ADVERTISEMENT

ಚಂದ್ರಗುತ್ತಿಯಲ್ಲಿ ಬನದ ಹುಣ್ಣಿಮೆ ಪೂಜೆ

ರೇಣುಕಾಂಬ ದೇವಸ್ಥಾನದಲ್ಲಿ ಭಕ್ತಿಯ ಪರಕಾಷ್ಠೆ, ಮಹಿಳೆಯರ ಸಂಭ್ರಮ– ಸಡಗರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2016, 11:17 IST
Last Updated 25 ಜನವರಿ 2016, 11:17 IST
ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದ ಇತಿಹಾಸ ಪ್ರಸಿದ್ಧ ರೇಣುಕಾಂಬ ದೇವಸ್ಥಾನದಲ್ಲಿ ಭಾನುವಾರ ಬನದ ಹುಣ್ಣಿಮೆ ಪ್ರಯುಕ್ತ ಭಕ್ತರು ತೊಟ್ಟಿಲು ಬಾವಿಗೆ ವಿಶೇಷ ಪೂಜೆ ಸಲ್ಲಿಸಿದರು
ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದ ಇತಿಹಾಸ ಪ್ರಸಿದ್ಧ ರೇಣುಕಾಂಬ ದೇವಸ್ಥಾನದಲ್ಲಿ ಭಾನುವಾರ ಬನದ ಹುಣ್ಣಿಮೆ ಪ್ರಯುಕ್ತ ಭಕ್ತರು ತೊಟ್ಟಿಲು ಬಾವಿಗೆ ವಿಶೇಷ ಪೂಜೆ ಸಲ್ಲಿಸಿದರು   

ಸೊರಬ: ತಾಲ್ಲೂಕಿನ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಗ್ರಾಮದ ರೇಣುಕಾಂಬ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ಸಾವಿರಾರು ಭಕ್ತರು ಭಾನುವಾರ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.

ಭಾನುವಾರ ಬನದ ಹುಣ್ಣಿಮೆಯ ಪ್ರಯಕ್ತ ದೇವಿಯ ಮೂರ್ತಿಯನ್ನು  ತಲೆ ಮೇಲೆ ಹೊತ್ತುಕೊಂಡು ಸಾವಿರಾರು ಭಕ್ತರು ರಸ್ತೆಯುದ್ದಕ್ಕೂ ದೀಡ್ ನಮಸ್ಕಾರ ಹಾಕುತ್ತಾ ಊದೋ, ಊದೋ.... ಯಲ್ಲಮ್ಮ ಇನ್ನಾಲ್ಕು ಊದೋ, ಊದೋ....... ಎನ್ನುವ ಮೂಲಕ ಭಕ್ತಿಯ ಪರಕಾಷ್ಠೆಯಲ್ಲಿ ಮಿಂದು ಎದ್ದರು.

ಬನದ ಹುಣ್ಣಿಮೆ ಪೂರ್ವದಲ್ಲಿ ಬರುವ ಹೊಸ್ತಿಲ ಹುಣ್ಣಿಮೆಯಲ್ಲಿ ಶ್ರೀದೇವಿಯು ವೈಧವ್ಯದಲ್ಲಿ ಇರುವುದರಿಂದ ಹಸಿರು ಬಳೆ, ಕುಪ್ಪಸ ಸೇರಿದಂತೆ ಮುತ್ತೈದೆ ಸಾಮಾನುಗಳನ್ನು ಪೂಜೆಗೆ ಸಲ್ಲಿಸುವಂತಿರಲಿಲ್ಲ.  ಭಕ್ತರು ಒಂದು ತಿಂಗಳ ಕಾಲ ದೇವಿಗೆ ಯಾವುದೇ  ಪಡ್ಲಿಗೆ ತುಂಬಿಸಿರಲಿಲ್ಲ. ಆದರೆ, ಭಾನುವಾರ ಬನದ ಬನದ ಹುಣ್ಣಿಮೆಯು ಮುತ್ತೈದೆಯರ ಹುಣ್ಣಿಮೆ ಎಂದು ಪ್ರಸಿದ್ಧಿ ಪಡೆದುಕೊಂಡ ಹಿನ್ನೆಲೆಯಲ್ಲಿ  ಹೆಣ್ಣು ಮಕ್ಕಳು ಬಳೆ ಅಂಗಡಿಗಳಲ್ಲಿ ಹೊಸ ಬಳೆ, ಹಸಿರು ಕುಪ್ಪಸ ತೊಟ್ಟುಕೊಂಡು ತೊಟ್ಟಿಲು ಬಾವಿ ಪೂಜೆ, ಮೆಟ್ಟಿಲು ಪೂಜೆ, ದಿಂಡು ಕಟ್ಟುವುದು, ಬೇವು ಉಡುವುದು, ಚೌಲ, ಕಿವಿ  ಚುಚ್ಚುವುದು ಧಾರ್ಮಿಕ ಸೇವೆ ನಡೆಸಿದರು.

