ADVERTISEMENT

ಸೆರೆ ಸಿಕ್ಕಿದ್ದ ಸಲಗ ಮತ್ತೆ ಪರಾರಿ!; ಸೆರೆಗಾಗಿ ಪುನಃ ಕಾರ್ಯಾಚರಣೆ:

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 21:52 IST
Last Updated 17 ಆಗಸ್ಟ್ 2022, 21:52 IST
ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯ ಕಾರ್ಯಾಚರಣೆಯಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ಒಂಟಿ ಸಲಗ
ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯ ಕಾರ್ಯಾಚರಣೆಯಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ಒಂಟಿ ಸಲಗ   

ಚನ್ನಪಟ್ಟಣ: ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದ ಕಾಡನಕುಪ್ಪೆ ಗ್ರಾಮದ ಬಳಿ ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಜ್ಞೆತಪ್ಪಿ ಸೆರೆ ಸಿಕ್ಕಿದ್ದ ಒಂಟಿ ಸಲಗವೊಂದು ಕೊನೆಕ್ಷಣದಲ್ಲಿ ಮತ್ತೆ ಎಚ್ಚರಗೊಂಡು ಕಾಡಿಗೆ ಪರಾರಿಯಾಗಿದೆ.

ತಾಲ್ಲೂಕಿನಲ್ಲಿ ರೈತರಿಗೆ ಹಾವಳಿ ನೀಡುತ್ತಿದ್ದ ಎರಡು ಪುಂಡಾನೆಗಳನ್ನು ಸಾಕಾನೆಗಳ ಮೂಲಕ ಸೆರೆ ಹಿಡಿಯಲು ಮುಂದಾಗಿರುವ ಅರಣ್ಯ ಇಲಾಖೆ ಕಾರ್ಯಪಡೆಯ ತಂಡ, ಈಗಾಗಲೇ ತಾಲ್ಲೂಕಿನ ಬಿ.ವಿ.ಹಳ್ಳಿ ಬಳಿಯ ಅರಣ್ಯದಲ್ಲಿ ಒಂದು ಪುಂಡಾನೆಯನ್ನು ಸೆರೆ ಹಿಡಿದಿದೆ.

ಮತ್ತೊಂದು ಪುಂಡಾನೆಯ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದ ತಂಡಕ್ಕೆ ಬುಧವಾರ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಪುಂಡಾನೆ ಸಿಕ್ಕಿತ್ತು. ಅದಕ್ಕೆ ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಿ ಪ್ರಜ್ಞೆ ತಪ್ಪಿಸಲಾಗಿತ್ತು.

ADVERTISEMENT

ಹತ್ತು ನಿಮಿಷ ಅರಣ್ಯದಲ್ಲಿ ತಿರುಗಾಡಿ ಕೆಳಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಆನೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಗ್ಗ, ಸರಪಳಿಯಿಂದ ಬಂಧಿಸಲು ಮುಂದಾಗಿದೆ. ಆದರೆ, ಈ ವೇಳೆ ಆನೆಗೆ ಪ್ರಜ್ಞೆ ಬಂದು ದಿಢೀರನೆ ಮೇಲೆದ್ದು ಕಾಡಿನಲ್ಲಿ ಪರಾರಿಯಾಯಿತು ಎಂದು ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದ ಪುಂಡಾನೆಯ ಸುತ್ತಮುತ್ತ ಇಲಾಖೆಯ ಸಿಬ್ಬಂದಿ ನಿಂತಿದ್ದಾಗಲೇ ಅದು ಎಚ್ಚರಗೊಂಡಿದೆ. ಈ ವೇಳೆ ಗಾಬರಿಗೊಂಡ ಸಿಬ್ಬಂದಿ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ದೂರ ಓಡಿದ್ದಾರೆ. ಸ್ಥಳದಲ್ಲಿ 5 ಸಾಕಾನೆಗಳು ಇದ್ದ ಕಾರಣ ಕಾಡಾನೆ ಭಯಗೊಂಡು ಅರಣ್ಯ ಪ್ರದೇಶದ ಒಳಗೆಓಡಿಹೋಗಿದೆ.

ಇಲ್ಲದಿದ್ದರೆ ಅದು ಸಿಬ್ಬಂದಿಯ ಮೇಲೆ ದಾಳಿ ಮಾಡುವ ಸಾಧ್ಯತೆ ಇತ್ತು. ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳುತಿಳಿಸಿದ್ದಾರೆ.

ಸರಿಯಾದ ಪ್ರಮಾಣದ ಅರೆವಳಿಕೆ ಮದ್ದು ಅದರ ದೇಹಕ್ಕೆ ಸೇರದೆ ಇರುವುದೇ, ಅದು ಎಚ್ಚರಗೊಳ್ಳಲು ಕಾರಣವಾಗಿದೆ. ಮದ್ದಿನ ಪ್ರಮಾಣದ ಅಂದಾಜು ಸರಿಯಾಗಿ ಸಿಗದ ಕಾರಣ ಕಾಡಾನೆಗೆ ಬೇಗ ಎಚ್ಚರವಾಗಿದೆ. ಈ ಕಾಡಾನೆಯನ್ನು ಹಿಡಿಯಲು ಗುರುವಾರ ಮತ್ತೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.