ADVERTISEMENT

ರಾಮನಗರ: ರಾಮದೇವರ ಬೆಟ್ಟದಲ್ಲಿ ‘ವೀರೂ’ ನೆನಪು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 2:29 IST
Last Updated 25 ನವೆಂಬರ್ 2025, 2:29 IST
<div class="paragraphs"><p>‘ಶೋಲೆ’ ಸಿನಿಮಾ ಶೂಟಿಂಗ್‌ನಲ್ಲಿ ಸಹ ನಟ ಅಮಿತಾಬ್ ಬಚ್ಚನ್ ಜೊತೆ ನಟ ಧರ್ಮೇಂದ್ರ</p></div>

‘ಶೋಲೆ’ ಸಿನಿಮಾ ಶೂಟಿಂಗ್‌ನಲ್ಲಿ ಸಹ ನಟ ಅಮಿತಾಬ್ ಬಚ್ಚನ್ ಜೊತೆ ನಟ ಧರ್ಮೇಂದ್ರ

   

ರಾಮನಗರ: ಬಾಲಿವುಡ್‌ನ ‘ಹೀ ಮ್ಯಾನ್’ ಖ್ಯಾತಿಯ ಹಿಂದಿ ಚಿತ್ರನಟ ಧರ್ಮೇಂದ್ರ ಅವರ ನೆನಪು ನಗರದ ಹೊರಲವಯದಲ್ಲಿರುವ ರಾಮಘಡ (ರಾಮದೇವರ ಬೆಟ್ಟ) ಬೆಟ್ಟದೊಂದಿಗೆ ಥಳುಕು ಹಾಕಿಕೊಂಡಿದೆ. ಭಾರತೀಯ ಚಿತ್ರರಂಗ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳಲ್ಲಿ ಒಂದಾದ ಧರ್ಮೇಂದ್ರ ಮತ್ತು ಅಮಿತಾಬ್‌ ಬಚ್ಚನ್ ನಟನೆಯ ಜನಪ್ರಿಯ ‘ಶೋಲೆ’ ಸಿನಿಮಾದ ಬಹುತೇಕ ಭಾಗ ಚಿತ್ರೀಕರಣ ನಡೆದಿರುವುದು ಇದೇ ಬೆಟ್ಟದಲ್ಲಿ.

ರಮೇಶ್ ಸಿಪ್ಪಿ ನಿರ್ದೇಶನದ ‘ಶೋಲೆ’ ಸಿನಿಮಾದಲ್ಲಿ ಧರ್ಮೇಂದ್ರ ಅವರ ವೀರು ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. 1973ರಲ್ಲಿ ಆರಂಭಗೊಂಡಿದ್ದ ಚಿತ್ರೀಕರಣ ಸುಮಾರು 30 ತಿಂಗಳು ನಡೆದಿತ್ತು. ಅಂತಿಮವಾಗಿ 1975ರ ಆ. 15ರಂದು ಬಿಡುಗಡೆಗೊಂಡು ಭಾರತೀಯ ಸಿನಿಮಾ ರಂಗದಲ್ಲಿ ಹಲವು ದಾಖಲೆಗಳನ್ನು ಬರೆಯಿತು.

ADVERTISEMENT

ಸಿನಿಮಾ ಚಿತ್ರೀಕರಣಕ್ಕಾಗಿ ಕುಟುಂಬ ಸಮೇತ ಬೆಂಗಳೂರಿಗೆ ಬಂದು ಉಳಿದುಕೊಳ್ಳುತ್ತಿದ್ದ ಧರ್ಮೇಂದ್ರ ಅವರು, ಶೂಟಿಂಗ್‌ ಸ್ಥಳದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಬೆಟ್ಟದ ಸಾಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದರು. ಸಿನಿಮಾ ಶೂಟಿಂಗ್ ನೋಡಲು ಬರುತ್ತಿದ್ದ ಜನರನ್ನು ನಗುಮೋಗದಿಂದ ಮಾತನಾಡಿಸುತ್ತಿದ್ದರು ಎಂದು ನೆನೆಯುತ್ತಾರೆ ‘ಶೋಲೆ’ ಸಿನಿಮಾ ಚಿತ್ರೀಕರಣ ವೀಕ್ಷಿಸಿದ್ದ ಕೆಲವರು.

ತಂದೆಗೆ ₹500 ಕೊಟ್ಟಿದ್ದರು: ‘ಮೇಸ್ತ್ರಿಯಾಗಿದ್ದ ನಮ್ಮ ತಂದೆ ವೆಂಕಟರಾಮಯ್ಯ ಅವರು ಸಹ ಶೋಲೆ ಸಿನಿಮಾದ ಚಿತ್ರೀಕರಣಕ್ಕೆ ಕೆಲಸ ಮಾಡಿದ್ದಾರೆ. ಅಂದು ನಮ್ಮ ಕುಟುಂಬದಲ್ಲಿದ್ದ 3 ಎತ್ತಿನಗಾಡಿಗಳನ್ನು ಶೂಟಿಂಗ್‌ಗೆ ಬಾಡಿಗೆ ಕೊಟ್ಟಿದ್ದ ಅವರು, ಶೂಟಿಂಗ್ ಸ್ಥಳದಲ್ಲಿನ ಇತರ ಕೆಲಸ– ಕಾರ್ಯಗಳಿಗೆ ಕಾರ್ಮಿಕರನ್ನು ಒದಗಿಸುವ ಕೆಲಸ ಮಾಡಿದ್ದರು. ಈ ವೇಳೆ, ಧರ್ಮೇಂದ್ರ ಅವರನ್ನು ಹತ್ತಿರದಿಂದ ಮಾತನಾಡಿಸಿ ಕಣ್ತುಂಬಿಕೊಂಡಿದ್ದರು’ ಎಂದು ವೆಂಕಟರಾಮಯ್ಯ ಅವರ ಪುತ್ರ ಬೆಟ್ಟಯ್ಯ ನೆನಪಿಸಿಕೊಂಡರು.

