ಸಾಗರ: ‘ಹಕ್ಕುಪತ್ರ ಪಡೆಯಲು ಮೂರು ತಲೆಮಾರಿನ ದಾಖಲೆಗಳನ್ನು ಒದಗಿಸಬೇಕು ಎಂಬ ನಿಬಂಧನೆಯನ್ನು ತೆಗೆಯುವ ಮೂಲಕ ಕೇಂದ್ರ ಸರ್ಕಾರ ಅರಣ್ಯಭೂಮಿ ಹಕ್ಕು ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವ ಅಗತ್ಯವಿದೆ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಹಮ್ಮಿಕೊಂಡಿರುವ ಅರಣ್ಯವಾಸಿಗಳಿಗೆ ಕಾನೂನು ಜಾಗೃತಿ ಜಾಥಾದ ಕರಪತ್ರವನ್ನು ಸಾಗರದ ತಮ್ಮ ನಿವಾಸದಲ್ಲಿ ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಈಗಿರುವ ಅರಣ್ಯ ಭೂಮಿ ಹಕ್ಕು ಕಾಯ್ದೆಯಲ್ಲಿನ ಹಲವು ತೊಡಕುಗಳಿಂದ ಕಾಯ್ದೆಯ ಲಾಭ ಫಲಾನುಭವಿಗಳಿಗೆ ದೊರಕುತ್ತಿಲ್ಲ. ಅರಣ್ಯಭೂಮಿ ಸಾಗುವಳಿ ಮಾಡುತ್ತಿರುವ ಬಗ್ಗೆ ಮೂರು ತಲೆಮಾರಿನ ದಾಖಲೆ ಒದಗಿಸಬೇಕೆಂಬುದು ಅವೈಜ್ಞಾನಿಕವಾದ ಸಂಗತಿಯಾಗಿದೆ’ ಎಂದರು.
‘ತಿಳಿವಳಿಕೆ ಕೊರತೆಯಿಂದ ಅರಣ್ಯವಾಸಿಗಳು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ದಾಖಲೆಗಳನ್ನು ಯಾರಿಗೆ ನೀಡಬೇಕು ಎನ್ನುವ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಲು ನಮ್ಮ ಸಂಘಟನೆ ಕಾನೂನು ಜಾಗೃತಿ ಜಾಥಾ ಹಮ್ಮಿಕೊಂಡಿದೆ’ ಎಂದು ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ವೇದಿಕೆಯ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.