ADVERTISEMENT

ಕನಕಪುರದಲ್ಲಿ ಸರಳ ಮದುವೆಯ ಭಿನ್ನಪಥ

ಮದುವೆ ಹಣದಲ್ಲಿ ಆಶಾಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರಿಗೆ ಆಹಾರ ಧಾನ್ಯ ವಿತರಣೆ

ಬರಡನಹಳ್ಳಿ ಕೃಷ್ಣಮೂರ್ತಿ
Published 30 ಏಪ್ರಿಲ್ 2020, 20:15 IST
Last Updated 30 ಏಪ್ರಿಲ್ 2020, 20:15 IST
ಕೋಡಿಹಳ್ಳಿ ಗ್ರಾಮದಲ್ಲಿ ಕೆ.ಎಂ.ಮಾದೇಶ್‌ ಅವರು ಮಗಳ ಮದುವೆ ಸರಳವಾಗಿ ನೆರವೇರಿಸಿ ಉಳಿತಾಯ ಹಣದಲ್ಲಿ ಆಹಾರ ಧಾನ್ಯ ವಿತರಿಸಿದರು
ಕೋಡಿಹಳ್ಳಿ ಗ್ರಾಮದಲ್ಲಿ ಕೆ.ಎಂ.ಮಾದೇಶ್‌ ಅವರು ಮಗಳ ಮದುವೆ ಸರಳವಾಗಿ ನೆರವೇರಿಸಿ ಉಳಿತಾಯ ಹಣದಲ್ಲಿ ಆಹಾರ ಧಾನ್ಯ ವಿತರಿಸಿದರು   

ಕನಕಪುರ: ಅದ್ದೂರಿ ಮದುವೆ ಮೂಲಕ ಕೆಲವರು ಎಲ್ಲರ ಹುಬ್ಬೇರುವಂತೆ ಮಾಡುತ್ತಾರೆ. ಇನ್ನೂ ಕೆಲವರು ಸರಳ ಮದುವೆ ಮೂಲಕ ಸಮಾಜಕ್ಕೆ ಮಾದರಿಯಾಗಿ ನಿಲ್ಲುತ್ತಾರೆ. ಇದೇ ಹಾದಿಯಲ್ಲಿ ಸಾಗಿದ ವ್ಯಕ್ತಿಯೊಬ್ಬರು ಲಾಕ್‌ಡೌನ್ ಸಂದರ್ಭದಲ್ಲಿ ಭಿನ್ನಪಥ ತುಳಿದಿದ್ದಾರೆ.

ತಮ್ಮ ಮಗಳಿಗೆ ಸರಳವಾಗಿ ವಿವಾಹ ಮಾಡಿ ಉಳಿತಾಯದ ಹಣವನ್ನು ಕೊರೊನಾ ಸೇನಾನಿಗಳಂತೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತಯರಿಗೆ ಆಹಾರಧಾನ್ಯ ಮತ್ತು ಉಡುಗೂರೆಯಾಗಿ ನೀಡಲು ಸೀರೆಗಳ ಖರೀದಿಗೆ ವಿನಿಯೋಗಿಸಿ ಮಾದರಿ ಎನಿಸಿಕೊಂಡಿಕೊಂಡಿದ್ದಾರೆ.

ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್‌ ಹಿರಿಯ ಮುಖಂಡ ಕೆ.ಎಂ.ಮಾದೇಶ್‌ ಅವರು ತಮ್ಮ ಮಗಳ ಮದುವೆಯನ್ನು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಗುರುವಾರ ಬೆಳಿಗ್ಗೆ ನೆರವೇರಿಸಿದರು. ಅದರಲ್ಲಿ ಉಳಿತಾಯವಾದ ಹಣದಲ್ಲಿ 55 ಮಂದಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ಪಡಿತರ ಮತ್ತು ಸೀರೆ ಉಡುಗೊರೆಯಾಗಿ ನೀಡಿದ್ದಾರೆ.

