ADVERTISEMENT

ಆನವಟ್ಟಿ: ಶತಮಾನೋತ್ಸವ ಸಂಭ್ರಮದಲ್ಲಿ ಸರ್ಕಾರಿ ಶಾಲೆ

ಆಂಜನೇಯ ದೇವಸ್ಥಾನದಲ್ಲಿ ಶುರುವಾಗಿದ್ದ ಶಾಲೆಯೀಗ ಕೆಪಿಎಸ್ ಆಗಿ ಉನ್ನತೀಕರಣ; ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 4:19 IST
Last Updated 21 ಫೆಬ್ರುವರಿ 2026, 4:19 IST
ಆನವಟ್ಟಿಯ ಶಾಂತಾಚಾರ್‌ ಮಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಕೆಪಿಎಸ್‌)
ಆನವಟ್ಟಿಯ ಶಾಂತಾಚಾರ್‌ ಮಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಕೆಪಿಎಸ್‌)   

ಆನವಟ್ಟಿ: ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಿ, ಬದುಕು ರೂಪಿಸಿರುವ ಇಲ್ಲಿನ ಶಾಂತಾಚಾರ್‌ ಮಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ (ಕೆಪಿಎಸ್‌)ಶಾಲೆಯು ಈ ವರ್ಷ ನೂರರ ಸಂಭ್ರಮದಲ್ಲಿದೆ. 

1926ರಲ್ಲಿ ಆಂಜನೇಯ ದೇವಸ್ಥಾನದಲ್ಲಿ ಬೆರಳೆಣಿಕೆ ವಿದ್ಯಾರ್ಥಿಗಳಿಂದ ಆರಂಭವಾಗಿದ್ದ ಈ ಶಾಲೆಗೆ, 1948ರಲ್ಲಿ ಶಾಂತಾಚಾರ್‌ ಮಡ್ಡಿ ಅವರು ಕಟ್ಟಡ ನಿರ್ಮಾಣ ಹಾಗೂ ಕ್ರೀಡಾಂಗಣಕ್ಕಾಗಿ 8 ಎಕರೆ 36 ಗುಂಟೆ ಜಮೀನನ್ನು ದಾನವಾಗಿ ನೀಡಿದ್ದರು. ಆ ಮೂಲಕ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾದರು.

2018ರಲ್ಲಿ ಈ ಶಾಲೆಯು ಕೆಪಿಎಸ್‌ ಆಗಿ ಉನ್ನತೀಕರಣಗೊಂಡಿತು. 2020ರಿಂದ ಎಲ್‌ಕೆಜಿ, ಯುಕೆಜಿ ತರಗತಿಗಳೂ ಆರಂಗೊಂಡಿವೆ. ಆ ವರ್ಷದಿಂದಲೇ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಶುರುವಾಗಿದೆ. ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ರಾಜ್ಯಮಟ್ಟದ ಸಾಧನೆ ತೋರಿದ್ದಾರೆ.

ADVERTISEMENT

ಸದ್ಯ 7ನೇ ತರಗತಿವರೆಗೆ 480 ವಿದ್ಯಾರ್ಥಿಗಳು ಓದುತ್ತಿದ್ದಾರೆ. 18 ಕೊಠಡಿ, 21 ಜನ ಕಾಯಂ ಶಿಕ್ಷಕರು, ಇಬ್ಬರು ಎಲ್‌ಕೆಜಿ, ಯುಕೆಜಿ ಶಿಕ್ಷಕರು, ಐವರು ಅಡುಗೆ ಸಿಬ್ಬಂದಿ, ಇಬ್ಬರು ಸಹಾಯಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಇದೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಈ ಶಾಲೆಗೆ ಪಕ್ಕದ ಜಿಲ್ಲೆಗಳ ವಿದ್ಯಾರ್ಥಿಗಳಿಂದಲೂ ಪ್ರವೇಶಕ್ಕೆ ಬೇಡಿಕೆ ಇದೆ.

ದಾನಿಗಳ ನೆರವು: 

ಭೂದಾನಿ ಶಾಂತಾಚಾರ್‌ ಮಡ್ಡಿ ಅವರ ಸೊಸೆ ರತ್ನಮಾಲಾ ಅವರು ಕಂಪ್ಯೂಟರ್‌ ಕೊಠಡಿ ನಿರ್ಮಿಸಿ ಕೊಟ್ಟಿದ್ದಾರೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಿಸಲು ಪ್ರತೀ ವರ್ಷ 1ನೇ ತರಗತಿಗೆ ಸೇರುವ ಎಲ್ಲಾ ವಿದ್ಯಾರ್ಥಿನಿಯರ ಹೆಸರಲ್ಲಿ ₹ 1,000 ಠೇವಣಿ ಇಡುತ್ತಿದ್ದಾರೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅವಶ್ಯವಿರುವ ಪರಿಕರಗಳನ್ನು ದಾನದ ರೂಪದಲ್ಲಿ ನೀಡುತ್ತಾ ಶಾಲೆಯ ಬೆನ್ನೆಲುಬಾಗಿ ನಿಂತಿದ್ದಾರೆ.

ಈ ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಶಿಕ್ಷಕ ವಿ. ನಂದೀಶ್‌ ಅವರು ಶಿರಸಿಯ ‘ಯೂತ್‌ ಫಾರ್‌ ಸೇವಾ’ ಘಟಕದ ಎನ್‌ಜಿಒ ಮೂಲಕ ₹ 4 ಲಕ್ಷ ಮೊತ್ತದ ಶಾಲಾ ಬ್ಯಾಗ್‌ ಮತ್ತು ಅಧ್ಯಯನ ಸಾಮಗ್ರಿ, ₹ 3 ಲಕ್ಷ ಮೊತ್ತದ ಸ್ಮಾರ್ಟ್‌ ಕ್ಲಾಸ್‌, ₹ 16 ಲಕ್ಷದ ಶೌಚಾಲಯ ಕಟ್ಟಡವನ್ನು ನಿರ್ಮಿಸಿದ್ದಾರೆ. ಆ ಮೂಲಕ ತಾವು ಕಲಿತ ಶಾಲೆಗೆ ಸಹಾಯ ಮಾಡಿದ್ದಾರೆ. 

