ನಿಖಿಲ್ ಕುಮಾರಸ್ವಾಮಿ
ರಾಮನಗರ: ‘ಜೊತೆಯಲ್ಲಿ ಇದ್ದುಕೊಂಡೇ ನನ್ನನ್ನು ಎರಡು ಬಾರಿ ಸೋಲಿಸಿ, ಕತ್ತು ಕೊಯ್ದಿದ್ದೀರಿ. ಈಗ ಲೋಕಸಭಾ ಚುನಾವಣೆಯ ಒಂದು ಸೋಲಿಗೆ ಇಷ್ಟೊಂದು ಹತಾಶರಾದರೆ ಹೇಗೆ?’– ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದು ಹೀಗೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಡಿಸಿಎಂ ಸವಾಲು ಕುರಿತು, ನಗರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸವಾಲುಗಳನ್ನು ಎದುರಿಸಿಯೇ ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಸಾಕಷ್ಟು ಸವಾಲು ನೋಡಿರುವ ಅವರು, ಹೆದರಿ ಓಡುವವರಲ್ಲ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಡಿಸಿಎಂ ಹತಾಶರಾಗಿರುವುದು ಅವರ ಮಾತುಗಳಲ್ಲಿ ಎದ್ದು ಕಾಣುತ್ತಿದೆ’ ಎಂದರು.
‘2019ರ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ನಿಮಗೆ ಸಂಪೂರ್ಣ ಸಹಕಾರ ಕೊಟ್ಟಿದ್ದರು. ನಿಮ್ಮ ಸಹೋದರ ಡಿ.ಕೆ. ಸುರೇಶ್ ಅವರನ್ನು ಗೆಲ್ಲಿಸಲು ಆಗ ನಾವು ಹೇಗೆ ನಡೆದುಕೊಂಡೆವು ಎಂಬುದು ಎಲ್ಲರಿಗೂ ಗೊತ್ತಿದೆ. ಆಗ ಕುಮಾರಸ್ವಾಮಿ ಅವರು ಕೊಟ್ಟ ಸಹಕಾರವನ್ನು ನೀವು ಸದಾ ನೆನಪಿಸಿಕೊಳ್ಳಬೇಕು’ ಎಂದು ತಿರುಗೇಟು ನೀಡಿದರು.
‘ಎಚ್‌ಡಿಕೆಗೆ ಕಾವೇರಿ ಸರ್ವಪಕ್ಷ ಸಭೆಗಿಂತ ಬಾಡೂಟವೇ ಮುಖ್ಯವಾಯಿತೇ?’ ಎಂಬ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿಕೆಗೆ, ‘ಮಂಡ್ಯದಲ್ಲಿ ಕುಮಾರಣ್ಣನ ಜನತಾದರ್ಶನ ಕಾರ್ಯಕ್ರಮಕ್ಕೆ ಸರ್ಕಾರ ಯಾವ ರೀತಿ ನಡೆದುಕೊಂಡಿತು ಎಂಬುದು ಗೊತ್ತಿದೆ. ಅಲ್ಲಿಗೆ ಅಧಿಕಾರಿಗಳು ಹೋಗದಂತೆ ಆದೇಶ ಮಾಡಿಸಿದ್ದು ಇದೇ ನಾಯಕರು’ ಎಂದು ತಿರುಗೇಟು ನೀಡಿದರು.
‘ರಾಜ್ಯ ಮತ್ತು ಕೇಂದ್ರ ಸರ್ಕಾರ ಪರಸ್ಪರ ಬಾಂಧವ್ಯ ಇಟ್ಟುಕೊಂಡು ಕೆಲಸ ಮಾಡಬೇಕು. ಆದರೆ, ರಾಜ್ಯ ಸರ್ಕಾರದ ವರ್ತನೆ ಹೇಗಿದೆ ಅಂತ ಎಲ್ಲರೂ ನೋಡುತ್ತಿದ್ದಾರೆ. ಬೇರೆ ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರ ಸಚಿವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅದಕ್ಕೆ ತದ್ವಿರುದ್ದ. ಈ ಸರ್ಕಾರವು ಸಚಿವರ ಸಲಹೆ ಮತ್ತು ಸೂಚನೆಗಳನ್ನು ತೆಗೆದುಕೊಳ್ಳುವ ಮಟ್ಟಕ್ಕಿಲ್ಲ’ ಎಂದರು.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರು ಎರಡು ಬಾರಿ ಗೆದ್ದಿರುವುದರಿಂದ, ಕ್ಷೇತ್ರವನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಕುರಿತು, ಪಕ್ಷದ ವೇದಿಕೆಯಲ್ಲಿ ಅಂತಿಮ ತೀರ್ಮಾನವಾಗಲಿದೆ.– ನಿಖಿಲ್ ಕುಮಾರಸ್ವಾಮಿ, ಅಧ್ಯಕ್ಷ, ಜೆಡಿಎಸ್ ಯುವ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.