ರಾಮನಗರ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೋಮವಾರದಿಂದ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲೆಯಲ್ಲಿ ಎರಡನೇ ದಿನವಾದ ಮಂಗಳವಾರವೂ ಸರ್ವರ್ ಮಧ್ಯಾಹ್ನದವರೆಗೆ ಕೈ ಕೊಟ್ಟಿತು. ಇದರಿಂದಾಗಿ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಹಾರೋಹಳ್ಳಿ ತಾಲ್ಲೂಕುಗಳಲ್ಲಿ ಸರ್ವರ್ ಸಮಸ್ಯೆ ಎದುರಾಯಿತು.
ಮೊದಲ ದಿನದ ಅಡಚಣೆಗಳ ಜೊತೆಗೆ ಎದುರಾದ ಮತ್ತಷ್ಟು ತಾಂತ್ರಿಕ ಅಡಚಣೆಗಳಿಂದಾಗಿ ಆಮೆಗತಿಯಲ್ಲಿ ದಿನದ ಅಂತ್ಯಕ್ಕೆ ಕೇವಲ 240 ಮನೆಗಳನ್ನಷ್ಟೇ ಸಮೀಕ್ಷೆ ಮಾಡಲು ಸಾಧ್ಯವಾಯಿತು. ಹದಿನೈದು ದಿನದಲ್ಲೇ ಮುಗಿಸಬೇಕೆಂಬ ಗಡುವಿಗೆ ಅನುಗುಣವಾಗಿ ನಡೆಯಬೇಕಿದ್ದ ಮನೆಗಳ ಸಮೀಕ್ಷೆ ಎರಡನೇ ದಿನ ಮೂರಂಕಿಯನ್ನು ಸಹ ದಾಟಲಿಲ್ಲ.
ಮಧ್ಯಾಹ್ನದವರೆಗೆ ಸಮಸ್ಯೆ: ಮೊದಲನೇ ದಿನ ಸಮೀಕ್ಷೆದಾರರಿಗೆ ಕಳಿಸಿದ್ದ ಸಮೀಕ್ಷೆಯ ಲಿಂಕ್‌ಗೆ ಬದಲಾಗಿ ಮಂಗಳವಾರ ಹೊಸ ಲಿಂಕ್ ಕಳಿಸಲಾಗಿತ್ತು. ಹಳೆ ಸ್ಮಾರ್ಟ್‌ಫೋನ್, ಆ್ಯಂಡ್ರಾಯ್ಡ್ 7ನೇ ಆವೃತ್ತಿ ಇಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಆ್ಯಪ್ ತೆರೆದುಕೊಳ್ಳಲಿಲ್ಲ. ಕೆಲ ಕ್ಷಣ ತೆರೆದುಕೊಂಡರೂ ಮಾಹಿತಿ ಅಪ್ಲೋಡ್ ಮಾಡಿದಾಗ ಸೇವ್ ಆಗಿ, ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಜನರೇಟ್ ಆಗುವುದು ವಿಳಂಬವಾಯಿತು ಎಂದು ಸಮೀಕ್ಷೆದಾರರು ಹಾಗೂ ಅಧಿಕಾರಿಗಳು ಹೇಳಿದರು.
ಬೆಳಿಗ್ಗೆ 10 ಗಂಟೆಯಿಂದ ಶುರುವಾದ ಈ ಸಮಸ್ಯೆ ಜಿಲ್ಲೆಯ ಬಹುತೇಕ ಸಮೀಕ್ಷೆದಾರರನ್ನು ಕಾಡಿತು. ಆ್ಯಪ್ ಮತ್ತು ಸರ್ವರ್ ಸಮಸ್ಯೆ ಯಾವಾಗ ಸರಿ ಹೋಗುತ್ತದೊ ಎಂದು ಮಧ್ಯಾಹ್ನದವರೆಗೆ ಸಮೀಕ್ಷೆದಾರರು ಕಾದು ಕುಳಿತರು. ಕಡೆಗೂ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ತಾಂತ್ರಿಕ ಸಮಸ್ಯೆ ನಿವಾರಣೆಯಾಯಿತು. ಬಳಿಕ, ಸಮೀಕ್ಷೆದಾರರು ಕೆಲ ಮನೆಗಳ ಸಮೀಕ್ಷೆಯನ್ನು ನಡೆಸಿ ಮನೆಯತ್ತ ಹೆಜ್ಜೆ ಹಾಕಿದರು ಎಂದು ತಿಳಿಸಿದರು.