‘ಎಸ್‌ಎಸ್‌ಎಲ್‌ಸಿ ಓದಿದ್ದ ತಂದೆ ಮೇಸ್ತ್ರಿಯಾಗಿದ್ದರು. ಅವರಿಗೆ ಹಿಂದಿ ಭಾಷೆಯೂ ಬರುತ್ತಿದ್ದರಿಂದ, ಅವರಿಗೆ ಒಂದು ಸೀನ್‌ನಲ್ಲಿ ಡೈಲಾಗ್ ಹೇಳುವ ಅವಕಾಶ ಕೂಡ ಸಿಕ್ಕಿತ್ತು. ಬೆಟ್ಟದ ತಪ್ಪಲಿನಲ್ಲಿ ನಮ್ಮ ಜಮೀನಿತ್ತು. ಆ ಜಮೀನನ್ನ ಸಹ ಶೂಟಿಂಗ್‌ಗೆ ಬಳಸಿಕೊಂಡಿದ್ದರು. ಶೂಟಿಂಗ್ ಮುಗಿದ ಬಳಿಕ, ಧರ್ಮೇಂದ್ರ ಅವರು ನಮ್ಮ ತಂದೆಗೆ ₹500 ಭಕ್ಷೀಸು ಕೊಟ್ಟಿದ್ದರು. ಅದರಲ್ಲೇ ತಂದೆ ಮನೆಯೊಂದನ್ನು ಕಟ್ಟಿದ್ದರು. ಶೋಲೆ ನೆನಪಿನ ಆ ಮನೆಯನ್ನು ನಮ್ಮ ತಂದೆ ಇರುವವರೆಗೆ ಹಾಗೆಯೇ ಉಳಿಸಿಕೊಂಡಿದ್ದೆವು. ಇತ್ತೀಚೆಗೆ ಹೊಸ ಮನೆ ಕಟ್ಟುವ ಸಲುವಾಗಿ ಕೆಡವಿದ್ದೆವು’ ಎಂದು ಹೇಳಿದರು.

ಚಿತ್ರೀಕರಣ ನಡೆದ ಸಮಯದಲ್ಲಿ ಸಹ ನಟರು ಹಾಗೂ ಬಹುತೇಕ ತಂತ್ರಜ್ಞರು ಉಳಿದುಕೊಳ್ಳಲು ರಾಮನಗರದ ಕಲ್ಯಾಣ ಮಂಟಪವೊಂದರಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆ ಕಾಲದ ಸ್ಟಾರ್ ನಟರೆನಿಸಿದ್ದ ಧರ್ಮೇಂದ್ರ, ಅಮಿತಾಬ್‌ ಬಚ್ಚನ್, ಹೇಮಾಮಾಲಿನಿ ಸೇರಿದಂತೆ ಪ್ರಮುಖ ನಟರಿಗೆ ಬೆಂಗಳೂರಿನ ಪಂಚತಾರಾ ಹೋಟೆಲ್‍ನಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿತ್ತು.

ಬೆಂಗಳೂರಿನಿಂದ ಶೂಟಿಂಗ್‌ಗಾಗಿ ನಿತ್ಯ ಕಾರಿನಲ್ಲಿ ಬರುತ್ತಿದ್ದ ಧರ್ಮೇಂದ್ರ ಅವರು, ಸ್ಥಳದಲ್ಲಿ ತಮ್ಮನ್ನ ನೋಡಲು ಜಮಾಯಿಸುತ್ತಿದ್ದ ಅಭಿಮಾನಿಗಳತ್ತ ಆತ್ಮೀಯವಾಗಿ ಕೈ ಬೀಸುತ್ತಿದ್ದರು. ಕೆಲವರು ತಮ್ಮ ನೆಚ್ಚಿನ ನಟನನ್ನು ಮಾತನಾಡಿಸುವುದಕ್ಕಾಗಿ ಕಡೆಯವರೆಗೂ ಕಾಯುತ್ತಿದ್ದರು. ಅಂತಹವರಿಗೆ ಧರ್ಮೇಂದ್ರ ಅವರು ನಿರಾಸೆ ಮಾಡದೆ, ಕಾರು ಹತ್ತುವುದಕ್ಕೆ ಮುಂಚೆ ಒಂದೆರಡು ಮಾತನಾಡುತ್ತಿದ್ದರು‌ ಎಂದು ಶೂಟಿಂಗ್ ವೀಕ್ಷಿಸಿದ್ದ ಕೆಲವರು ಸ್ಮರಿಸುತ್ತಾರೆ.

‘ಶೋಲೆ’ ಸಿನಿಮಾ ಶೂಟಿಂಗ್‌ನಲ್ಲಿ ಸಹ ನಟ ಅಮಿತಾಬ್ ಬಚ್ಚನ್ ಜೊತೆ ನಟ ಧರ್ಮೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.