ADVERTISEMENT

ಸಂಕ್ರಾಂತಿ ಸಂಭ್ರಮ; ಎಳ್ಳು–ಬೆಲ್ಲ ಹಂಚಿ ಸಡಗರ

ದೇಗುಲಗಳಲ್ಲಿ ಭಕ್ತರ ದಟ್ಟಣೆ; ದನಗಳಿಗೆ ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು

​ಪ್ರಜಾವಾಣಿ ವಾರ್ತೆ
Published 15 ಜನವರಿ 2025, 6:46 IST
Last Updated 15 ಜನವರಿ 2025, 6:46 IST
ಸಂಕ್ರಾಂತಿ ಪ್ರಯುಕ್ತ ರಾಮನಗರ ತಾಲ್ಲೂಕಿನ ಪಾಲಭೋವಿದೊಡ್ಡಿಯಲ್ಲಿ ಮಂಗಳವಾರ ಸಂಜೆ ರೈತರು ತಮ್ಮ ಜಾನುವಾರುಗಳಿಗೆ ಕಿಚ್ಚು ಹಾಯಿಸಿದರು
ಸಂಕ್ರಾಂತಿ ಪ್ರಯುಕ್ತ ರಾಮನಗರ ತಾಲ್ಲೂಕಿನ ಪಾಲಭೋವಿದೊಡ್ಡಿಯಲ್ಲಿ ಮಂಗಳವಾರ ಸಂಜೆ ರೈತರು ತಮ್ಮ ಜಾನುವಾರುಗಳಿಗೆ ಕಿಚ್ಚು ಹಾಯಿಸಿದರು   

ರಾಮನಗರ: ಸೂರ್ಯ ತನ್ನ ಪಥವನ್ನು ಬದಲಿಸುವ ಮಕರ ಸಂಕ್ರಮಣದ ಶುಭ ದಿನವಾದ ಮಂಗಳವಾರ ಮಕರ ಸಂಕ್ರಾಂತಿ ಹಬ್ಬವನ್ನು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಮಕ್ಕಳು ಹಾಗೂ ಮಹಿಳೆಯರು ಹಬ್ಬದ ವಿಶೇಷವಾದ ಎಳ್ಳು–ಬೆಲ್ಲವನ್ನು ಅಕ್ಕಪಕ್ಕದವರಿಗೆ ಹಂಚಿ ಸಂಭ್ರಮಿಸಿದರು.

ಬೆಳಿಗ್ಗೆ ಮನೆಗಳ ಎದುರು ಬಗೆ ಬಗೆಯ ರಂಗೋಲಿ ಗಮನ ಸೆಳೆಯಿತು. ಮನೆಗಳಲ್ಲಿ ವಿಶೇಷ ಪೂಜೆ ಜರುಗಿತು. ಕಬ್ಬು ಸೇರಿದಂತೆ ತಾವು ಬೆಳೆದ ವಿವಿಧ ಬೆಳಗಳನ್ನಿಟ್ಟು ಪೂಜೆ ಮಾಡಿದರು. ಎಲ್ಲರೂ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಪಾಯಸ, ಕರ್ಚಿಕಾಯಿ ಸೇರಿದಂತೆ ವಿವಿಧ ರೀತಿಯ ಹಿಸಿ ತಿನಿಸಿ ಭೋಜನವನ್ನು ಕುಟುಂಬ ಸಮೇತ ಸವಿದರು.

ಗ್ರಾಮೀಣ ಭಾಗದ ರೈತರು ಜಾನುವಾರುಗಳನ್ನು ಸ್ವಚ್ಛಗೊಳಿಸಿ, ವಿಶೇಷವಾಗಿ ಸಿಂಗರಿಸಿ ಪೂಜಿಸಿದರು. ಸಂಜೆಯಾಗುತ್ತಿದ್ದಂತೆ ಕಿಚ್ಚು ಹಾಯಿಸಿ ಸಂಭ್ರಮಿಸಿದರು. ಬೆಂಕಿಯ ಕೆನ್ನಾಲಿಗೆ ಲೆಕ್ಕಿಸದ ಜಾನುವಾರುಗಳು ಕಿಚ್ಚು ಹಾದವು. ರಾಸುಗಳು ಆತಂಕದಿಂದ ಬೆಂಕಿಯನ್ನು ಹಾದು ಜಿಗಿಯುತ್ತಿದ್ದನ್ನು ಕಂಡ ಮಕ್ಕಳು ಕುಣಿದು ಕುಪ್ಪಳಿಸಿದರು.

ADVERTISEMENT

ನಗರದ ಹೊರಲವಯದ ಪಾಲಾಭೋವಿದೊಡ್ಡಿ ಗ್ರಾಮದಲ್ಲಿ ಸಂಕ್ರಾಂತಮ್ಮ ದೇವಿಗೆ ವಿಶೇಷ ಪೂಜೆ ಜರುಗಿತು. ಗ್ರಾಮದ ರೈತರು ತಮ್ಮ ಜಾನುವಾರುಗಳನ್ನು ಸಿಂಗರಿಸಿ ಸಂಕ್ರಾಂತಮ್ಮ ದೇವಿ ಸನ್ನಿಧಿಗೆ ಕರೆದೊಯ್ದು ನಮಿಸಿದರು. ನಂತರ, ಸಮೀಪದಲ್ಲೇ ಒಣ ಹುಲ್ಲ ಜೋಡಿಸಿ ಬೆಂಕಿ ಹಚ್ಚಿ, ರಾಸುಗಳಿಗೆ ಕಿಚ್ಚು ಹಾಯಿಸಿದರು. ನಂತರ ಮನೆಗಳಲ್ಲಿ ವಿಶೇಷ ಭೋಜನ ತಯಾರಿಸಿ ಎಡೆ ಇಟ್ಟು ಸವಿದರು.

