
ಶಿವಮೊಗ್ಗ: ಮಹಿಳೆಯರು, ಮಕ್ಕಳಿಗೆ ಸಮಾಜಘಾತುಕ ಶಕ್ತಿಗಳು ಕಿರುಕುಳ ನೀಡುವುದನ್ನು ತಡೆಯಲು ಜಿಲ್ಲೆಯಲ್ಲಿ ‘ಅಕ್ಕ’ ಪಡೆ ರಚಿಸಲಾಗಿದೆ. ಶಿವಮೊಗ್ಗದಲ್ಲಿ ಎಸ್‌ಪಿ ಬಿ.ನಿಖಿಲ್ ಅಕ್ಕ ಪಡೆಯ ವಾಹನಕ್ಕೆ ಬುಧವಾರ ಇಲ್ಲಿ ಚಾಲನೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಪೊಲೀಸ್ ಇಲಾಖೆ ‘ಅಕ್ಕ ಪಡೆ’ ಯನ್ನು ರಚಿಸಿದೆ. ಈ ವೇಳೆ ಮಾತನಾಡಿದ ಎಸ್‌ಪಿ, ವಿಶೇಷವಾಗಿ ಶಾಲೆ– ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರ ರಕ್ಷಣೆಗಾಗಿ, ಅವರಿಗೆ ಮಾನಸಿಕ ಧೈರ್ಯ ನೀಡಲು ಈ ಪಡೆ ರಚನೆಯಾಗಿದೆ ಎಂದರು.
ಪ್ರತಿ ದಿನ ಎರಡು ಪಾಳಿಗಳಲ್ಲಿ ಅಕ್ಕ ಪಡೆ ಕೆಲಸ ಮಾಡಲಿದೆ. ಅದಕ್ಕಾಗಿ ಹೊಸ ವಾಹನ ಒದಗಿಸಲಾಗಿದೆ. ಅದು ನಗರ ಮತ್ತು ಹೊರವಲಯದ ಬಸ್ ನಿಲ್ದಾಣ, ಮಾರ್ಕೆಟ್, ದೇವಸ್ಥಾನ, ಉದ್ಯಾನಗಳು, ಶಾಲೆ– ಕಾಲೇಜು ಬಳಿ, ವಿದ್ಯಾರ್ಥಿನಿಯರ ಹಾಸ್ಟೆಲ್, ಜನನಿಬಿಡ ಪ್ರದೇಶ, ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ನಿರ್ವಹಣೆ ಮಾಡಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಶಾಲೆ- ಕಾಲೇಜು, ಜನನಿಬಿಡ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಸಹಾಯವಾಣಿ ಸಂಖ್ಯೆಗಳಾದ 112 ಮತ್ತು 1098 ಬಗ್ಗೆ ಮಾಹಿತಿ ಹಾಗೂ ಕಾನೂನುಗಳ ಬಗ್ಗೆಯೂ ಜಾಗೃತಿ ಮೂಡಿಸಲಿದೆ ಎಂದರು.
ಈ ಪಡೆಯಲ್ಲಿ ಮಹಿಳಾ ಗೃಹರಕ್ಷಕಿಯರು ಹಾಗೂ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಬಂದು ಅಕ್ಕ ಪಡೆಯ ನೆರವು ಪಡೆಯಬಹುದಾಗಿದೆ ಎಂದು ಹೇಳಿದರು.
ಕಿರುಕುಳ, ಕೌಟುಂಬಿಕ ಹಿಂಸೆ, ಈವ್ ಟೀಸಿಂಗ್ ಅಥವಾ ಯಾವುದೇ ರೀತಿಯ ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರು ಮತ್ತು ಹದಿ ಹರೆಯದ ಹೆಣ್ಣು ಮಕ್ಕಳು, ಬಾಲ ಕಾರ್ಮಿಕ ಪದ್ಧತಿ, ಭಿಕ್ಷಾಟನೆ, ಮಾದಕ ದ್ರವ್ಯ ಅಥವಾ ನಿಂದನೆಗೆ ಒಳಗಾದ ಮಕ್ಕಳು ಈ ಪಡೆಯಿಂದ ನೆರವು ಪಡೆಯಲಿದ್ದಾರೆ ಎಂದರು.
