ಶಿವಮೊಗ್ಗ: ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ರಾಜ್ಯ ಸರ್ಕಾರಿ ನೌಕರರ ಸಂಘ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಡಿ.15ರಂದು ಸಂಜೆ 5.30ಕ್ಕೆ ಅಲ್ಲಮ ಪ್ರಭು ಬಯಲು (ಫ್ರೀಡಂಪಾರ್ಕ್)ನಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಆಯೋಜಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಳ್ವಾಸ್ ಸಾಂಸ್ಕೃತಿಕ ವೈಭವ ದೇಶದ ಸಾಂಸ್ಕೃತಿಕ ಸೊಗಡನ್ನು ಅನಾವರಣಗೊಳಿಸುವ ಕಾರ್ಯಕ್ರಮ. ಇದರ ಮೂಲಕ ಕಲೆ, ಸಂಗೀತ, ನೃತ್ಯ, ಯಕ್ಷಗಾನ ಸಂಸ್ಕೃತಿಯನ್ನು ಬಿಂಬಿಸಲಾಗುವುದು. 300 ಕಲಾವಿದರು ಮೂರೂವರೆ ಗಂಟೆಗಳ ಕಾಲ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ನಗರದ ನಾಗರಿಕರು, ಸಂಘ–ಸಂಸ್ಥೆಗಳ ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಯೋಗದೀಪಿಕಾ, ಶಾಸ್ತ್ರೀಯ ನೃತ್ಯ, ಬಡಗುತಿಟ್ಟು ಯಕ್ಷಗಾನ–ಶ್ರೀರಾಮಕ ಪಟ್ಟಾಭಿಷೇಕ, ಗುಜರಾತಿನ ಗಾರ್ಭಾ ನೃತ್ಯ, ದಾಂಡಿಯಾ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ನೃತ್ಯ–ವರ್ಷಧಾರೆ, ಪುರುಲಿಯಾ ತೆಂಕುತಿಟ್ಟು ಯಕ್ಷಗಾನ–ಅಗ್ರಪೂಜೆ, ಬೊಂಬೆ ವಿನೋದಾವಳಿ ಆಯೋಜಿಸಲಾಗಿದೆ.
ಪ್ರವೇಶ ಉಚಿತವಾಗಿದ್ದು, 20 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸರಿಯಾದ ಸಮಯಕ್ಕೆ ಬಂದರೆ ಕುಳಿತುಕೊಳ್ಳಲು ಅವಕಾಶವಿರುತ್ತದೆ. ಕಾರ್ಯಕ್ರಮ ಸರಿಯಾಗಿ 5.30ಕ್ಕೆ ಆರಂಭವಾಗುತ್ತದೆ. ಸಭಾ ಕಾರ್ಯಕ್ರಮ ಅರ್ಧಗಂಟೆ ಅಷ್ಟೇ ಇದ್ದು, ಸಂಜೆ 6 ಗಂಟೆಯಿಂದ 9ರವರೆಗೆ ನಿರಂತರವಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಸಾಂಸ್ಕೃತಿಕ ವೈಭವದ ಅಧ್ಯಕ್ಷ ಎಸ್.ಪಿ. ದಿನೇಶ್ ತಿಳಿಸಿದರು.
ಸಾರ್ವಜನಿಕರು 10 ನಿಮಿಷ ಮುಂಚಿತವಾಗಿಯೇ ಬಂದು ಆಸೀನರಾಗಬೇಕು. ಕುಡಿಯುವ ನೀರು, ಮತ್ತು ತಿಂಡಿ–ತಿನಿಸುಗಳನ್ನು ತಾವೇ ತರಬೇಕು. ಅದಕ್ಕೆ ಅನುಕೂಲವಾಗುವಂತೆ ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತ ತಿಂಡಿ–ತಿನಿಸುಗಳ ಸ್ಟಾಲ್‌ಗಳನ್ನು ತೆರೆಯಲಾಗುವುದು. ಈ ಕಾರ್ಯಕ್ರಮಕ್ಕೆ 25ಕ್ಕೂ ಹೆಚ್ಚು ಸಂಘ–ಸಂಸ್ಥೆಗಳು ಕೈಜೋಡಿಸಿವೆ ಎಂದರು.
ಪ್ರಮುಖರಾದ ಎನ್. ಮಂಜುನಾಥ್, ಆರ್. ಮೋಹನ್‌ಕುಮಾರ್, ಬಳ್ಳೇಕೆರೆ ಸಂತೋಷ್, ಗೋಪಿನಾಥ್, ಅನಿತಾ ರವಿಶಂಕರ್, ಸಮನ್ವಯ ಕಾಶಿ, ಶಾಂತಾ ಸುರೇಂದ್ರ, ಪಾಪಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.