ಶಿವಮೊಗ್ಗ: ‘ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಮಳೆ ಬರುವುದಿಲ್ಲ. ಬರ ಆವರಿಸುತ್ತದೆ ಎಂದು ಬಿಜೆಪಿ–ಜೆಡಿಎಸ್‌ನವರು ಅಪಪ್ರಚಾರ ಮಾಡುತ್ತಿದ್ದರು. ಅದಕ್ಕೆ ಸ್ವತಃ ವರುಣದೇವನೇ ಉತ್ತರ ಕೊಟ್ಟಿದ್ದಾನೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಗಾಜನೂರಿನ ತುಂಗಾ ಜಲಾಶಯಕ್ಕೆ ಭಾನುವಾರ ಬಾಗಿನ ಸಲ್ಲಿಸಿದ ಅವರು, ಶಿವಮೊಗ್ಗ ನಗರದಲ್ಲಿ ವಿವಿಧೆಡೆ ತುಂಗಾ ನದಿಯ ನೆರೆ ಪರಿಸ್ಥಿತಿಯಿಂದ ಅದ ಹಾನಿ ಪರಿಶೀಲಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಅತಿವೃಷ್ಟಿ, ಪ್ರವಾಹ, ಜನರಿಗೆ ತೊಂದರೆ ಎಂದು ಹಣೆಪಟ್ಟಿ ಕಟ್ಟಬಹುದಾ?’ ಎಂದು ಪ್ರಶ್ನಿಸಿದರು.
‘ಮಳೆ ಬರುವುದು, ಬಿಡುವುದು ಎಲ್ಲವೂ ಪ್ರಕೃತಿಯ ವಿದ್ಯಮಾನ. ಆದರೆ ವಿರೋಧಿಗಳ ಕುತಂತ್ರದ ಪ್ರಚಾರಕ್ಕೆ ನಮ್ಮ (ಕಾಂಗ್ರೆಸ್) ಬದಲಿಗೆ ಪ್ರಕೃತಿಯೇ ಅವರಿಗೆ ಉತ್ತರ ನೀಡಿದೆ. ರಾಜ್ಯದಾದ್ಯಂತ ಸಮೃದ್ಧವಾಗಿ ಮಳೆಯಾಗಿದೆ. ಎಲ್ಲಾ ಜಲಾಶಯಗಳೂ ಭರ್ತಿಯ ಹಂತದಲ್ಲಿವೆ. ಹಸಿರ ಸಮೃದ್ಧಿ ಗರಿಗೆದರಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ಗಾಜನೂರು ಜಲಾಶಯದಿಂದ 74,105 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಮಳೆ, ಜಲಾಶಯದಿಂದ ಹೊರ ಹರಿವು ಇನ್ನೂ ಹೆಚ್ಚಾದಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯ ವೆಂಕಟೇಶ್ವರ ನಗರ, ನ್ಯೂ ಮಂಡ್ಲಿ, ಗಾಂಧಿನಗರ, ಇಮಾಮ್ ಬಾಡ, ವಿದ್ಯಾನಗರದ ಕೆಲವು ಪ್ರದೇಶಗಳಲ್ಲಿ ನೀರು ನುಗ್ಗಬಹುದು. ತುರ್ತು ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವಾಗಲು ಮಹಾನಗರ ಪಾಲಿಕೆಯಿಂದ ತಂಡಗಳ ರಚಿಸಿ ಕ್ರಮವಹಿಸಲು ಸೂಚಿಸಲಾಗಿದೆ ಎಂದರು.
ತುಂಗಾ ನದಿಗೆ ಹರಕೆರೆಯಿಂದ ಸವಾಯಿಪಾಳ್ಯದವರೆಗೆ ತಡೆಗೋಡೆ ನಿರ್ಮಿಸಲಾಗುವುದು. ಅದಕ್ಕೆ ಕ್ರಿಯಾಯೋಜನೆಯ ಪ್ರಸ್ತಾವ 7 ದಿನಗಳ ಒಳಗೆ ಕಳುಹಿಸಲು ಪಾಲಿಕೆಗೆ ಸೂಚಿಸಲಾಗಿದೆ ಎಂದು ಹೇಳಿದರು.
ಕುರುಬರ ಪಾಳ್ಯದ ಬಳಿ ₹43 ಲಕ್ಷ ವೆಚ್ಚದಲ್ಲಿ ಮಣ್ಣು ಕೊಚ್ಚಿ ಹೋಗದಂತೆ ತುಂಗಾ ನದಿ ದಂಡೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ 500 ಮೀಟರ್ ಉದ್ದದ ತಡೆಗೋಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಮಲೆನಾಡು ಜನಾಕ್ರೋಶ ಹೋರಾಟದ ವೇಳೆ ನೀಡಿದ್ದ ಭರವಸೆಯಂತೆ ಶರಾವತಿ, ಚಕ್ರಾ, ಸಾವೇಹಕ್ಲು ಮುಳುಗಡೆ ಸಂತ್ರಸ್ತರು, ಅರಣ್ಯ ಹಕ್ಕು ಕಾಯ್ದೆ ಫಲಾನುಭವಿಗಳು ಸೇರಿದಂತೆ ಜಿಲ್ಲೆಯ ಎಲ್ಲ ಭೂಮಿ ಕಳೆದುಕೊಂಡ ಸಂತಸ್ತರ ಪರ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಲು ದೇವದಾಸ ಕಾಮತ್ ಸೇರಿದಂತೆ ಮೂವರು ವಕೀಲರ ತಂಡವನ್ನು ರಾಜ್ಯ ಸರ್ಕಾರ ನೇಮಿಸಿದೆ ಎಂದು ಮಾಹಿತಿ ನೀಡಿದರು.
