ADVERTISEMENT

ಶಿವಮೊಗ್ಗ | ಎಲೆಚುಕ್ಕೆ ರೋಗ ನಿಯಂತ್ರಣ, ಶೀಘ್ರ ಮಾರ್ಗಸೂಚಿ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 5:16 IST
Last Updated 25 ಡಿಸೆಂಬರ್ 2025, 5:16 IST
ಶಿವಮೊಗ್ಗದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳ ಸಭೆ ನಡೆಸಿದರು
ಶಿವಮೊಗ್ಗದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳ ಸಭೆ ನಡೆಸಿದರು   

ಶಿವಮೊಗ್ಗ: ಮಲೆನಾಡು ಪ್ರದೇಶದಲ್ಲಿ ತೀವ್ರವಾಗಿರುವ ಅಡಿಕೆ ಎಲೆಚುಕ್ಕೆ ರೋಗದಿಂದಾಗಿ ಸಣ್ಣ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ವಿಜ್ಞಾನಿಗಳ ಮಾರ್ಗದರ್ಶನ ಪಡೆದು ಹತೋಟಿ ಕ್ರಮ ಕೈಗೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಲೆ ಚುಕ್ಕೆ ರೋಗ ನಿಯಂತ್ರಣ ಮತ್ತು ಇತರೆ ವಿಷಯ ಕುರಿತು ಚರ್ಚಿಸಲು ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿ ಅವರು ಮಾತನಾಡಿದರು.

ಮಳೆಗಾಲದಲ್ಲಿ ಹೆಚ್ಚು ಹರಡುವ ಎಲೆ ಚುಕ್ಕೆ ರೋಗ ನಿಯಂತ್ರಣ ದುಬಾರಿ ಆಗಿದೆ. ರೋಗ ನಿಯಂತ್ರಣ ಕ್ರಮಗಳ ಅನುಷ್ಠಾನಕ್ಕೆ ಕೇಂದ್ರ ಮತ್ತು ರಾಜ್ಯ ಕ್ರಮವಾಗಿ ಶೇ 60 ಮತ್ತು ಶೇ 40 ಹಣ ನೀಡಲು ಸಿದ್ದವಿದ್ದು, ಮುಖ್ಯವಾಗಿ ರೋಗ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳ ಅಭಿಪ್ರಾಯ ಮತ್ತು ಮಾರ್ಗದರ್ಶನದ ಮೇಲೆ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ ಎಂದರು.

ADVERTISEMENT

ಸರ್ಕಾರದ ವಿವಿಧ ಇಲಾಖೆಗಳು, ಗ್ರಾಮ ಪಂಚಾಯಿತಿ, ಸಹಕಾರ ಸಂಘಗಳು, ಅಡಿಕೆ ಮಾರಾಟ ಸಹಕಾರ ಸಂಘಗಳ ಮೂಲಕ ರೈತರಿಗೆ ಈ ರೋಗ ನಿಯಂತ್ರಣದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಅರ್ಧ, ಮುಕ್ಕಾಲು ಎಕರೆ ಹೊಂದಿರುವ ಸಣ್ಣ ರೈತರಿಗೆ ಈ ರೋಗದಿಂದ ತೊಂದರೆಯಾಗುತ್ತಿದೆ. ರೋಗ ನಿಯಂತ್ರಣಕ್ಕಾಗಿ ಎಲ್ಲರೂ ಸೇರಿ ತಂಡವಾಗಿ ಕಾರ್ಯ ನಿರ್ವಹಿಸೋಣ ಎಂದರು.

ಇನ್ನು 15 ದಿನಗಳಲ್ಲಿ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಕೊಳಚೆ ಪ್ರದೇಶಗಳ ಗುರುತಿಸಿ ಅವರಿಗೆ ಹಕ್ಕುಪತ್ರ, ಇ–ಸ್ವತ್ತು ನೀಡಲು ಕ್ರಮ ಜರುಗಿಸುವಂತೆ ಡಿಯುಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಜಿ.ಪಂ ಸಿಇಒ ಎನ್. ಹೇಮಂತ್, ಸಿಸಿಎಫ್ ಕೆ.ಟಿ.ಹನುಮಂತಪ್ಪ, ಎಡಿಸಿ ವಿ.ಅಭಿಷೇಕ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕೃಷಿ ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ದೇವಿಕುಮಾರ್, ಉಪವಿಭಾಗಾಧಿಕಾರಿ ಸತ್ಯನಾರಾಯಣ ಹಾಜರಿದ್ದರು.

ಜಿಲ್ಲೆಯ ಕೊಳಚೆ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸವನ್ನು ಆಂದೋಲನದ ರೀತಿಯಲ್ಲಿ ಅಧಿಕಾರಿಗಳು ಮಾಡಬೇಕು
ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಅತಿ ಹೆಚ್ಚು ಕೆಪಿಎಸ್ ಶಾಲೆ ಶ್ರೇಯ..
ರಾಜ್ಯದಲ್ಲಿ ಮೊದಲ ಬಾರಿಗೆ ₹ 3500 ಕೋಟಿ ಅನುದಾನದಲ್ಲಿ 900 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುತ್ತಿದೆ. ಇದು ನಾಡಿನ ಶೈಕ್ಷಣಿಕ ಇತಿಹಾಸದಲ್ಲಿ ದೊಡ್ಡ ಮತ್ತು ಅತ್ಯುತ್ತಮ ಯೋಜನೆಯಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು. ಜಿಲ್ಲೆಯಲ್ಲಿ ಈಗಾಗಲೇ 11 ಕೆಪಿಎಸ್ ಶಾಲೆಗಳಿದ್ದು ಹೊಸದಾಗಿ 19 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಇಂತಹ ದೊಡ್ಡ ಯೋಜನೆಗೆ ಶಿವಮೊಗ್ಗದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ಕೊಡಿಸಲಾಗುತ್ತಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.