ADVERTISEMENT

ಮೆಡಿಕಲ್ ಸೀಟ್ ಸಿಕ್ಕರೂ ಕೃಷಿ ವಿಷಯ ಆಯ್ದುಕೊಂಡೆ: ಚಿನ್ನದ ನಗೆ ಬೀರಿದ ಶ್ರಾವ್ಯಾ

ಕೃಷಿ, ತೋಟಗಾರಿಕೆ ವಿ.ವಿ ಘಟಿಕೋತ್ಸವ: ಚಿನ್ನದ ನಗೆ ಬೀರಿದ ಶ್ರಾವ್ಯಾ, ತನುಜಾ

ವೆಂಕಟೇಶ ಜಿ.ಎಚ್.
Published 29 ಸೆಪ್ಟೆಂಬರ್ 2022, 6:22 IST
Last Updated 29 ಸೆಪ್ಟೆಂಬರ್ 2022, 6:22 IST
ಘಟಿಕೋತ್ಸವದಲ್ಲಿ ತಲಾ ನಾಲ್ಕು ಚಿನ್ನದ ಪದಕಗಳನ್ನು ಪಡೆದುಕೊಂಡ ಆರ್.ಎನ್.ತನುಜಾ (ಬಿಸ್ಸಿ ತೋಟಗಾರಿಕೆ) ಹಾಗೂ ಶ್ರಾವ್ಯಾ ಕೆ.ಜೆ. (ಕೃಷಿ) ಅವರು ಪದಕಗಳೊಂದಿಗೆ ಸಂಭ್ರಮಿಸಿದ ಕ್ಷಣ. ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್
ಘಟಿಕೋತ್ಸವದಲ್ಲಿ ತಲಾ ನಾಲ್ಕು ಚಿನ್ನದ ಪದಕಗಳನ್ನು ಪಡೆದುಕೊಂಡ ಆರ್.ಎನ್.ತನುಜಾ (ಬಿಸ್ಸಿ ತೋಟಗಾರಿಕೆ) ಹಾಗೂ ಶ್ರಾವ್ಯಾ ಕೆ.ಜೆ. (ಕೃಷಿ) ಅವರು ಪದಕಗಳೊಂದಿಗೆ ಸಂಭ್ರಮಿಸಿದ ಕ್ಷಣ. ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್   

ಶಿವಮೊಗ್ಗ: ‘ಅಪ್ಪ ಕಾಫಿ ಪ್ಲಾಂಟರ್. ಹೀಗಾಗಿ ನನಗೆ ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ. ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇ 96 ಅಂಕ ಬಂದಿತ್ತು. ಮೆಡಿಕಲ್ ಸೀಟ್ ಸಿಕ್ಕರೂ ಹೋಗದೇ ಬಿಎಸ್ಸಿ ಕೃಷಿ ವಿಷಯ ಆಯ್ಕೆ ಮಾಡಿಕೊಂಡಿದ್ದೆ. ಈಗ ಚಿನ್ನದ ಪದಕ ಸಿಕ್ಕಿದ್ದು ನನಗಷ್ಟೇ ಅಲ್ಲ ಅಪ್ಪ–ಅಮ್ಮನಿಗೂ ಖುಷಿಯಾಗಿದೆ. ನನ್ನ ನಿರ್ಧಾರ ಅವರಿಗೂ ಸರಿ ಅನ್ನಿಸಿದೆ...’

ಹೀಗೆಂದು ಸಾಗರ ತಾಲ್ಲೂಕು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಏಳನೇ ಘಟಿಕೋತ್ಸವದಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಶ್ರಾವ್ಯಾ ಕೆ.ಜೆ. ಸಂಭ್ರಮ ಹಂಚಿಕೊಂಡರು.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕು ದಯಂಬಳ್ಳಿಯ ಜಯರಾಜ್ ಹಾಗೂ ನಿವೇದಿತಾ ದಂಪತಿಯ ಪುತ್ರಿ ಶ್ರಾವ್ಯಾ ಪಿಯುಸಿಯನ್ನು ಮಂಗಳೂರಿನ ವಿಕಾಸ ಕಾಲೇಜಿನಲ್ಲಿ ಓದಿದ್ದಾರೆ. ಸದ್ಯ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅನುವಂಶೀಯತೆ ಹಾಗೂ ತಳಿ ವಿಜ್ಞಾನದಲ್ಲಿ ಎಂಎಸ್ಸಿ ಕಲಿಯುತ್ತಿದ್ದಾರೆ.

ADVERTISEMENT

ಅಜ್ಜಿ ಮನೆಯೇ ಆಸರೆ: ಬಿಎಸ್ಸಿ ತೋಟಗಾರಿಕೆಯಲ್ಲಿ ಹಾವೇರಿ ಜಿಲ್ಲೆ ಬ್ಯಾಡಗಿಯ ಆರ್.ಎನ್.ತನುಜಾ ನಾಲ್ಕು ಚಿನ್ನದ ಪದಕ ಮುಡಿಗೇರಿಸಿಕೊಂಡರು.

ತನುಜಾ ಅಪ್ಪ 10 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಸಾಗರದಲ್ಲಿನ ಅಜ್ಜಿ ಮನೆಯಲ್ಲಿ ಶಿಕ್ಷಣ ಮುಗಿಸಿರುವ ತನುಜಾ, ಅಲ್ಲಿನ ಸರ್ಕಾರಿ ಕಾಲೇಜಿನಲ್ಲಿ ಶೇ 89 ಅಂಕಗಳೊಂದಿಗೆ ಪಿಯುಸಿ ಮುಗಿಸಿದ್ದಾರೆ.

