ಕಾರ್ಗಲ್: ‘ಅಂಗನವಾಡಿ ಕಾರ್ಯಕರ್ತೆಯರಿಗೆ ನ್ಯಾಯಬದ್ಧವಾಗಿ ದೊರಕಬೇಕಾದ ಸಂಬಳ ಹೆಚ್ಚಳದ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ ನೀಡಿದರು.
ಇಲ್ಲಿನ ಚೌಡೇಶ್ವರಿ ದೇಗುಲ ಸಂಕೀರ್ಣದ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ವತಿಯಿಂದ ನಡೆಸಲಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಗಳ ಬಗ್ಗೆ ಸರ್ವೆ ಕಾರ್ಯ ಸೇರಿ ಹಲವು ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಆದರೆ, ಪ್ರತಿಫಲದ ಮೊತ್ತ ಕಡಿಮೆಯಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ₹1,000 ಸಂಬಳವನ್ನು ಹೆಚ್ಚಿಸಲಾಗಿತ್ತು. ಮುಂದಿನ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಎಲ್ಲ ರೀತಿಯ ಸೌಲಭ್ಯ ನೀಡಲು ಸಹಕಾರ ನೀಡಲಾಗುವುದು’ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ಸಂಚಾಲಕ ರವೀಂದ್ರ ಸಾಗರ್, ರಾಜ್ಯ ಸಂಘಟನೆಯ ಕಾರ್ಯದರ್ಶಿ ಜಯಲಕ್ಷ್ಮೀ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ರಾಜು, ಮುಖ್ಯಾಧಿಕಾರಿ ಎಂ.ಕೆ. ಸುರೇಶ್, ವರಲಕ್ಷ್ಮೀ, ಶ್ರೀಲತಾ, ಎಸ್.ಎಲ್. ರಾಜಕುಮಾರ್, ಎಚ್.ಎಸ್. ಸಾದಿಕ್, ಬಿ. ಉಮೇಶ್, ಕೆ. ವಿಜಯಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.