ಬೆಂಗಳೂರಿನ ಎಚ್‌ಸಿಎಲ್‌ ಕಂಪನಿ 12 ಕಂಪ್ಯೂಟರ್‌ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದೆ. ದಾನಿಗಳು ಕುಡಿಯುವ ನೀರಿನ ಘಟಕ, ಯುಪಿಎಸ್‌ ಬ್ಯಾಟರಿಗಳು, ವಿದ್ಯಾರ್ಥಿಗಳಿಗೆ ಡೆಸ್ಕ್‌ ಸೇರಿದಂತೆ ಇನ್ನಿತರ ಉಪಕರಣಗಳನ್ನು ದಾನವಾಗಿ ನೀಡಿದ್ದಾರೆ. 

ನೀಗಿದ ಶಿಕ್ಷಕರ ಕೊರತೆ: 

ಶಾಲೆಗೆ ಶಿಕ್ಷಕರ ಕೊರತೆ ಇತ್ತು. ಇದನ್ನು ಮನಗಂಡ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು 10 ಜನ ಕಾಯಂ ಶಿಕ್ಷಕರನ್ನು ಶಾಲೆಗೆ ಒದಗಿಸಿದ್ದಾರೆ. ವಿವೇಕ ಯೋಜನೆಯಡಿ 6 ಕೊಠಡಿಗಳನ್ನೂ ಮಂಜೂರು ಮಾಡಿಸಿದ್ದಾರೆ.

ಮೂಲ ಸೌಕರ್ಯ ಹೊಂದಿರುವ ಶಾಲೆಯಲ್ಲಿ ಅಗತ್ಯ ಪುಸ್ತಕಗಳಿವೆ. ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಭೋಜನಾಲಯ, ಹಾಗೂ ಆಟದ ಮೈದಾನದ ಅಗತ್ಯವಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹೇಳುತ್ತಾರೆ.

‘ಶಾಲೆಯು ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಉತ್ತಮ ಹೆಸರು ಗಳಿಸಲು ಈ ಹಿಂದೆ ಸೇವೆ ಸಲ್ಲಿಸಿರುವ ಎಲ್ಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಜನಪ್ರತಿನಿಧಿಗಳು, ದಾನಿಗಳು ಕಾರಣ. ನೂರರ ಸಂಭ್ರಮದ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಸಹಕಾರ ನೀಡಬೇಕು’ ಎಂದು ಮುಖ್ಯಶಿಕ್ಷಕ ಬಸವರಾಜ ಆರ್‌. ಮಾಸೂರು ಹೇಳಿದರು. 

‘ಸಚಿವ ಮಧು ಬಂಗಾರಪ್ಪ ಅವರು ಕೆಪಿಎಸ್‌ನ ಮೂರು ಹಂತದ ಶಾಲೆಗಳಿಗೆ ಒಟ್ಟು 26 ಕೊಠಡಿಗಳನ್ನು ಮಂಜೂರು ಮಾಡಿಸಿದ್ದು, ಕಾಮಗಾರಿ ಪ್ರಗತಿಯಲ್ಲಿವೆ. 100 ವರ್ಷದ ಸಂಭ್ರಮ ಸಮಾರಂಭವನ್ನು ಸಚಿವರ ಉಪಸ್ಥಿತಿಯಲ್ಲಿ ಅರ್ಥಪೂರ್ಣವಾಗಿ ನಡೆಸಬೇಕಿದೆ. ಶೀಘ್ರವೇ ದಿನಾಂಕ ಅಂತಿಮಗೊಳಿಸಲಾಗುವುದು’ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಾಗರಾಜ ಶುಂಠಿ ತಿಳಿಸಿದರು. 

ಹಳೆ ವಿದ್ಯಾರ್ಥಿಗಳು ಕೈಜೋಡಿಸಲಿ

ಶಾಲೆಯ ಶತಮಾನೋತ್ಸವ ಸಮಾರಂಭಕ್ಕಾಗಿ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಆಚರಣಾ ಸಮಿತಿ ರಚಿಸಲಾಗಿದೆ. ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮುಖ್ಯ ಶಿಕ್ಷಕ ಬಸವರಾಜಪ್ಪ (ಮೊ.ನಂ 9740783371) ಸಿಡಿಸಿ ಉಪಾಧ್ಯಕ್ಷ ನಾಗರಾಜ (ಮೊ.ನಂ. 9686757119)  ಕೋರಿದ್ದಾರೆ.

ಆನವಟ್ಟಿಯ ಕೆಪಿಎಸ್‌ ಶಾಲೆಯ ಶಿಕ್ಷಕರ ತಂಡದೊಂದಿಗೆ ಸಿಆರ್‌ಪಿ ರುದ್ರೇಶ್‌ ಸಿಡಿಸಿ ಉಪಾಧ್ಯಕ್ಷ ನಾಗರಾಜ ಶುಂಠಿ ಇದ್ದಾರೆ
ಆನವಟ್ಟಿಯ ಶಾಂತಾಚಾರ್‌ ಮಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಕೆಪಿಎಸ್‌)
ಆನವಟ್ಟಿಯ ಶಾಂತಾಚಾರ್‌ ಮಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಕೆಪಿಎಸ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.