ADVERTISEMENT

ಹಣ ಕೊಟ್ಟವರಿಗೆ ಸಚಿವ ಸ್ಥಾನ: ವಾಟಾಳ್‌ ನಾಗರಾಜು

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 16:41 IST
Last Updated 13 ಜನವರಿ 2021, 16:41 IST
ಐಜೂರು ವೃತ್ತದಲ್ಲಿ ವಾಟಾಳ್‌ ನಾಗರಾಜು ಪ್ರತಿಭಟನೆ ನಡೆಸಿದರು
ಐಜೂರು ವೃತ್ತದಲ್ಲಿ ವಾಟಾಳ್‌ ನಾಗರಾಜು ಪ್ರತಿಭಟನೆ ನಡೆಸಿದರು   

ರಾಮನಗರ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಂತ್ರಿಮಂಡಲವನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದು, ಹಣ ಕೊಟ್ಟವರನ್ನು ಮಂತ್ರಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜು ಆಕ್ಷೇಪ ವ್ಯಕ್ತಪಡಿಸಿದರು.

ನಗರದ ಐಜೂರು ವೃತ್ತದಲ್ಲಿ ಬುಧವಾರ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ಯಾರೇ ಒಬ್ಬರು ಸಚಿವರಾಗಬೇಕಾದರೆ ಪ್ರಾಮಾಣಿಕರು, ಯೋಗ್ಯರು ಹಾಗೂ ನಂಬಿಕಸ್ತ ಆಗಿರಬೇಕು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ವ್ಯಾಪಾರ ಮಾಡಿ ಶಾಸಕರನ್ನು ಖರೀದಿಸಿದರು. ಶಾಸನಸಭೆಗೆ ಪೊಲೀಸರನ್ನು ನುಗ್ಗಿಸಿದರು. ಸ್ಪೀಕರ್ ಕುರ್ಚಿಯನ್ನು ದುರುಪಯೋಗ
ಪಡಿಸಿಕೊಂಡರು. ಆ ಮೂಲಕ ಶಾಸನಸಭೆಗೆ ಇದ್ದಂತಹ ಗಾಂಭೀರ್ಯ, ಮೌಲ್ಯಗಳನ್ನು ಹಾಳು ಮಾಡಿದರು ಎಂದು ಕಿಡಿಕಾರಿದರು.ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ರೇಣುಕಾಚಾರ್ಯ ಹಾಗೂ ತಿಪ್ಪಾರೆಡ್ಡಿ ಅಂತಹವರಿಗೆ ಅವಕಾಶ ನೀಡಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಯಡಿಯೂರಪ್ಪ ತಮಗೆ ತೊಂದರೆ ನೀಡಿದರೆ ಪಕ್ಷ ಬಿಟ್ಟು ಹೋಗುವುದಾಗಿ ಹೈಕಮಾಂಡ್ ಅನ್ನೇ ಹೆದರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇದಕ್ಕೆ ಹೆದರಿರುವ ಬಿಜೆಪಿ ವರಿಷ್ಠರು ಮೌನ ವಹಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹಾಗೂ ಮುರುಗೇಶ್ ನಿರಾಣಿ ಹಣವಂತರು. ಸಿ.ಪಿ.ಯೋಗೇಶ್ವರ್ ಚುನಾವಣೆಯಲ್ಲಿ ಸೋತರೂ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದರು. ಶಾಸಕರನ್ನು ಬಾಂಬೆಯಲ್ಲಿಟ್ಟು, ಪಕ್ಷಾಂತರ ಮಾಡಿಸಿದರು. ಇಂತಹವರನ್ನು ಸೇರಿಸಿಕೊಳ್ಳುವುದರಿಂದ ಸಂಪುಟಕ್ಕೆ ಕಳಂಕ ಬರುತ್ತದೆ ಎಂದರು.

ADVERTISEMENT

ಚಾಮರಾಜನಗರ, ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳಿಗೆ ಸಚಿವ ಸ್ಥಾನದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಅಲ್ಲದೆ ಪ್ರಾಮಾಣಿಕರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟದಿಂದ
ಕೈಬಿಟ್ಟಿರುವುದು ಒಳ್ಳೆಯ ಸೂಚನೆ ಅಲ್ಲ ಎಂದರು.

ಕರುನಾಡ ಸೇನೆ ಸಂಘಟನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಮುಖಂಡರಾದ ಸಿ.ಎಸ್. ಜಯಕುಮಾರ್, ಕೆ.ಜಯರಾಮು, ತ್ಯಾಗರಾಜ್, ಗಾಯಿತ್ರಿ ಬಾಯಿ, ಪಾರ್ಥಸಾರಥಿ, ಬಾಲಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.