ADVERTISEMENT

ಕೋಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ವೇಳೆ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಪೌರಕಾರ್ಮಿಕರು ಮತ್ತು ಕೆಲವು ನಿರ್ಗತಿಕರ ಕುಟುಂಬಗಳನ್ನು ಗುರುತಿಸಿ ನವ ವಧು – ವರರ ಸ‌ಮ್ಮುಖದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಜಯರತ್ನ ರಾಜೇಂದ್ರ ಮಾತನಾಡಿ, ಈ ಸರಳ ವಿವಾಹ ಸಮಾಜಕ್ಕೆ ಮಾದರಿ. ಕೊರೊನಾ ಸೇನಾನಿಗಳನ್ನು ಗುರುತಿಸಿ ಅವರನ್ನು ಗೌರವಿಸಿರುವುದು ಮೆಚ್ಚುವ ಕೆಲಸ. ಸಮಾಜದಲ್ಲಿ ಅಡಂಬರ ಮದುವೆಗೆ ಕಡಿವಾಣ ಹಾಕಿ ಸರಳ ಮದುವೆಗೆ ಆದ್ಯತೆ ನೀಡಬೇಕಾಗಿದೆ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್‌.ಎಂ.ಕೃಷ್ಣಮೂರ್ತಿ ಮಾತನಾಡಿ, ಸರಳ ವಿವಾಹ ಸಮಾಜದ ಹಿತದೃಷ್ಟಿಯಿಂದ ತುಂಬ ಒಳ್ಳೆಯದು. ಎಷ್ಟೋ ಜನರು ಆರ್ಥಿಕವಾಗಿ ಸಬಲರಲ್ಲದಿದ್ದರೂ ಸಂಬಂಧಿಕರು, ನೆರೆಹೊರೆ ಜನರ ಪರೋಕ್ಷ ಒತ್ತಡಕ್ಕೆ ಮಣಿದು ಸಾಲ ಮಾಡಿಯಾದರೂ ಮದುವೆ ಮಾಡುತ್ತಾರೆ. ಇಂತಹ ವ್ಯವಸ್ಥೆಗೆ ಕಡಿವಾಣ ಹಾಕಬೇಕಿದೆ ಎಂದರು.

ಕೊರೊನಾ ಕಾಲದಲ್ಲೂ ‌ಕುಟುಂಬವನ್ನು ಬದಿಗೊತ್ತಿ ಸಮಾಜದ ಪರವಾಗಿ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳನ್ನು ಗುರುತಿಸುವ ಹಾಗೂ ಗೌರವಿಸುವ ಕೆಲಸವನ್ನು ರಾಜಕೀಯ ಮುಖಂಡ ಮಾದೇಶ್‌ ಮಾಡಿದ್ದಾರೆ ಎಂದರು.

ಮಾದೇಶ್‌ ಮಾತನಾಡಿ, ಸರಳ ಮದುವೆ ವಿಷಯ ಪ್ರಸ್ತಾಪ ಬಂದಾಗ ‍ಪಿಡಿಒ ಕೃಷ್ಣಮೂರ್ತಿ ಆಶಾ ಕಾರ್ಯಕರ್ತೆಯರಿಗೆ ಸಹಾಯ ಮಾಡುವುದು ಒಳಿತು ಎಂದು ಸಲಹೆ ನೀಡಿದರು. ಅದರಂತೆ ನೆರವೇರಿಸಿರುವುದಾಗಿ ತಿಳಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಘು, ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್‌, ಮಾಜಿ ಅಧ್ಯಕ್ಷ ದುಂಡುಮಾದಯ್ಯ, ಹೋಬಳಿ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಷಣ್ಮುಖ, ಆರೋಗ್ಯ ಸಹಾಯಕಿಯರಾದ ಜಯಲಕ್ಷ್ಮಿ, ಪ್ರಮೀಳ, ಮುಖಂಡ ಅಬೀದ್‌, ಪಂಚಾಯಿತಿ ಸಿಬ್ಬಂದಿ ಶಿವಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.