ಟ್ರೂಪ್‌ಲೈನ್ ಸೇರಿದಂತೆ ಕೆಲವೆಡೆ ಸ್ಥಳೀಯರು ಸಾಮೂಹಿಕವಾಗಿ ಪೊಂಗಲ್ ತಯಾರಿಸಿ ಸಂಭ್ರಮಿಸಿದರು. ತಮ್ಮದೇ ವಿಭಿನ್ನ ಧಾರ್ಮಿಕ ವಿಧಿ–ವಿಧಾನಗಳನ್ನು ಆಚರಿಸಿದರು. ನಂತರ ಪೊಂಗಲ್‌ ಅನ್ನು ಎಲ್ಲರಿಗೂ ವಿತರಿಸಿ ತಾವೂ ಸವಿದರು.

ಖರೀದಿ ಸಂಭ್ರಮ: ಹಬ್ಬದ ಹಿನ್ನೆಲೆಯಲ್ಲಿ ಬೆಳಿಗ್ಗೆ ಎಪಿಎಂಸಿ ಮಾರುಕಟ್ಟೆ ಹಾಗೂ ಕೆಂಗಲ್ ಆಂಜನೇಯ ವೃತ್ತದಲ್ಲಿ ಜನದಟ್ಟಣೆ ಕಂಡುಬಂತು. ಹೂವು, ಹಣ್ಣು, ಮಾವಿನ ಎಲೆ, ಬಾಳೆ ದಿಂಡು, ಕಬ್ಬು, ಎಳ್ಳು, ಬೆಲ್ಲ, ಜಾನುವಾರು ಸಿಂಗರಿಸುವ ವಸ್ತುಗಳು, ತರಕಾರಿ ಸೇರಿದಂತೆ ಹಬ್ಬದ ಸಾಮಗ್ರಿ ಹಾಗೂ ಇತರ ವಸ್ತುಗಳನ್ನು ಜನರು ಖರೀದಿಸಿದರು.

ಸಂಕ್ರಾಂತಿ ಪ್ರಯುಕ್ತ ರಾಮನಗರ ತಾಲ್ಲೂಕಿನ ಪಾಲಭೋವಿದೊಡ್ಡಿಯಲ್ಲಿ ರೈತರು ತಮ್ಮ ಜಾನುವಾರುಗಳಿಗೆ ವಿಶೇಷ ಅಲಂಕಾರ ಮಾಡಿದ್ದರು
ಸಂಕ್ರಾಂತಿ ಪ್ರಯುಕ್ತ ರಾಮನಗರದ ಅರ್ಕಾವತಿ ಬಡಾವಣೆಯಲ್ಲಿ ಎಳ್ಳು–ಬೆಲ್ಲ ಹಾಗೂ ಕಬ್ಬು ವಿತರಿಸಿದ ಚಿಣ್ಣರು

ದೇಗುಲಗಳಲ್ಲಿ ಭಕ್ತರ ದಂಡು

ಹಬ್ಬದ ಪ್ರಯಕ್ತ ದೇವಾಲಯಗಳಲ್ಲಿ ಬೆಳಿಗ್ಗೆ ವಿಶೇಷ ಪೂಜೆ ಜರುಗಿತು. ನಗರದ ಚಾಮುಂಡೇಶ್ವರಿ ದೇವಸ್ಥಾನ ಬಲಮುರಿ ಗಣಪತಿ ಪಂಚಮುಖಿ ಆಂಜನೇಯ ದೇವಸ್ಥಾನ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಪಂಚಮುಖಿ ಆಂಜನೇಯ ದೇವಸ್ಥಾನ ಮಹದೇಶ್ವರ ದೇವಾಲಯ ಬನ್ನಿ ಮಹಾಂಕಾಳಿ ದೇವಸ್ಥಾನ ಸೇರಿದಂತೆ ಬಹುತೇಕ ದೇವಸ್ಥಾನಗಳು ದಿನವಿಡೀ ಭಕ್ತರಿಂದ ತುಂಬಿದ್ದವು. ಮನೆಯಲ್ಲಿ ಪೂಜೆ ಮುಗಿಸಿದ ಬಳಿಕ ಕುಟುಂಬದವರು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ವಿಶೇಷ ಪೂಜೆ ಮಾಡಿಸಿ ಪ್ರಸಾದ ಸವಿದರು. ಭಕ್ತರ ದಟ್ಟಣೆ ಹೆಚ್ಚಾಗಿದ್ದರಿಂದ ಕೆಲ ದೇವಸ್ಥಾನಗಳಲ್ಲಿ ಜನ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಸಂಕ್ರಾಂತಿ ಹಬ್ಬದ ಮಹತ್ವ ಸಾರುವ ಹಾಗೂ ದೇವರನ್ನು ಕೊಂಡಾಡುವ ಗೀತೆಗಳು ದೇವಾಲಯಗಳಲ್ಲಿ ಮೊಳಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.