ADVERTISEMENT

ಶಿವಮೊಗ್ಗ | ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಿರಿ: ಮನವಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 5:18 IST
Last Updated 25 ಡಿಸೆಂಬರ್ 2025, 5:18 IST
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಹಿಂದೂ ಜನಜಾಗೃತಿ ವೇದಿಕೆಯಿಂದ ನಡೆದ ಪ್ರತಿಭಟನೆಯ ನೋಟ
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಹಿಂದೂ ಜನಜಾಗೃತಿ ವೇದಿಕೆಯಿಂದ ನಡೆದ ಪ್ರತಿಭಟನೆಯ ನೋಟ   

ಶಿವಮೊಗ್ಗ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಹತ್ಯೆ ಖಂಡಿಸಿ ಬುಧವಾರ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಆಂತರಿಕ ಕಲಹಕ್ಕೆ ಹಿಂದೂ ಸಮುದಾಯದವರನ್ನು ಗುರಿಯಾಗಿಸಲಾಗುತ್ತಿದೆ. ಜೊತೆಗೆ ಭಾರತದ ಭೂ ಪ್ರದೇಶವನ್ನು ಬಾಂಗ್ಲಾಗೆ ಸೇರಿಸಿಕೊಳ್ಳುವ ಹುನ್ನಾರ ಕೂಡ ನಡೆಯುತ್ತಿದೆ. ಜೊತೆಗೆ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದೂಗಳ ವಿರುದ್ಧ ದ್ವೇಷ ಕಾರುವ ಹಾಗೂ ಬರ್ಬರವಾಗಿ ಹತ್ಯೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಈ ಅಮಾನುಷ ದೌರ್ಜನ್ಯಗಳನ್ನು ನಿಲ್ಲಿಸಿ ಅಲ್ಲಿನ ಹಿಂದೂ ಸಮುದಾಯವನ್ನು ರಕ್ಷಣೆ ಮಾಡುವಂತೆ ಬಾಂಗ್ಲಾದ ಹಂಗಾಮಿ ಸರ್ಕಾರದ ಮೇಲೆ ಜಾಗತಿಕ ಸಮುದಾಯ ಒತ್ತಡ ಹೇರಬೇಕಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಯತ್ನಗಳ ನಡೆಸಬೇಕು. ರಾಜತಾಂತ್ರಿಕ ಕ್ರಮಗಳ ಕೈಗೊಳ್ಳಬೇಕು. ಬಾಂಗ್ಲಾದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಅಂತಾರಾಷ್ಟ್ರೀಯ ಸಮುದಾಯ ಕೂಡ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ರಾಜ್ಯ ಸರ್ಕಾರವು ಜಾರಿಗೆ ತರಲು ಹೊರಟಿರುವ ದ್ವೇಷ ಭಾಷಣ ವಿರೋಧಿ ವಿಧೇಯಕವನ್ನು ತಕ್ಷಣವೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದ ಪ್ರತಿಭನಾಕಾರರು, ಪ್ರಸ್ತಾವಿತ ವಿಧೇಯಕವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಆದ್ದರಿಂದ ಈ ವಿಧೇಯಕವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ದಿನೇಶ್ ಚೌಹಾಣ್, ರಮೇಶ್ ಬಾಬು, ವಾಸುದೇವ, ಎಚ್.ಪ್ರಫುಲ್ಲಚಂದ್ರ, ಪರಿಸರ ರಮೇಶ್, ಯೋಗೇಶ್, ಪ್ರದೀಪ್, ಮುಕುಂದ, ಬಸವರಾಜ್, ಶಬರೀಶ್ ಇದ್ದರು.

ಬಾಂಗ್ಲಾದಲ್ಲಿನ ದೌರ್ಜನ್ಯ ತಡೆ; ಗೋಪಾಲಗೌಡ ಟ್ರಸ್ಟ್ ಒತ್ತಾಯ

ಶಿವಮೊಗ್ಗ : ನೆರೆಯ ಬಾಂಗ್ಲಾದೇಶದಲ್ಲಿ ಪ್ರತಿನಿತ್ಯ ಹಿಂದೂ ಬೌದ್ಧ ಮತ್ತು ಕ್ರಿಶ್ಚಿಯನ್ನರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು ಅಲ್ಲಿ ನಡೆಯುತ್ತಿರುವ ನರಮೇಧವ ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಂತವೇರಿ ಗೋಪಾಲಗೌಡ ಅಧ್ಯಯನ ಕೇಂದ್ರ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಟ್ರಸ್ಟ್‌ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು  ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ಡಿಸೆಂಬರ್ 18ರಂದು  ಹಿಂದೂ ಯುವಕ ದೀಪುಚಂದ್ರನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹೊಳೆಮಡಿಲು ವೆಂಕಟೇಶ್ ಎಚ್.ಎಂ. ಸಂಗಯ್ಯ ಶಂಕ್ರಾನಾಯ್ಕ ಕೋಡ್ಲು ಶ್ರೀಧರ್ ಎಸ್.ಪಿ.ಶಿವಣ್ಣ ಅಲೀಂಖಾನ್ ಜನಮೇಜಿರಾವ್ ರಘುನಾಥ್ ಅರಸಾಳು ವೇದಾಂತಗೌಡ ರಾಮಣ್ಣ ಗೋಪಾಳ ಬಸವರಾಜ್ ಪಿ.ಎಚ್. ಬಾಬು ಹಯಾತ್ ಸಾಬ್ ಲಕ್ಕಿನಕೊಪ್ಪ ಎಂ. ಮೋಹನ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.