ಎಎಸ್‌ಪಿ ಕಾರಿಯಪ್ಪ, ಕೆಎಸ್‌ಆರ್‌ಪಿ ಕಮಾಂಡೆಂಟ್ ಯುವಕುಮಾರ್, ಗೃಹರಕ್ಷಕ ದಳದ ಕಮಾಂಡೆಂಟ್ ಚೇತನ್, ಡಿವೈಎಸ್‌ಪಿ ಬಾಬು ಅಂಜಿನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಶಶಿರೇಖಾ, ಡಿಸಿಪಿಒ ಮಂಜುನಾಥ್, ಡಾ.ಸಂತೋಷ್ ಕುಮಾರ್ ಪಾಲ್ಗೊಂಡಿದ್ದರು.
‘ನಿರ್ಭಯವಾಗಿ ಅಕ್ಕ ಪಡೆಯ ನೆರವು ಪಡೆಯಿರಿ’
ಅಕ್ಕ ಪಡೆ ರಚನೆ ಮಹಿಳಾ ಸಬಲೀಕರಣದೆಡೆ ಬಹು ದೊಡ್ಡ ಹೆಜ್ಜೆ. ಪೋಕ್ಸೊ ಪ್ರಕರಣಗಳನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಲಿದೆ. ಹೆಣ್ಣುಮಕ್ಕಳು ತಮಗಾದ ಅನ್ಯಾಯ ಕಿರುಕುಳ ದೌರ್ಜನ್ಯಗಳ ಬಗ್ಗೆ ಅಂಜಿಕೆ ಇಲ್ಲದೇ ಧೈರ್ಯದಿಂದ ಸಹಾಯವಾಣಿ ಸಂಖ್ಯೆ 112 ಮತ್ತು 1098 ಗೆ ಕರೆ ಮಾಡಿ ತಿಳಿಸಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಸಲಹೆ ನೀಡಿದರು. ಕರೆ ಮಾಡಿದವರ ಮಾಹಿತಿ ಹಾಗೂ ವಿಷಯಗಳನ್ನೆಲ್ಲ ಗೋಪ್ಯವಾಗಿ ಇಡಲಾಗುವುದು. ಆದ್ದರಿಂದ ತೊಂದರೆಗಳನ್ನು ನಿರ್ಭೀತಿಯಿಂದ ಹೇಳಿಕೊಳ್ಳಿರಿ. ನಿರ್ಭಯವಾಗಿ ಅಕ್ಕ ಪಡೆ ಸೌಲಭ್ಯವನ್ನು ಬಳಸಿಕೊಳ್ಳಿರಿ ಎಂದರು.
ಮುಳುಗಡೆ ಸಂತ್ರಸ್ತರ ಹಿತ ಕಾಯುವೆ; ಡಿಸಿ ಕವಳಿಕಟ್ಟಿ
ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿ ಹಂಚಿಕೆ ಸಮಸ್ಯೆಯನ್ನು ಆದ್ಯತೆಯ ಕೆಲಸ ಎಂದು ಭಾವಿಸಿದ್ದೇನೆ. ಹಿಂದಿನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅದನ್ನೇ ಮುಂದುವರಿಸುವೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಬುಧವಾರ ಇಲ್ಲಿಯ ಪ್ರೆಸ್‌ಟ್ರಸ್ಟ್‌ನ ಮಾಧ್ಯಮ ಸಂವಾದದಲ್ಲಿ ಹೇಳಿದರು. ಸರ್ಕಾರಿ ಆಸ್ತಿ ರಕ್ಷಣೆ ಕೆರೆಗಳ ಒತ್ತುವರಿ ತಡೆಯುವ ಜೊತೆಗೆ ಕೆಎಫ್‌ಡಿ ನಿಯಂತ್ರಣಕ್ಕೆ ಮತ್ತು ಯುವಜನರ ಆದ್ಯತೆಗಳಿಗುಣವಾಗಿ ಕೆಲಸ ಮಾಡುವೆ ಎಂದರು. ಎಸ್‌ಪಿ ಬಿ.ನಿಖಿಲ್ ಮಾತನಾಡಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಡೆಯಬೇಕಿದೆ. ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಮೂಡಿಸುವ ಕೆಲಸವನ್ನು ಇಲಾಖೆ ಮಾಡಲಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.