
ಸ್ವಚ್ಛವಾದ ನಂತರ ಶಿವನ ದೇವಸ್ಥಾನ
ಚನ್ನಪಟ್ಟಣ: ತಾಲ್ಲೂಕಿನ ಸಿಂಗರಾಜಪುರ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಮಣ್ಣಿನಲ್ಲಿ ಹೂತುಹೋಗಿದ್ದ ಶಿವನ ದೇವಸ್ಥಾನಕ್ಕೆ ಗ್ರಾಮಸ್ಥರು ಹಾಗೂ ಗ್ರಾಮದ ಯುವಜನರು ಮರುಜೀವ ನೀಡಿದ್ದಾರೆ.
ಗ್ರಾಮದ ಹೊರವಲಯದಲ್ಲಿ ಭೂಹಳ್ಳಿ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಗದ್ದೆಬಯಲಿನಲ್ಲಿ ಇದ್ದ ಶಿವನ ದೇವಸ್ಥಾನ (ಲಿಂಗದ ಗುಡಿ) ನಿರ್ಲಕ್ಷ್ಯಕ್ಕೆ ಒಳಗಾಗಿ ಮಣ್ಣಿನಲ್ಲಿ ಹೂತುಹೋಗಿತ್ತು. ದೇವಸ್ಥಾನದ ಸುತ್ತಲೂ ಗಿಡಗಳು ಬೆಳೆದು ಗೋಪುರ ಮಾತ್ರ ಕಾಣುತ್ತಿತ್ತು. ದೇವಸ್ಥಾನ ಬಹುತೇಕ ಶಿಥಿಲಾವಸ್ಥೆ ತಲುಪಿತ್ತು.
ದೇವಸ್ಥಾನದ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ತೆರವು ಮಾಡಿದ ಗ್ರಾಮಸ್ಥರು ದೇವಸ್ಥಾನದ ಒಳಗೆ ತುಂಬಿದ್ದ ಮಣ್ಣನ್ನು ಹೊರತೆಗೆದಿದ್ದಾರೆ. ಒಳಗೆ ಶಿವಲಿಂಗ ಗೋಚರಿಸಿದೆ. ಹೊರಭಾಗದಲ್ಲಿ ಮುಕ್ಕಾದ ಬಸವ, ಶಾಸನ ಬರೆದಿರುವ ಕಲ್ಲು ದೊರೆತಿದೆ. ಜೊತೆಗೆ ದೇವಸ್ಥಾನಕ್ಕೆ ಸಂಬಂಧಿಸಿದ ಕೆಲವು ಐತಿಹಾಸಿಕ ಕುರುಹು ದೊರೆತಿವೆ.
ದೇವಸ್ಥಾನದ ಸುತ್ತಲೂ ಗದ್ದೆ ಬಯಲು, ತೋಟ ಇದೆ. ತಾತ ಮುತ್ತಾತನ ಕಾಲದಿಂದಲೂ ದೇವಸ್ಥಾನ ಹಾಗೆಯೆ ಇದೆ. ಇದೊಂದು ಶಿವನ ದೇವಸ್ಥಾನ. ಒಳಗೆ ಶಿವಲಿಂಗ ಇದೆ ಎಂದು ತಾತ ಹೇಳುತ್ತಿದ್ದರು. ಅವರ ಕಾಲದಲ್ಲಿಯೂ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿರಲಿಲ್ಲ. ಆಗಲೂ ದೇವಸ್ಥಾನ ಮಣ್ಣಿನಿಂದ ಮುಚ್ಚಿಹೋಗಿತ್ತು ಎಂದು ವೇಣುಗೋಪಾಲ ದೇವಸ್ಥಾನದ ಅರ್ಚಕ ಕೇಶವ ಅಯ್ಯಂಗಾರ್ ತಿಳಿಸಿದರು.
ವೇಣುಗೋಪಾಲ ದೇವಸ್ಥಾನದ ಜೀರ್ಣೋದ್ಧಾರ ಮಾಡುವ ನೆಪದಲ್ಲಿಯಾದರೂ ನೂರಾರು ವರ್ಷಗಳಿಂದ ಮಣ್ಣಿನಿಂದ ಹೂತುಹೋಗಿದ್ದ ಶಿವನ ದೇವಸ್ಥಾನಕ್ಕೆ ಮುಕ್ತಿ ದೊರೆತಿದೆ. ಇಡೀ ದೇವಸ್ಥಾನವನ್ನು ಸ್ವಚ್ಛ ಮಾಡಿ ರಥಸಪ್ತಮಿ ದಿನದಂದು ಪೂಜೆ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿಯೂ ದೇವಸ್ಥಾನದಲ್ಲಿ ಪೂಜಾ ಕಾರ್ಯ ಮುಂದುವರೆಸುತ್ತೇವೆ ಎಂದು ಗ್ರಾಮದ ಯುವಕರು ತಿಳಿಸಿದರು.
ಸಿಂಗರಾಜಪುರ ಗ್ರಾಮದಲ್ಲಿ ಶೃಂಗರಾಜ ಮಹರ್ಷಿ ತಪಸ್ಸು ಮಾಡಿದ್ದರು ಎನ್ನುವ ಪ್ರತೀತಿ ಇದೆ. ಅವರಿಂದಲೇ ಗ್ರಾಮಕ್ಕೆ ಶೃಂಗರಾಜಪುರ ಎಂದು ನಾಮಕರಣವಾಗಿ ಅದು ಈಗ ಸಿಂಗರಾಜಪುರ ಎಂದಾಗಿದೆ. ಗ್ರಾಮಕ್ಕೆ ಹೊಂದಿಕೊಂಡಂತೆ ಗವಿರಂಗ ದೇವಸ್ಥಾನ ಹಾಗೂ ಪ್ರಾಕೃತಿಕ ಸೌಂದರ್ಯದ ಬೆಟ್ಟವೂ ಇದೆ. ಈಗ ಮಣ್ಣಿನಿಂದ ಹೊರತೆಗೆದಿರುವ ಶಿವನ ದೇವಸ್ಥಾನ ಚೋಳರ ಕಾಲದ ದೇವಸ್ಥಾನ ಇರಬಹುದು. ದೇವಸ್ಥಾನದ ಬಳಿ ದೊರೆತಿರುವ ಶಾಸನ ಸೇರಿದಂತೆ ಹಲವು ಐತಿಹಾಸಿಕ ಸಾಕ್ಷಿಗಳನ್ನು ಪರಿಶೀಲನೆ ಮಾಡಿದರೆ ಇತಿಹಾಸ ಪತ್ತೆಯಾಗುತ್ತದೆ ಎಂದು ತಾಲ್ಲೂಕಿನ ಸಂಶೋಧಕ ವಿಜಯ್ ರಾಂಪುರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.