ಬ್ಲಾಕ್ ಗೊಂದಲ: ಸಮೀಕ್ಷೆದಾರರಿಗೆ ತಮ್ಮ ಬ್ಲಾಕ್‌ಗಳ ಕುರಿತ ಗೊಂದಲವೂ ಮುಂದುವರಿಯಿತು. ಅಲ್ಲದೆ, ಬ್ಲಾಕ್‌ಗಳಲ್ಲಿರುವ ಮನೆಗಳ ಸಂಖ್ಯೆಯಲ್ಲೂ ಏರುಪೇರಾಯಿತು. ಕೆಲವರಿಗೆ ಎರಡಂಕಿಯ ಮನೆಗಳು ಸಿಕ್ಕದರೆ, ಉಳಿದವರು ಮೂರಂಕಿಯಷ್ಟು ಮನೆಗಳನ್ನು ಸಮೀಕ್ಷೆ ಮಾಡಬೇಕಾಗಿದೆ. ಈ ಸಂಖ್ಯಾ ವ್ಯತ್ಯಾಸವನ್ನು ಸರಿಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಮೀಕ್ಷೆ ಶುರುವಾದರೂ ಎಲ್ಲಾ ತಾಲ್ಲೂಕುಗಳಲ್ಲಿ ಕೆಲ ಸಮೀಕ್ಷೆದಾರರಿಗೆ ಇನ್ನೂ ಕಿಟ್ ತಲುಪಿರಲಿಲ್ಲ. ಮಂಗಳವಾರ ಅಂತಹವರಿಗೆ ಕಿಟ್ ತಲುಪಿಸಲಾಯಿತು. ಆದರೂ, ರಾಮನಗರ ಸೇರಿದಂತೆ ಇನ್ನೂ ಕೆಲವೆಡೆ ಕಿಟ್‌ಗಳ ಕೊರತೆ ಇದೆ. ಮತ್ತಷ್ಟು ಕಿಟ್‌ಗಳನ್ನು ತರಿಸಿ ವಿತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನ ತಾಂತ್ರಿಕ ಸಮಸ್ಯೆಗಳು ಸ್ವಲ್ಪ ಕಡಿಮೆಯಾಗಿದ್ದು 240 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಸಮೀಕ್ಷೆದಾರರಿಗೆ ಎದುರಾಗಿರುವ ಗೊಂದಲಗಳು ಸಹ ಪರಿಹಾರವಾಗಿದ್ದು ಬುಧವಾರದಿಂದ ಸಮೀಕ್ಷೆಯು ಸರಾಗವಾಗಿ ನಡೆಯಲಿದೆ ಬಿಲಾಲ್ ಮೊಹಮ್ಮದ್ ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಜಿಲ್ಲಾಮಟ್ಟದ ಸಹಾಯವಾಣಿ ಪ್ರಾರಂಭ
ಸಮೀಕ್ಷೆಯ ಕುರಿತು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ: 8296863069 973147284 ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಸಂಖ್ಯೆಗಳಿಗೆ ಕರೆ ಮಾಡಿ ಸಮೀಕ್ಷೆ ಕುರಿತು ತಮ್ಮ ದೂರು ಆಕ್ಷೇಪಣೆ ಸಲಹೆ ಇತ್ಯಾದಿಗಳನ್ನು ನೀಡಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.