
ರಾಮನಗರ: ‘ಜಿಲ್ಲೆಯ ಕನಕಪುರದಲ್ಲಿರುವ ರೂರಲ್ ಕಾಲೇಜಿನಲ್ಲಿ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ಸುಮಾರು ₹61 ಲಕ್ಷ ವಿದ್ಯಾರ್ಥಿವೇತನ ನೀಡದೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ಕಾಲೇಜಿನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ರಾಜ್ ಮೌರ್ಯ ಆಗ್ರಹಿಸಿದರು.
‘ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಕಳೆದ ಹತ್ತು ವರ್ಷಗಳಿಂದ ವಿದ್ಯಾರ್ಥಿವೇತನ ನೀಡದೆ ವಂಚಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಕಾಲಕ್ಕೆ ವಿದ್ಯಾರ್ಥಿವೇತನ ಬಿಡುಗಡೆ ಮಾಡಿದರೂ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಪಾವತಿಸಿಲ್ಲ. ಈ ಕುರಿತು ಡಿಸಿಆರ್‌ಇ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ಕೂಡ ದಾಖಲಾಗಿದೆ’ ಎಂದು ನಗರದಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘2015ರಿಂದ 2022ರವರೆಗೆ ಕಾಲೇಜಿನವರು ವಿದ್ಯಾರ್ಥಿವೇತನವನ್ನು ತಮ್ಮ ಬ್ಯಾಂಕ್ ಖಾತೆಯಲ್ಲೇ ಉಳಿಸಿಕೊಂಡು, ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಆ ಮೂಲಕ, ಕಾಲೇಜು ಆಡಳಿತ ಮಂಡಳಿ ಪರಿಶಿಷ್ಟರ ವಿರೋಧಿ ಧೋರಣೆ ಪ್ರದರ್ಶಿಸಿದೆ. ಈ ಕುರಿತು ಕಾಲೇಜು ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಉಸ್ತುವಾರಿ ಟಿ. ಗೋಪಿ ಮಾತನಾಡಿ, ‘ವಿದ್ಯಾರ್ಥಿವೇತನ ದುರುಪಯೋಗಕ್ಕೆ ಸಂಬಂಧಿಸಿದಂತೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಂಬಂಧಪಟ್ಟ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಬೇಕು. ₹61 ಲಕ್ಷವನ್ನು ಬಡ್ಡಿ ಸಮೇತ ವಸೂಲಿ ಮಾಡಿ ವಿದ್ಯಾರ್ಥಿಗಳಿಗೆ ವಿತರಿಸಬೇಕು’ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಮಲ್ಲವೀರಯ್ಯ, ಗಣೇಶ್, ನಂಜುಂಡಯ್ಯ, ಗುರುಬಸಪ್ಪ, ಮಂಜು, ದಿಲೀಪ್ ಕುಮಾರ್, ಲೋಕೇಶ್, ಕೃಷ್ಣಮೂರ್ತಿ ಕ್ಯಾಸಾಪುರ, ಸೃಜನ್ ಕುಮಾರ್ ಹಾಗೂ ಇತರರು ಇದ್ದರು.
‘ಹಣ ದುರ್ಬಳಕೆಯಾಗಿಲ್ಲ’
‘ಪರಿಶಿಷ್ಟ ಮಕ್ಕಳ ವಿದ್ಯಾರ್ಥಿವೇತನವನ್ನು ಚೆಕ್ ಮೂಲಕ ಪಾವತಿಸಲಾಗಿದೆ. ಯಾರೂ ವಿದ್ಯಾರ್ಥಿವೇತನ ಪಡೆದಿಲ್ಲವೊ ಅವರ ಮೊತ್ತವನ್ನು ಸರ್ಕಾರಕ್ಕೆ ಹಿಂದಿರುಗಿಸಲಾಗಿದೆ. ಟ್ಯೂಷನ್ ಶುಲ್ಕವನ್ನು ಮಾತ್ರ ಕಾಲೇಜು ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ. ಅದನ್ನೂ ಮೀರಿ ಏನಾದರೂ ವ್ಯತ್ಯಾಸವಾಗಿದ್ದರೆ ಸರಿಪಡಿಸಲಾಗುವುದು ’ ಎಂದು ರೂರಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎಚ್.ಕೆ. ಶ್ರೀಕಂಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.