ADVERTISEMENT

ಬಸವೋತ್ಸವ ಆಚರಣೆ|‘ಜಾಗತಿಕ ವಿಪ್ಲವಗಳಿಗೆ ಬಸವಣ್ಣನ ಆಶಯಗಳೇ ಬೆಳಕು’: ಡಾ.ಅವಿನಾಶ್‌

​ಪ್ರಜಾವಾಣಿ ವಾರ್ತೆ
Published 10 ಮೇ 2025, 14:34 IST
Last Updated 10 ಮೇ 2025, 14:34 IST
ಶಿವಮೊಗ್ಗದಲ್ಲಿ ಶುಕ್ರವಾರ ಸಂಜೆ ನಡೆದ ಬಸವೋತ್ಸವದಲ್ಲಿ ವಚನ ಪುಸ್ತಕವನ್ನು ಗಣ್ಯರು ಹಾಗೂ ಮಠಾಧೀಶರು ಬಿಡುಗಡೆ ಮಾಡಿದರು
ಶಿವಮೊಗ್ಗದಲ್ಲಿ ಶುಕ್ರವಾರ ಸಂಜೆ ನಡೆದ ಬಸವೋತ್ಸವದಲ್ಲಿ ವಚನ ಪುಸ್ತಕವನ್ನು ಗಣ್ಯರು ಹಾಗೂ ಮಠಾಧೀಶರು ಬಿಡುಗಡೆ ಮಾಡಿದರು   

ಶಿವಮೊಗ್ಗ: ಇಂದಿನ ಸಾಮಾಜಿಕ ಮೌಲ್ಯಗಳ ಕುಸಿತ, ಹಿಂಸೆ, ಅಸಹಿಷ್ಣತೆ, ಮನುಷ್ಯ ಮನುಷ್ಯರ ನಡುವೆ ದ್ವೇಷ, ದಳ್ಳುರಿ, ಜಾಗತಿಕ ಅಶಾಂತಿ, ಮೌಢ್ಯತೆ, ಕಂದಾಚಾರಗಳ ಆಚರಣೆ, ಮಾನವ ಹಕ್ಕುಗಳ ಮೇಲಿನ ದಾಳಿ, ನೈತಿಕ ಅಧಃಪತನದಂತಹ ಮಾನವ ಸಮಾಜದ ಈಗಿನ ವಿಪ್ಲವಗಳಿಗೆ ಬಸವಣ್ಣ ದೊಂದಿಯಾಗಿ ಬೆಳಕು ತೋರುತ್ತಾರೆ ಎಂದು ಬೆಳಗಾವಿಯ ವೈದ್ಯ ಡಾ.ಅವಿನಾಶ್‌ ಕವಿ ಹೇಳಿದರು.

ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಶುಕ್ರವಾರ ಸಂಜೆ ಬಸವ ಜಯಂತಿ ಆಚರಣೆ ಸಮಿತಿ ಆಯೋಜಿಸಿದ್ದ ಬಸವೋತ್ಸವ ಹಾಗೂ ಸಾವಿರದ ವಚನ ಗಾಯನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಹೀಗಾಗಿಯೇ ರಾಷ್ಟ್ರಕವಿ ಕುವೆಂಪು ಕಾರ್ತಿಕದ ಕತ್ತಲಲ್ಲಿ ಆಕಾಶದೀಪವಾಗಿ ಬಂದವರು ಎಂದು ಬಸವಣ್ಣನನ್ನು ಬಣ್ಣಿಸಿದ್ದರು ಎಂಬುದನ್ನು ಉಲ್ಲೇಖಿಸಿದರು.

