
ಸೊರಬ: ಮಾಜಿ ಮುಖ್ಯಂಮತ್ರಿ ಎಸ್. ಬಂಗಾರಪ್ಪ ಅವರು ರಾಜ್ಯಕ್ಕೆ ಹಲವಾರು ಯೋಜನೆಗಳ ಮೂಲಕ ಮರೆಯದಂತ ಕೊಡುಗೆಗಳನ್ನು ನೀಡುವುದರ ಜತೆಗೆ ತಮ್ಮ ನೇರ ನುಡಿ ಹಾಗೂ ದಿಟ್ಟ ನಿಲುವುಗಳಿಂದ ರಾಜ್ಯದೆಲ್ಲೆಡೆ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಎಂ.ಡಿ ಉಮೇಶ್ ಹೇಳಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಬಿಜೆಪಿ ಹಾಗೂ ಕುಮಾರ್ ಬಂಗಾರಪ್ಪ ಅಭಿಮಾನಿಗಳ ಬಳದ ವತಿಯಿಂದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 14ನೇ ಪುಣ್ಯಸ್ಮರಣೆ ಅಂಗವಾಗಿ ಬಂಗಾರಪ್ಪ ಅವರ ಪುತ್ಥಳಿಗೆ ಮಾಲಾರ್ಪಣೆ ನೆರೆವೇರಿಸಿ ಮಾತನಾಡಿದರು.
ರಾಜ್ಯದ ಬಡವರ ಹಾಗೂ ಕೂಲಿಕಾರ್ಮಿಕರ ಪರವಾಗಿ ಜಾರಿಗೊಳಿಸಿದ್ದ ವಿವಿಧ ಯೋಜನೆಗಳು ಜನರ ಮನಸ್ಸಿನಲ್ಲಿ ಬಂಗಾರಪ್ಪ ಅವರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿವೆ. ಅವರ ಆಡಳಿತದ ಪ್ರತಿಯೊಂದು ಯೋಜನೆಗಳೂ ನಮಗೆ ಮಾದರಿ. ಬಗರ್ ಹುಕುಂ ಹಾಗೂ ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಒದಗಿಸುವ ಯತ್ನ ಅವರ ಅವಧಿಯಲ್ಲಿ ನಡೆದಿತ್ತು. ಬಂಗಾರಪ್ಪ ಅವರು ರೈತಪರ ಮುಖ್ಯಮಂತ್ರಿಯಾಗಿದ್ದರು. ಬಂಗಾರಪ್ಪ ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿ ಬಹಳಷ್ಟಿದೆ ಎಂದರು.
ಕೊಡಕಣಿ ಟೇಕಣ್ಣ, ಅಶೋಕ್ ಶೇಟ್, ಪ್ರಭು ಮೇಸ್ತ್ರಿ, ಗಿರಿಯಪ್ಪ ತವನಂದಿ, ಪುರದ ಭರ್ಮಣ್ಣ, ಅಭಿ ಗೌಡ ಬೆನ್ನೂರು, ರಾಜು ಬೈರೆಕೊಪ್ಪ, ಶರತ್ ಗೆಂಡ್ಲ ಹೊಸೂರು, ಕೃಷ್ಣಮೂರ್ತಿ ಕೊಡಕಣಿ, ರಂಗಣ್ಣ, ಚಂದ್ರು ಮಾಸೂರು, ರಘು ಭಂಡಾರಿ, ತಾಟಪ್ಪ, ಬಸವರಾಜ್ ಶೇಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.