
ಚನ್ನಪಟ್ಟಣ: ಕಳೆದ ನಾಲ್ಕು ತಿಂಗಳಿನಿಂದ ಸ್ಥಗಿತವಾಗಿದ್ದ ನಗರದ ಶೆಟ್ಟಿಹಳ್ಳಿ ಕೆರೆ ಪುನಃಶ್ಚೇತನ ಕಾಮಗಾರಿ ಪುನರಾರಂಭವಾಗಿದೆ. ಸೋಮವಾರ ಹಿಟಾಚಿ, ಜೆಸಿಬಿ ಯಂತ್ರಗಳು ಕೆರೆ ಅಂಗಳವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಿದವು.
ನಗರದ ಮಧ್ಯಭಾಗದಲ್ಲಿದ್ದ ಕೆರೆಯಲ್ಲಿ ಕೊಳಚೆ ತುಂಬಿ, ಜೋಂಡು ಬೆಳೆದು, ಕೆರೆ ಅಂಗಳ ಒತ್ತುವರಿಯಾಗಿದ್ದ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ಸಿಎಸ್‌ಆರ್ ಅನುದಾನದಲ್ಲಿ ₹1.25ಕೋಟಿ ವೆಚ್ಚದಲ್ಲಿ 2025ರ ಜುಲೈ 14ರಂದು ಕೆರೆಯನ್ನು ಪುನಃಶ್ಚೇತನಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಲೇಕ್ ಮ್ಯಾನ್ ಖ್ಯಾತಿಯ ಕೊಪ್ಪಳ ಮೂಲದ ಆನಂದ್ ಅವರ ನೇತೃತ್ವದಲ್ಲಿ ಕಾಮಗಾರಿ ಆರಂಭವಾಗಿತ್ತು.
ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯೊಂದಿಗೆ ಆರಂಭವಾದ ಕಾಮಗಾರಿ ಎರಡು ತಿಂಗಳು ಕಾಲ ಬಿರುಸಿನಿಂದ ನಡೆದು ನಂತರ ಹಠಾತ್ತಾನೆ ಸ್ಥಗಿತವಾಗಿತ್ತು. ಸತತ ನಾಲ್ಕು ತಿಂಗಳು ಕಾಲ ಕಾಮಗಾರಿ ನಿಂತಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಸೋಮವಾರ (ಜ.5) ಸಂಚಿಕೆಯಲ್ಲಿ ವಿವರವಾದ ವರದಿ ಪ್ರಕಟವಾಗಿತ್ತು. ನಗರಸಭೆ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಕಾಮಗಾರಿ ಪುನರಾರಂಭಿಸಿದ್ದಾರೆ.
ಮೊದಲು ಮಳೆಗಾಲದ ಹಿನ್ನೆಲೆಯಲ್ಲಿ ಕಾಮಗಾರಿ ನಿಲ್ಲಿಸಲಾಗಿತ್ತು. ನಂತರ ಕೆಲವು ತಾಂತ್ರಿಕ ತೊಂದರೆಗಳಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗಿರಲಿಲ್ಲ. ಈಗ ಕಾಮಗಾರಿ ಪುನರಾರಂಭವಾಗಿದೆ. ಕೆರೆ ಪುನಃಶ್ಚೇತನ ಕಾರ್ಯ ಭರದಿಂದ ಸಾಗಲಿದೆ ಎಂದು ನಗರಸಭೆ ಪೌರಾಯುಕ್ತ ಮಹೇಂದ್ರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.