ADVERTISEMENT

ಕೇಂದ್ರ ಬಜೆಟ್ | ರಾಮನಗರ: ಹೂಡಿಕೆ–ಉದ್ಯೋಗ ಸೃಷ್ಟಿಗೆ ಪೂರಕ ಬಜೆಟ್; ಪ್ರಶಾಂತ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 5:22 IST
Last Updated 2 ಫೆಬ್ರುವರಿ 2026, 5:22 IST
ಕೆ.ಎಸ್. ಪ್ರಶಾಂತ್, ಪ್ರಧಾನ ಕಾರ್ಯದರ್ಶಿ, ಬೆಂಗಳೂರು ದಕ್ಷಿಣ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
ಕೆ.ಎಸ್. ಪ್ರಶಾಂತ್, ಪ್ರಧಾನ ಕಾರ್ಯದರ್ಶಿ, ಬೆಂಗಳೂರು ದಕ್ಷಿಣ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ   

ರಾಮನಗರ: ಕೇಂದ್ರ ಸರ್ಕಾರದ ಬಜೆಟ್ ತಂತ್ರಜ್ಞಾನ ಮತ್ತು ಉತ್ಪಾದನಾ ವಲಯಕ್ಕೆ ಹೆಚ್ಚಿನ ಒತ್ತು ನೀಡಿರುವುದು ಸ್ವಾಗತಾರ್ಹ. ಇಂಡಿಯಾ ಸೆಮಿ ಕಂಡಕ್ಟರ್ ಮಿಷನ್ 2.0, ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಹೆಚ್ಚುವರಿ ಹೂಡಿಕೆ, ಟೆಕ್ಸ್‌ಟೈಲ್ಸ್ ಕ್ಷೇತ್ರಕ್ಕೆ ಸಮಗ್ರ ಕಾರ್ಯಕ್ರಮ, ಕೈಗಾರಿಕಾ ಕ್ಲಸ್ಟರ್‌ಗಳ ಅಭಿವೃದ್ಧಿ ಹಾಗೂ ಹೈ ಸ್ಪೀಡ್ ರೈಲು ಕಾರಿಡಾರ್‌ಗಳಂತಹ ಮೂಲಸೌಕರ್ಯ ಯೋಜನೆಗಳು ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗಲಿವೆ.

ಆದರೆ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ (ಎಂಎಸ್‌ಎಂಇ) ಹಾಗೂ ಸಣ್ಣ ವ್ಯಾಪಾರಿಗಳಿಗೆ ನೇರ ತೆರಿಗೆ ರಿಯಾಯಿತಿ, ಸುಲಭ ಸಾಲ ಸೌಲಭ್ಯ ಹಾಗೂ ತ್ವರಿತ ಹಣಕಾಸು ಬೆಂಬಲವನ್ನು ಇನ್ನಷ್ಟು ನೀಡಿದ್ದರೆ ನೆಲಮಟ್ಟದ ಉದ್ಯಮಿಗಳಿಗೆ ಹೆಚ್ಚು ಪ್ರಯೋಜನವಾಗುತ್ತಿತ್ತು.

ಸಣ್ಣ ಉದ್ಯಮಗಳಿಗೆ ಹೆಚ್ಚುವರಿ ಸಹಾಯ ಅಗತ್ಯವನ್ನು ಈ ಬಜೆಟ್ ಪೂರೈಸಿಲ್ಲ ಎಂಬುದು ಎದ್ದು ಕಾಣುತ್ತದೆ. ಆದರೂ, ಭವಿಷ್ಯದ ಭಾರತವನ್ನು ಸ್ಪರ್ಧಾತ್ಮಕ ದೃಷ್ಟಿಯಿಂದ ಕಟ್ಟಲು ಈ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಲಾಗಿದೆ. ಹಾಗಾಗಿ, ಇದು ಅಭಿವೃದ್ಧಿ ಕೇಂದ್ರೀಕೃತ ಮತ್ತು ಭವಿಷ್ಯಮುಖಿ ಬಜೆಟ್ ಎನ್ನಬಹುದು.

