ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು
ಶಿವಮೊಗ್ಗ: ಭದ್ರಾ ಬಲದಂಡೆ ನಾಲೆಯನ್ನು ಒಡೆದು ಕುಡಿಯುವ ನೀರಿನ ಯೋಜನೆಗೆ ನೀರು ಒಯ್ಯಲಾಗುತ್ತಿದೆ. ಅದು ಅವೈಜ್ಞಾನಿಕ ಎಂದು ಆರೋಪಿಸಿ ಸೋಮವಾರ ಭದ್ರಾ ಜಲಾಶಯಕ್ಕೆ ಮುತ್ತಿಗೆ ಹಾಕಲು ಮಾಜಿ ಸಚಿವ ರೇಣುಕಾಚಾರ್ಯ, ನೇತೃತ್ವದಲ್ಲಿ ಹೊರಟ ರೈತರ ಗುಂಪನ್ನು ಭದ್ರಾ ಯೋಜನಾ ಪ್ರದೇಶದ ಸಿಂಗನಮನೆಯ ಸೇತುವೆ ಬಳಿ ತಡೆದ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ, ಕಡೂರು ತಾಲ್ಲೂಕುಗಳ 1200 ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯಲು ನೀರು ಕೊಡಲು ನಾಲೆಯನ್ನು ಸೀಳಿ ನೀರು ಒಯ್ಯಲಾಗುತ್ತಿದೆ. ಇದರಿಂದ ನಾಲೆಯಲ್ಲಿ ನೀರಿನ ಸಹಜ ಹರಿವಿಗೆ ಅಡ್ಡಿಯಾಗಿ ದಾವಣಗೆರೆ ಜಿಲ್ಲೆಯ ಕೊನೆಯ ಭಾಗದ ರೈತರಿಗೆ ತೊಂದರೆಯಾಗಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಯಲು ಸೀಮೆಗೆ ನೀರು ಕೊಡಲು ನಮ್ಮ ಅಭ್ಯಂತರವಿಲ್ಲ. ಕಾಲುವೆ ಒಡೆಯುವ ಬದಲು ಜಲಾಶಯದಿಂದ ನೇರವಾಗಿ ನೀರು ಕೊಂಡೊಯ್ಯಲು ಆಗ್ರಹಿಸಿದರು.
ದಾವಣಗೆರೆ ಜಿಲ್ಲೆ ಬಿಜೆಪಿ ಅಧ್ಯಕ್ಷ ರಾಜಶೇಖರ್, ಮಾಯಕೊಂಡ ಮಾಜಿ ಶಾಸಕ ಬಸವರಾಜ ನಾಯ್ಕ, ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ, ಮಾಡಾಳು ಮಲ್ಲಿಕಾರ್ಜುನ, .ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ್, ಕೊಳೇನಹಳ್ಳಿ ಸತೀಶ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.