ಪ್ರತಿ ಹುಣ್ಣಿಮೆಯಂದು ಸಾವಿರಾರು ಭಕ್ತರು ಬಯಲು ಸೀಮೆಯ ರಾಯಚೂರು, ಹಾವೇರಿ, ಕೊಪ್ಪಳ, ಗದಗ,ದಾವಣಗೆರೆ ಹಾಗೂ ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬರುತ್ತಾರೆ. ಬೇರೆಲ್ಲಾ ಕ್ಷೇತ್ರಗಳಿಗಿಂತ ಇಲ್ಲಿ ಮೆಟ್ಟಿಲು ಪೂಜೆ ಭಿನ್ನವಾಗಿದ್ದು, ದೇವಿಯ ದರ್ಶನಕ್ಕೆ ಬರುವ ಭಕ್ತರು ಮೆಟ್ಟಿಲು ಪೂಜೆ ಸಲ್ಲಿಸಿದ ನಂತರವೆ ಬೆಟ್ಟ ಏರಿ ರೇಣುಕಾ ದೇವಿಯ ದರ್ಶನ ಪಡೆಯುತ್ತಾರೆ. ಇದರಂತೆ ಪಡ್ಡಲಿಗೆ ಸೇವೆಯು ವಿಶಿಷ್ಟವಾಗಿದ್ದು, ದೇವಿಯ ಸನ್ನಿಧಿಯಲ್ಲಿ ಹಣ್ಣು ಕಾಯಿ ಪೂಜೆ ಸಲ್ಲಿಸಿ ನಂತರ ಮನೆಯಲ್ಲಿ ತಯಾರಿಸಿದ ವಿವಿಧ ಖಾದ್ಯ ಭಕ್ಷಗಳನ್ನು ಪಡ್ಡಲಿಗೆಯಲ್ಲಿ ತುಂಬಿಟ್ಟು ದೇವಸ್ಥಾನದ ಮುಂಭಾಗದಲ್ಲಿನ ತೊಟ್ಟಿಲು ಬಾವಿಯಲ್ಲಿ ವಿಶೇಷ ನೈವೇದ್ಯ ಮಾಡಲಾಗುತ್ತದೆ.

ಸಂಜೆ ದೇವಿಯ ಉತ್ಸವ ಮೂರ್ತಿಯೊಂದಿಗೆ ಬೆಟ್ಟದಿಂದ ಕೆಳಗೆ ತರುವಾಗ ಭಕ್ತರು ಹರಕೆಯ ರೂಪದಲ್ಲಿ ಸಲ್ಲಿಸುವ ಬೆಳ್ಳಿ, ಬಂಗಾರ, ದಾನ್ಯ, ವಸ್ತ್ರ, ನಗದು ಹಣವನ್ನು ಮುಜುರಾಯಿ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಕಚೇರಿಯ ಠಂಕ ಶಾಲೆಗೆ ತೆಗೆದುಕೊಂಡು ಹೋಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.