ಜಕ್ಕಸಂದ್ರದಲ್ಲಿ ಹಂದಿಗಳ ಕಾಟ ತಪ್ಪಿಸಲು ಹೊಲದ ಸುತ್ತ ಬಟ್ಟೆ ಕಟ್ಟಿರುವ ರೈತರು
ಹಾರೋಹಳ್ಳಿ: ತಾಲೂಕಿನ ಟಿ. ಹೊಸಹಳ್ಳಿ,ಚಿಕ್ಕದೇವರಹಳ್ಳಿ, ಮರಳಗೆರೆ,ಪುಟ್ಟಹೆಗ್ಗಡೆವಲಸೆ,ದೊಡ್ಡಸಾದೇನಹಳ್ಳಿ,ರಸ್ತೆ ಜಕ್ಕಸಂದ್ರ ಸೇರಿದಂತೆ ಇತರ ಗ್ರಾಮಗಳಲ್ಲಿ
ಬೆಳೆಗೆ ಕಾಡು ಹಂದಿಗಳ ಉಪಟಳ ಹೆಚ್ಚಾಗಿದೆ.
ರಾಗಿ, ಕಡಲೆ ಕಾಯಿ,ಜೋಳ ಸೇರಿದಂತೆ ಬೆಳೆಗಳು ಕಾಡು ಹಂದಿಗಳ ಪಾಲಾಗುತ್ತಿವೆ. ಹಗಲು, ರಾತ್ರಿ ಕಾಡು ಹಂದಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ತೋಟ, ಹೊಲಗಳಲ್ಲಿ ಕಾವಲು ಕಾಯುವಂತಾಗಿದೆ.
ಹಂದಿಗಳನ್ನು ಹೆದರಿಸಿ ಓಡಿಸಲು ರೈತರು ಜಮೀನುಗಳಲ್ಲಿ ಬೆದರು ಬೊಂಬೆ ನಿಲ್ಲಿಸುವುದು, ಪಟಾಕಿ ಸಿಡಿಸುವುದು, ಬೆಂಕಿ ಹಾಕುವುದು, ಸದ್ದು ಮಾಡುವ ಉಪಾಯ ಅನುಸರಿಸುತ್ತಿದ್ದಾರೆ. ಆದರೂ, ಹಂದಿಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ.
ರೈತರು ಎಷ್ಟೇ ಸಾಹಸ ಮಾಡಿದರೂ ಅವರ ಕಣ್ಣು ತಪ್ಪಿಸಿ ಜಮೀನುಗಳಿಗೆ ದಾಳಿ ಇಡುವ ಕಾಡು ಹಂದಿಗಳು ಬೆಳೆ ತಿಂದು ಮುಗಿಸುವುದಲ್ಲದೇ ನೆಲವನ್ನು ಅಗೆದು ಹಾಕುತ್ತವೆ. ಇದರಿಂದ ರೈತರು ರೋಸಿ ಹೋಗಿದ್ದಾರೆ.
ಬೆಳೆ ನಷ್ಟ ಸಂಭವಿಸಿದರೂ, ಅರಣ್ಯ ಇಲಾಖೆಯಿಂದ ಪರಿಹಾರ ಸಿಗುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಕೀಯ ಒತ್ತಡ ಇದ್ದರೆ ಮಾತ್ರ ಪರಿಹಾರ ಸಿಗುತ್ತದೆ ಎಂದು ಆರೋಪಿಸಿದ್ದಾರೆ.
ಕಾಡು ಹಂದಿಗಳ ಉಪಟಳಕ್ಕೆ ಅರಣ್ಯ ಇಲಾಖೆ ಕಡಿವಾಣ ಹಾಕಬೇಕು. ಇಲ್ಲವೇ ಬೆಲೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ರಸ್ತೆ ಜಕ್ಕಸಂದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡು ಹಂದಿಗಳ ಕಾಟ ಹೆಚ್ಚಾಗಿದೆ. ನಮಗಿರುವ ಅಲ್ಪ ಸ್ವಲ್ಪ ಭೂಮಿಯಲ್ಲಿ ರಾಗಿ ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬೆಳೆದಿದ್ದೇವೆ ರಾತ್ರಿ ವೇಳೆ ಜಮೀನುಗಳಿಗೆ ನುಗ್ಗುವ ಹಂದಿಯ ಹಿಂಡು ಬೆಳೆಗಳನ್ನು ನಾಶಪಡಿಸುತ್ತಿವೆ. ಅಲ್ಲದೆ ನೆಲವನ್ನು ಸಹ ಅಗೆಯುತ್ತಿವೆ. ಅರಣ್ಯಾಧಿಕಾರಿಗಳಿಗಂತೂ ಈ ಬಗ್ಗೆ ಗಮನವಿಲ್ಲ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೆ ಅದು ಬರುವಷ್ಟರಲ್ಲಿ ಹತ್ತಾರು ಬಾರಿ ಕಚೇರಿಗಳಿಗೆ ಎಡತಾಗಬೇಕು. ನಮ್ಮ ಕಷ್ಟ ಕೇಳುವವರಾರು? ಕೂಡಲೇ ಸಂಬಂಧಪಟ್ಟವರುಗಮನಹರಿಸಬೇಕು.ಜಗ್ಗಯ್ಯ, ರೈತ, ರಸ್ತೆ ಜಕ್ಕಸಂದ್ರ
ಈ ಬಗ್ಗೆ ಗಮನಹರಿಸಲಾಗುವುದು. ರೈತರು ನಷ್ಟ ಅನುಭವಿಸಿದರೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೆ ಪ್ರಾಮಾಣಿಕವಾಗಿ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡಲಾಗುವುದು. ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುವುದು.ರವಿ, ವಲಯ ಅರಣ್ಯಾಧಿಕಾರಿಗಳು. ಕನಕಪುರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.