ADVERTISEMENT

ರಾಮನಗರ: ಮೂಲ ನಕ್ಷತ್ರದಲ್ಲಿ ಮಗು ಹುಟ್ಟಿದಕ್ಕೆ ಕಿರುಕುಳ, ಪತಿ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 14:17 IST
Last Updated 3 ನವೆಂಬರ್ 2022, 14:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಮೂಲ ನಕ್ಷತ್ರದಲ್ಲಿ ಮಗು ಹುಟ್ಟಿತು ಎಂಬ ಮೂಢನಂಬಿಕೆಯಿಂದ ಪತ್ನಿ, ಮಗುವಿಗೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ ಗಂಡ ಮತ್ತವನ ಕುಟುಂಬದ ವಿರುದ್ಧ ಇಲ್ಲಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚನ್ನಪಟ್ಟಣದ ಮಂಜುನಾಥ ಬಡಾವಣೆ ನಿವಾಸಿ ವಿನಯ್, ಅವರ ತಂದೆ ಗಂಗಾಧರ ಆಚಾರ್‌, ತಾಯಿ ಶಕುಂತಲಾ ಹಾಗೂ ನಾಗರತ್ನ ಎಂಬುವರ ವಿರುದ್ಧ ವಿನಯ್‌ ಪತ್ನಿ ಶ್ರುತಿ ಎಂಬುವರು ದೂರು ದಾಖಲಿಸಿದ್ದಾರೆ.

2019ರ ಫೆ. 2ರಂದು ವಿನಯ್‌–ಶ್ರುತಿ ವಿವಾಹ ನೆರವೇರಿತ್ತು. ಈ ಸಂದರ್ಭ ₹ 4 ಲಕ್ಷ ನಗದು, 100 ಗ್ರಾಂ ಚಿನ್ನ ಹಾಗೂ ಇನ್ನಿತರ ವಸ್ತುಗಳನ್ನು ವಿನಯ್‌ ಉಡುಗೊರೆಯಾಗಿ ಪಡೆದಿದ್ದರು. ಅದಾದ ವರ್ಷದ ಬಳಿಕ ಈ ದಂಪತಿಗೆ ಗಂಡು ಮಗು ಜನಿಸಿತ್ತು. ಆದರೆ ಮಗು ಮೂಲ ನಕ್ಷತ್ರದ ದಿನ ಜನಿಸಿದೆ. ಇದರಿಂದ ತಮ್ಮ ಕುಟುಂಬಕ್ಕೆ ಕೆಡಕು ಎಂಬ ಮೂಢನಂಬಿಕೆಯಿಂದ ವಿನಯ್ ಮತ್ತವರ ಕುಟುಂಬದವರು ನಿರಂತರ ಕಿರುಕುಳ ನೀಡಲು ಆರಂಭಿಸಿದರು. ವರದಕ್ಷಿಣಿಗಾಗಿ ನಿರಂತರವಾಗಿ ಪೀಡಿಸುತ್ತಿದ್ದರು ಎಂದು ಶ್ರುತಿ ದೂರಿದ್ದಾರೆ.

ADVERTISEMENT

ಕಳೆದ ಅ. 25ರಂದು ಶ್ರುತಿ ತಂದೆ–ತಾಯಿ ತಮ್ಮ ಮಗಳನ್ನು ಕಾಣುವ ಸಲುವಾಗಿ ಅಳಿಯನ ಮನೆಗೆ ಬಂದಿದ್ದರು. ಈ ಸಂದರ್ಭ ಅವರನ್ನು ಮನೆಯೊಳಗೆ ಬಿಟ್ಟುಕೊಳ್ಳದ ವಿನಯ್‌ ಕುಟುಂಬ, ತಮಗೆ ಹಾಗೂ ತಮ್ಮ ಮಗುವಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ ಒಡ್ಡಿತು. ನಂತರ ನಮ್ಮನ್ನು ಮನೆಯಿಂದ ಹೊರಹಾಕಿತು ಎಂದು ಶ್ರುತಿ ಆರೋಪಿಸಿದ್ದಾರೆ.

ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.