ಮಳೆಯಿಂದ 97 ಕೆರೆಗಳಿಗೆ ಹಾನಿ:
ಮಳೆ, ಪ್ರವಾಹದಿಂದ ಶಿವಮೊಗ್ಗ ಜಿಲ್ಲೆಯಲ್ಲಿ 97 ಕೆರೆಗಳು ಹಾನಿಗೀಡಾಗಿವೆ. ಅವುಗಳ ತುರ್ತು ದುರಸ್ತಿ ಹಾಗೂ ನೀರು ಪೋಲಾಗದಂತೆ ತಡೆಯಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದಲ್ಲಿ ಕ್ರಮ ವಹಿಸಲಾಗಿದೆ. ಶರಾವತಿ ಹಿನ್ನೀರಿನಿಂದ ಸೊರಬ ಪಟ್ಟಣ ಸೇರಿದಂತೆ ಇಡೀ ತಾಲ್ಲೂಕಿಗೆ ಕುಡಿಯುವ ನೀರು ಕಲ್ಪಿಸಲಾಗುವುದು. ಅದಕ್ಕಾಗಿ ಯೋಜನೆ ರೂಪಿಸಲಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಬಿಜೆಪಿ–ಜೆಡಿಎಸ್‌ನವರು ಮೈಸೂರಿಗೆ ಪಾದಯಾತ್ರೆ ಮಾಡುವ ಬದಲಿಗೆ ಅವರದ್ದೇ ಪಕ್ಷದ ಬಸನಗೌಡ ಪಾಟೀಲ ಯತ್ನಾಳ ಅರವಿಂದ ಲಿಂಬಾವಳಿ ಮಾಡಿರುವ ಆರೋಪಗಳ ತನಿಖೆಗೆ ಆಗ್ರಹಿಸಿ ಪಾದಯಾತ್ರೆ ಮಾಡಲಿ.ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾಗಿರುವ ಆಸ್ಪತ್ರೆ ಕಟ್ಟಡಗಳು, ಆರೋಗ್ಯ ಇಲಾಖೆ ಕಟ್ಟಡಗಳ ದುರಸ್ತಿಗೆ ಮುಂದಿನ ವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಕರೆಸಿ ಸಭೆ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ. ಮಿಥುನ್‌ಕುಮಾರ್, ಸಿಇಒ ಹೇಮಂತಕುಮಾರ್, ಪಾಲಿಕೆ ಆಯುಕ್ತೆ ಡಾ.ಕವಿತಾ ಯೋಗಪ್ಪನವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ವಕ್ತಾರ ರಮೇಶ್ ಹೆಗ್ಡೆ ಹಾಜರಿದ್ದರು.
‘ಜಿಲ್ಲೆಯಲ್ಲಿ ಶೇ 66ರಷ್ಟು ಹೆಚ್ಚು ಮಳೆ’
ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಸರಾಸರಿ ವಾಡಿಕೆ ಮಳೆ 66.8 ಸೆಂ.ಮೀ ಇದೆ. ಆದರೆ 110.9 ಸೆಂ.ಮೀ. ಮಳೆಯಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಶೇ 66ರಷ್ಟು ಹೆಚ್ಚು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾಹಿತಿ ನೀಡಿದರು. ನೆರೆ ಹಾವಳಿಯಿಂದ ಜೂನ್–ಜುಲೈ ತಿಂಗಳಲ್ಲಿ ಒಟ್ಟು ನಾಲ್ವರು ಸಾವಿಗೀಡಾಗಿದ್ದಾರೆ. ಈಗಾಗಲೇ ಇಬ್ಬರ ಕುಟುಂಬಗಳಿಗೆ ₹ 5 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ. ಉಳಿದ ಇಬ್ಬರ ಕುಟುಂಬಗಳಿಗೆ ಶೀಘ್ರ ಪರಿಹಾರ ಧನ ವಿತರಿಸಲಾಗುವುದು ಎಂದರು. ಮಳೆಯಿಂದ 18 ಮನೆ ಪೂರ್ಣ ಹಾನಿಯಾಗಿವೆ. ಐದು ಮನೆಗಳ ವಾರಸುದಾರರಿಗೆ ಈಗಾಗಲೇ ತಲಾ ₹1.20 ಪರಿಹಾರ ವಿತರಿಸಲಾಗಿದೆ. 437 ಮನೆಗಳು ಭಾಗಶಃ ಹಾನಿಯಾಗಿವೆ. 40 ಮನೆಗಳಿಗೆ ₹1.71 ಲಕ್ಷಗಳ ಪರಿಹಾರ ವಿತರಿಸಲಾಗಿದೆ. ಉಳಿದ ಮನೆಗಳಿಗೆ ಶೀಘ್ರ ಪರಿಹಾರ ವಿತರಣೆಗೆ ಮಾಡಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.