ಜಾತಿ, ವರ್ಣ, ವರ್ಗ, ಲಿಂಗ ಬೇಧಗಳನ್ನು ಹೊಡೆದೋಡಿಸಿ ಇವನಾರವ ಇವನಾರವ ಎಂದೆಣಿಸದೇ ಇವ ನಮ್ಮವ ಇವ ನಮ್ಮವ ಎಂದು ಎಲ್ಲರನ್ನೂ ಅಪ್ಪುವ ಸಮ ಸಮಾಜದ ರಚನೆಯ ಹಾದಿಯಲ್ಲಿ ನಡೆದುಬಂದ ಬಸವಣ್ಣನವರೊಂದಿಗೆ ಅನೇಕ ಶರಣರು, ದಾರ್ಶನಿಕರು, ಕವಿಗಳು ಪ್ರೇರಣೆ ಪಡೆದು ಅವರೊಂದಿಗೆ ಆತ್ಮಸಖ್ಯ ಬೆಳೆಸಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನೋಡುತ್ತಿದ್ದೇವೆ. ಹೀಗಾಗಿ ಬಸವಣ್ಣ ಬರೀ ಲಿಂಗಾಯತರಿಗೆ ಮಾತ್ರವಲ್ಲ ಜಾಗತಿಕ ಸಮುದಾಯಕ್ಕೆ ಸಾಂಸ್ಕೃತಿಕ ನಾಯಕ ಎಂದು ಅಭಿಪ್ರಾಯಪಟ್ಟರು.

ADVERTISEMENT

ಈ ಕಾರ್ಯಕ್ರಮ ಇಡೀ ನಾಡಿಗೆ ಹೊಸ ಸಂದೇಶ ನೀಡುತ್ತಿದೆ. ಒಂದು ವೇದಿಕೆ ಸಾವಿರ ಕಂಠ, ಸಮಾನ ಧ್ವನಿಯಾಗಿ ಬಸವಣ್ಣನವ ವಿಶ್ವಸಂದೇಶವನ್ನು ಜಗತ್ತಿಗೆ ಮುಟ್ಟಿಸುವ ವೇದಿಕೆ ಆಗಿರುವುದು ವಿಶೇಷ. ಪರಿಕಲ್ಪನೆ ಬಸವ ಮರುಳಸಿದ್ಧ ಸ್ವಾಮೀಜಿ, ಆಶೀರ್ವದಿಸಿದವರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಆಸರೆಯಾದವರು ಬಸವ ಜಯಂತಿ ಆಚರಣೆ ಸಮಿತಿಯವರು ಎಂದು ಶ್ಲಾಘಿಸಿದರು.

ಸಾವಿರ ವರ್ಷಕ್ಕೂ ಮುನ್ನಡೆಯುವ, ಮಾರ್ಗದರ್ಶನ ನೀಡುವ ಈ ವಚನಗಳು ಇಡೀ ಸಮಾಜಕ್ಕೆ ಪ್ರೇರಣೆ ನೀಡುತ್ತಿವೆ. ಬಸವಣ್ಣನವರ ಅನುಭವ ಮಂಟಪದ ಸಾಂಸ್ಕೃತಿಕ ಸಂಘಟನೆಯ ವ್ಯಕ್ತರೂಪವಾಗಿ ಈ ಬಸವೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಭೌತಿಕವಾಗಿ ಸಾಕ್ಷಿಯಾಗಿರುವುದು ಪುಣ್ಯದ ಸಂಗತಿ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಡಾ.ಧನಂಜಯ ಸರ್ಜಿ ಮಾತನಾಡಿ ಕಾರ್ಯಕ್ರಮದ ಆಯೋಜನೆಯ ಹಿಂದಿನ ಆಶಯ ಬಿಚ್ಚಿಟ್ಟರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಬಿ.ಕೆ.ಸಂಗಮೇಶ್‌, ಡಿ.ಜಿ.ಶಾಂತನಗೌಡ, ಡಿ.ಎಸ್.ಅರುಣ್, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಪ್ರಸನ್ನಕುಮಾರ್‌, ಬಸವೋತ್ಸವ ಸಮಿತಿ ಅಧ್ಯಕ್ಷ ಎಸ್.ರುದ್ರೇಗೌಡ, ಮಾಜಿ ಶಾಸಕ ಆಯನೂರು ಮಂಜುನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಸುಡಾ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ, ಬಸವೋತ್ಸವ ಸಮಿತಿಯ ಎಸ್‌.ಎಸ್.ಜ್ಯೋತಿಪ್ರಕಾಶ್, ಎಚ್‌.ಸಿ.ಯೋಗೀಶ್, ಬಳ್ಳೇಕೆರೆ ಸಂತೋಷ, ಮಾಡಾಳ್ ಮಲ್ಲಿಕಾರ್ಜುನ, ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್‌.ಆರ್.ಬಸವರಾಜಪ್ಪ ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ಶುಕ್ರವಾರ ಸಂಜೆ ನಡೆದ ಬಸವೋತ್ಸವದಲ್ಲಿ ಪಾಲ್ಗೊಂಡ ಜನಸಮೂಹ

