ADVERTISEMENT

ತೀರ್ಥಹಳ್ಳಿ: ಯಕ್ಷಗಾನ ಕ್ಷೇತ್ರದ ಸಾಧನೆಗೆ ಅರಸಿ ಬಂದ ರಾಜ್ಯೋತ್ಸವ ಪ್ರಶಸ್ತಿ

ಜಿಲ್ಲೆಯ ನಾಲ್ವರು ಸಾಧಕರಿಗೆ ಪ್ರಶಸ್ತಿ ಗರಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 6:24 IST
Last Updated 1 ನವೆಂಬರ್ 2021, 6:24 IST
ಗೋಪಾಲಾಚಾರ್ಯ
ಗೋಪಾಲಾಚಾರ್ಯ   

ತೀರ್ಥಹಳ್ಳಿ: ಯಕ್ಷಗಾನ ಕ್ಷೇತ್ರದಲ್ಲಿ ತೋರಿಸಿದ ವಿಶೇಷ ಸಾಧನೆಗಾಗಿ ಗೋಪಾಲಾಚಾರ್ಯ ಅವರು ಈ ಬಾರಿಯ ಕನ್ನಡ ರಾಜೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಡಗುತಿಟ್ಟು ಯಕ್ಷಗಾನದಲ್ಲಿ ‘ತೀರ್ಥಹಳ್ಳಿ’ ಎಂದೇ ಜನಪ್ರಿಯರಾಗಿರುವ ಯಕ್ಷರಂಗದ ‘ಸಿಡಿಲಮರಿ’, ‘ಅಭಿಮನ್ಯು’ ಹೆಸರಿನಿಂದ ಪ್ರಸಿದ್ಧರಾಗಿರುವ ಗೋಪಾಲ್ ಆಚಾರ್ಯ ಅವರು 1955ರಲ್ಲಿ ಜನಿಸಿದರು. ತಂದೆ ವಾಸುದೇವ್ ಆಚಾರ್, ತಾಯಿ ಸುಲೋಚನಾ.

ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿ ಗ್ರಾಮದವರು. ಪ್ರಸ್ತುತ ಬೈಂದೂರು ನಾಯಕನಕಟ್ಟೆಯಲ್ಲಿ ವಾಸವಾಗಿದ್ದಾರೆ. 3ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದರೂ ಯಕ್ಷಗಾನದಲ್ಲಿ ಅಪಾರವಾದ ಪಾಂಡಿತ್ಯ ಹೊಂದಿದ್ದಾರೆ.

ADVERTISEMENT

ಅದ್ಭುತ ಲಯ, ಅಪಾರ ಶ್ರುತಿ ಬದ್ಧತೆ, ರಂಗ ನಡೆಗಳು, ಪೌರಾಣಿಕ ಪ್ರಜ್ಞೆ, ಪ್ರವೇಶದಿಂದ ನಿರ್ಗಮನದವರೆಗೆ ಪ್ರೇಕ್ಷಕರ ಗಮನ ಸೆಳೆಯುವ ಮಾಂತ್ರಿಕ ಶಕ್ತಿ ಕರಗತ ಮಾಡಿಕೊಂಡಿರುವ ಅವರು ಮೇಳದ ತಿರುಗಾಟ ನಿಲ್ಲಿಸಿದರೂ, ಗಜ್ಜೆಕಟ್ಟಿ ಯುವಕರನ್ನು ನಾಚಿಸುವಂತೆ ಉತ್ಸಾಹದಲ್ಲಿ ಕುಣಿಯುತ್ತಿದ್ದಾರೆ. ಬಡಗುತಿಟ್ಟು ಯಕ್ಷರಂಗವನ್ನು ಶ್ರೀಮಂತ ಗೊಳಿಸಿದ ಹೆಗ್ಗಳಿಕೆ ಅವರದು.

ರಂಜದಕಟ್ಟೆ, ನಾಗರಕೊಡಿಗೆ, ಸಾಲಿಗ್ರಾಮ ಮೇಳಗಳಲ್ಲಿ ತಿರುಗಾಟ ನಡೆಸಿ, ಪೆರ್ಡೂರು ಮೇಳವೊಂದರಲ್ಲೇ 30ಕ್ಕೂ ಹೆಚ್ಚು ವರ್ಷ ತಿರುಗಾಟ ನಡೆಸಿ ನಿವೃತ್ತರಾಗಿದ್ದರು. ಅಪಾರ ಅಭಿಮಾನಿಗಳ ಸಮಕ್ಷಮದಲ್ಲಿ ‘ಅರವತ್ತರ ಅಭಿಮನ್ಯು’ ಎಂಬ ಕಾರ್ಯಕ್ರಮದಲ್ಲಿ ‘ಪದ್ಮಶ್ರೀ ರಾಮಚಂದ್ರ ಚಿಟ್ಟಾಣಿ’ ಅವರ ‘ದ್ರೋಣ’ ಪಾತ್ರದ ಎದುರು ‘ಅಭಿಮನ್ಯು’ವಾಗಿ ನವ ತರುಣನಂತೆ ವೀರಾವೇಶ ತೋರಿ ರಂಗದ ಮೇಲೆ ದೂಳೆಬ್ಬಿಸಿದ್ದರು.

ಇವರ ವಿಶೇಷ ಸಾಧನೆಯನ್ನು ಗುರುತಿಸಿ ಉಡುಪಿ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ನೂ ಅನೇಕ ಸಂಘ ಸಂಸ್ಥೆಗಳು ಈ ಅರವತ್ತರ ನವಯುವಕನ ರಂಗಸಾಧನೆಗೆ ಪ್ರಶಸ್ತಿ, ಪಾರಿತೋಷಕ ನೀಡಿ ಗೌರವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.