿನ ಆಧಾರದಲ್ಲಿ ಮತದಾನ ಮಾಡಿದ ಕಾರಣ ಹಿನ್ನಡೆ ಆಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.