ಏಕಕಂಠದಲ್ಲಿ ಒಡಮೂಡಿದ 1400ಕ್ಕೂ ಹೆಚ್ಚು ದನಿಗಳು

ವಚನಗಳ ಮೌಲ್ಯಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಶಿವಮೊಗ್ಗದ ಬಸವ ಜಯಂತಿ ಆಚರಣೆ ಸಮಿತಿಯು ಇಲ್ಲಿನ ಅಲ್ಲಮಪ್ರಭು ಬಯಲಿನಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ’ಸಾವಿರದ ವಚನ‘ ವಿಶೇಷ ಕಾರ್ಯಕ್ರಮ ಸಾವಿರಾರು ಜನರ ಸಾಕ್ಷೀಕರಿಸಿತು. ಮೂರು ಸಮಾನ ವೇದಿಕೆಯಲ್ಲಿ ಏಕಕಾಲದಲ್ಲಿ 1400ಕ್ಕೂ ಹೆಚ್ಚು ಜನರು ಗಾಯಕ ದಿವಂಗತ ಸಿ.ಅಶ್ವತ್ಥ್ ಅವರ ರಾಗ ಸಂಯೋಜನೆಯ 38 ವಚನಗಳನ್ನು ಒಳಗೊಂಡ ಎಂಟು ಹಾಡುಗಳಿಗೆ ದನಿಗೂಡಿಸಿದರು. ಏಕಕಾಲದಲ್ಲಿ ಸಾವಿರ ಕಂಠಗಳಿಂದ ಮೂಡಿ ಬಂದ ವಚನಗಳ ಸಾರವನ್ನು ನೆರೆದವರು ಆಸ್ವಾದಿಸಿದರು. ಸಿ. ಅಶ್ವತ್ಥ್ ಅವರ ಮಾಂತ್ರಿಕ ಸಂಗೀತಕ್ಕೆ ತಲೆದೂಗಿ ತಾವೂ ಹಾಡಿ ಖುಷಿಪಟ್ಟರು. ಸಿ.ಅಶ್ವತ್ಥ್ ತಂಡದಲ್ಲಿ ಹಾಡಿದ್ದ ಮೈಸೂರಿನ ಜನಾರ್ಧನ್ (ಜನ್ನಿ) ಶಿವಮೊಗ್ಗದ ಕೆ.ಯುವರಾಜ್ ಚಿಕ್ಕಮಗಳೂರಿನ ಮಲ್ಲಿಗೆ ಸುಧೀರ್ ಹಾಗೂ ಸುರೇಖಾ ಹೆಗಡೆ ವಿದ್ವಾನ್‌ ಗುರುಗಹ ನಾಗರಾಜ್ ಮಂಜುಳಾ ನಾಗರತ್ನ ಪ್ರಹ್ಲಾದ್ ವಿನಯ್ ಜಯಶ್ರೀ ಆರ್‌.ಎಸ್.ಹಾಲಸ್ವಾಮಿ ಗಾಯಕರಿಗೆ ಮಾರ್ಗದರ್ಶನ ಮಾಡಿದರು.

ಪಕ್ಷಾತೀತವಾಗಿ ವೇದಿಕೆ ಹಂಚಿಕೊಂಡರು..

ಅವಿಭಜಿತ ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ವೇದಿಕೆ ಹಂಚಿಕೊಂಡು ಬಸವಣ್ಣನಿಗೆ ವಚನ ಆರತಿ ಬೆಳಗಲು ಕೈಜೋಡಿಸಿದರು. ಮಲೆನಾಡಿನ ಎಲ್ಲ ಮಠಾಧೀಶರು ಹಾಗೂ ಬೇರೆ ಬೇರೆ ಧರ್ಮ ಗುರುಗಳು ಹಾಜರಿದ್ದು ಬಸವತತ್ವದ ನಿಜಾಚರಣೆಗೆ ಸಾಕ್ಷಿಯಾದರು. ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಅವರ ಪರಿಕಲ್ಪನೆ ಹಾಗೂ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಜಾತಿ ಧರ್ಮ ಲಿಂಗ ವಯೋಮಾನದ ಬೇಧವಿಲ್ಲದೇ ಗಾಯನಾಸಕ್ತರು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.