ADVERTISEMENT

ಈ ಬಜೆಟ್‌ನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಗೆ ಪ್ರತ್ಯೇಕ ಯೋಜನೆ ಅಥವಾ ಅನುದಾನಗಳಿಲ್ಲದಿದ್ದರೂ, ರಾಷ್ಟ್ರಮಟ್ಟದ ಹಲವು ಯೋಜನೆಗಳಿಂದ ಜಿಲ್ಲೆಯ ಪ್ರಮುಖ ಕೈಗಾರಿಕೆಗಳು ಮತ್ತು ಯುವಜನತೆಗೆ ನೇರ ಹಾಗೂ ಪರೋಕ್ಷ ಲಾಭ ನೀಡಲಿವೆ. ಆ ಪೈಕಿ, ಕೆಲವು ಹೀಗಿವೆ.

ಆಟಿಕೆ ಕೈಗಾರಿಕೆ: ರಾಷ್ಟ್ರೀಯ ಆಟಿಕೆ ಕಾರ್ಯಯೋಜನೆಯಡಿ ಉತ್ಪಾದನಾ ಕ್ಲಸ್ಟರ್‌ಗಳಿಗೆ ಬೆಂಬಲ ನೀಡಲಾಗಿದೆ. ‘ಮೇಕ್ ಇನ್ ಇಂಡಿಯಾ’ ಉತ್ತೇಜನದಿಂದ ರಫ್ತು ಅವಕಾಶಗಳ ಹೆಚ್ಚಳಕ್ಕೆ ಆದ್ಯತೆ ಸಿಕ್ಕಿದೆ. ಸ್ಥಳೀಯ ಕಲಾವಿದರು ಮತ್ತು ಎಂಎಸ್‌ಎಂಇ ಘಟಕಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಗೆ ಅವಕಾಶ ಕಲ್ಪಿಸಲಾಗಿದೆ. ಇದರ ಪ್ರಯೋಜನವು ಬೊಂಬೆನಾಡು ಖ್ಯಾತಿಯ ಚನ್ನಪಟ್ಟಣದ ಆಟಿಕೆ ಉದ್ಯಮಕ್ಕೆ ಸಿಗಲಿದೆ.

ರೇಷ್ಮೆ ಕ್ಷೇತ್ರ: ಕೇಂದ್ರ ರೇಷ್ಮೆ ಮಂಡಳಿ ಮೂಲಕ ಸಿಲ್ಕ್ ಸಮಗ್ರ–2 ಯೋಜನೆ, ಬೀಜದಿಂದ ಅಂತಿಮ ಉತ್ಪನ್ನದವರೆಗೆ ಮೌಲ್ಯದ ಜಾಲವನ್ನು ಸಂಪೂರ್ಣ ಬಲಪಡಿಸುವಿಕೆಗೆ ಒತ್ತು ನೀಡಲಾಗಿದೆ. ಇದರಿಂದ ರೇಷ್ಮೆ ಬೆಳೆ ನೆಚ್ಚಿಕೊಂಡಿರುವ ಜಿಲ್ಲೆಯ ಬೆಳೆಗಾರರಿಗೆ ಮತ್ತು ಉದ್ಯಮಗಳಿಗೆ ಅನುಕೂಲವಾಗಲಿದೆ. ರೀಲಿಂಗ್ ಮತ್ತು ವೀವಿಂಗ್ ಘಟಕಗಳಿಗೆ ಆದಾಯ ಹೆಚ್ಚಳಕ್ಕೂ ಇದು ಪೂರಕವಾಗಲಿದೆ.

ಉದ್ಯಮ ಬೆಳವಣಿಗೆ: ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಹಣಕಾಸು ಮತ್ತು ಕ್ಲಸ್ಟರ್ ಅಭಿವೃದ್ಧಿ ಯೋಜನೆಗಳು, ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಡಿಜಿಟಲ್ ಆರ್ಥಿಕ ವಲಯಗಳ ಸೃಷ್ಟಿಗೆ ಬಜೆಟ್ ಒತ್ತು ನೀಡಿದೆ. ಇದರಿಂದಾಗಿ ರಾಮನಗರದಲ್ಲಿರುವ ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಿಗೆ ಮತ್ತಷ್ಟು ಹೂಡಿಕೆ ಬರುವ ನಿರೀಕ್ಷೆ ಇದೆ.

– ಕೆ.ಎಸ್. ಪ್ರಶಾಂತ್, ಪ್ರಧಾನ ಕಾರ್ಯದರ್ಶಿ, ಬೆಂಗಳೂರು ದಕ್ಷಿಣ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.