ಸದ್ಯ ಬಾಗಲಕೋಟೆಯ ತೋಟಗಾರಿಕೆ ವಿ.ವಿ.ಯಲ್ಲಿ ಪುಷ್ಪ ಕೃಷಿ (ಫ್ಲೋರಿಕಲ್ಚರ್) ವಿಷಯದಲ್ಲಿ ಎಂಎಸ್ಸಿ ಓದುತ್ತಿದ್ದಾರೆ. ‘ಚಿನ್ನದ ಪದಕಗಳನ್ನು ಕುಟುಂಬ, ಗೆಳೆಯರು ಹಾಗೂ ಶಿಕ್ಷಕರಿಗೆ ಅರ್ಪಿಸುವೆ’ ಎಂದು ತನುಜಾ ಖುಷಿ ಪಟ್ಟರು.

ತನುಜಾ ತಾಯಿ ಮಂಜುಳಾ ಕೂಡ ರಾಣೆಬೆನ್ನೂರು ತಾಲ್ಲೂಕು ಹನುಮನಮಟ್ಟಿಯ ಕೃಷಿ ಕಾಲೇಜಿನಲ್ಲಿ ಡಿಪ್ಲೊಮಾ ಓದಿದ್ದಾರೆ. ‘ನನಗೂ ಆಗ ಎಂಎಸ್ಸಿ ಕಲಿಯುವ ಆಸೆ ಇತ್ತು. ಮನೆಯ ಪರಿಸ್ಥಿತಿಯಿಂದ ಅದು ಕೈಗೂಡಿರಲಿಲ್ಲ. ಮಗಳ ಮೂಲಕ ಈಗ ಅದು ನನಸಾಗಿದೆ’ ಎಂದು ಸಂತಸ ಹಂಚಿಕೊಂಡರು.

ಘಟಿಕೋತ್ಸವದಲ್ಲಿ ಬಿಎಸ್ಸಿ, ಎಂಎಸ್ಸಿ ಹಾಗೂ ಪಿಎಚ್‌.ಡಿ ಸೇರಿ 24 ವಿದ್ಯಾರ್ಥಿಗಳು 33 ಚಿನ್ನದ ಪದಕಗಳನ್ನು ಪಡೆದರು.

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಒಟ್ಟು 355 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಹರಿಯಾಣದ ರೈತರ ಆಯೋಗದ ಅಧ್ಯಕ್ಷ ಡಾ.ಆರ್.ಎಸ್‌.ಪರೋಡ ಘಟಿಕೋತ್ಸವ ಭಾಷಣ ಮಾಡಿದರು.ಕುಲಪತಿ ಡಾ.ಅರ್.ಸಿ.ಜಗದೀಶ ಹಾಜರಿದ್ದರು.

ಹೊಸ ಸ್ಟಾರ್ಟ್‌ಅಪ್‌ಗಳ ಉತ್ತೇಜನಕ್ಕೆ ಸಲಹೆ

‘ಕೃಷಿಯಲ್ಲಿ ನ್ಯಾನೊ ತಂತ್ರಜ್ಞಾನ ಬಳಕೆ, ಸಾವಯವ, ಸುಸ್ಥಿರ ಕೃಷಿ ಪದ್ಧತಿಗಳ ವ್ಯಾಪಕಗೊಳಿಸಲು ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ, ಜನಪ್ರಿಯಗೊಳಿಸಲು ಹೊಸ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವುದು ಇಂದಿನ ಅಗತ್ಯ’ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಭಿಪ್ರಾಯಪಟ್ಟರು.

‘ಇಸ್ರೇಲ್ ದೇಶ ಭೌಗೋಳಿಕವಾಗಿ ಕೃಷಿಗೆ ಸೂಕ್ತವಾಗಿರದಿದ್ದರೂ ಆ ಕ್ಷೇತ್ರದಲ್ಲಿ ವಿಕ್ರಮ ಸಾಧಿಸಿದೆ. ಇದನ್ನು ನಾವು ಮಾದರಿಯಾಗಿಸಿಕೊಳ್ಳಬೇಕು. ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿ ಹಾಗೂ ಜಾಗತಿಕ ಶಕ್ತಿಯಾಗಲು ಭಾರತವು ಕೃಷಿ, ಪಶುಸಂಗೋಪನೆ ಹಾಗೂ ಆಹಾರ ಸಂಸ್ಕರಣಾ ಕ್ಷೇತ್ರದ ಆಧುನೀಕರಣಕ್ಕೆ ಒತ್ತು ನೀಡಬೇಕಿದೆ’ ಎಂದು ಹೇಳಿದರು.

ಘಟಿಕೋತ್ಸವ ಭಾಷಣ ಮಾಡಿದ ಡಾ.ಎಸ್.ಎಸ್. ಪರೋಡಾ, ರೈತರು ಆರ್ಥಿಕವಾಗಿ ಸಬಲರಾಗಲು ಬಹು ಬೆಳೆ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಕೃಷಿ ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ಹೆಚ್ಚಿನ ಲಾಭ ಪಡೆಯುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರು ತಮ್ಮ ಆದಾಯವನ್ನು ದ್ವಿಗುಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.