ರಾಮನಗರ/ಮಾಗಡಿ: ಜಿಲ್ಲೆಯಲ್ಲಿ ಸೋಮವಾರ ನಡೆದ ಎರಡು ಪ್ರತ್ಯೇಕ ಅವಘಡಗಳಲ್ಲಿ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಳೂರು–ಕನಕಪುರ ರಸ್ತೆಯಲ್ಲಿ ಠಾಣೆ ಬಳಿ ಕೆಎಸ್‌ಆರ್‌ಟಿಸಿ ಬಸ್ 2 ಬೈಕ್‌ಗೆ ಡಿಕ್ಕಿ ಹೊಡೆದು ಮೋರಿಗೆ ಪಲ್ಟಿಯಾಗಿದ್ದರಿಂದ, ಪಿಎಸ್‌ಐ ನಾಗರಾಜ್ (52) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅವರ ಪುತ್ರಿ ಕಾವ್ಯ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾವ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕನಕಪುರ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್, ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕ ದಾಟಿ ಎದುರಿಗೆ ಬರುತ್ತಿದ್ದ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಪಕ್ಕದ ಮೋರಿಗೆ ಪಲ್ಟಿಯಾಗಿದೆ. ಡಿಕ್ಕಿಯ ತೀವ್ರತೆಗೆ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕಗ್ಗಲಿಪುರ ಠಾಣೆ ಪೊಲೀಸರು ತಿಳಿಸಿದರು.
ಮೂವರ ದುರ್ಮರಣ: ತಾಲ್ಲೂಕಿನ ವೈ.ಜಿ. ಗುಡ್ಡ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಗಾರ್ವೆ ಬಾವಿ ನಿವಾಸಿಗಳಾದ ಮಧು (25), ರಾಘವಿ(22) ಹಾಗೂ ರಮ್ಯ(20) ಮೃತಪಟ್ಟಿದ್ದಾರೆ. ವೈ.ಜಿ. ಗುಡ್ಡ ಕಾಲೊನಿಯಲ್ಲಿರುವ ಮೃತ ರಮ್ಯ ಅವರ ಸಹೋದರಿ ದಿವ್ಯ ಅವರ ಮನೆಯಲ್ಲಿ ಹಬ್ಬವಿತ್ತು. ಹಾಗಾಗಿ, ಬೆಂಗಳೂರಿನಿಂದ ರಮ್ಯ ಸೇರಿದಂತೆ ಏಳು ಸಂಬಂಧಿಕರು ಭಾನುವಾರ ಮನೆಗೆ ಬಂದಿದ್ದರು.
ಸೋಮವಾರ ಬೆಳಿಗ್ಗೆ 11.30ರ ಸುಮಾರಿಗೆ ಊರಿನ ಬಳಿ ಇರುವ ಜಲಾಶಯದ ಹಿನ್ನೀರು ನೋಡಲು, ದಿವ್ಯ ಅವರ ಪತಿ ಸೋಮಶೇಖರ್ ಸೇರಿದಂತೆ 8 ಮಂದಿ ಭೇಟಿ ಹೋಗಿದ್ದರು. ಇಬ್ಬರು ಯುವತಿಯರು ಸೇರಿದಂತೆ 7 ಮಹಿಳೆಯರು ಕೈ ಹಿಡಿದುಕೊಂಡು ನೀರಿನಲ್ಲಿ ಆಟವಾಡುತ್ತಾ ಸ್ವಲ್ಪ ಮುಂದಕ್ಕೆ ಹೋಗಿದ್ದಾರೆ. ಆಗ ಆಳವಾದ ಜಾಗದಲ್ಲಿ ಮಧು ಕಾಲು ಕೆಸರಿನಲ್ಲಿ ಸಿಲುಕಿ ಮುಳುಗಲಾರಂಭಿಸಿದ್ದಾರೆ.
ಮಧು ನೆರವಿಗೆ ಮುಂದಾದ ಉಳಿದವರು ಸಹ ನೀರಿನಲ್ಲಿ ಮುಳುಗತೊಡಗಿದ್ದಾರೆ. ದಡದಲ್ಲಿದ್ದ ಸೋಮಶೇಖರ್ ಕೂಡಲೇ ನೀರಿಗೆ ಜಿಗಿದು ನಾಲ್ವರನ್ನು ರಕ್ಷಿಸಿದ್ದಾರೆ. ಅಷ್ಟೊತ್ತಿಗಾಗಲೇ ನೀರೊಳಗೆ ಮುಳುಗಿದ್ದ ಉಳಿದ ಮೂವರನ್ನು ಸಹ ಮೇಲಕ್ಕೆತ್ತಿ ದಡಕ್ಕೆ ಸಾಗಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ನೀರು ಕುಡಿದು ಉಸಿರುಗಟ್ಟಿದ್ದ ಮಧು, ರಾಘವಿ ಹಾಗೂ ರಮ್ಯ ಕೊನೆಯುಸಿರೆಳೆದಿದ್ದರು. ಮೃತರ ಪೈಕಿ ಮಧು ಮತ್ತು ರಾಘವಿ ಬೆಂಗಳೂರಿನಲ್ಲಿ ಪದವಿ ಓದುತ್ತಿದ್ದರು ಎಂದು ಮಾಗಡಿ ಠಾಣೆ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.