ADVERTISEMENT

27ಕ್ಕೆ ಭದ್ರಾವತಿ ನಗರಸಭಾ ಚುನಾವಣೆ: ರಂಗೇರಿದ ಅಖಾಡ

ಸ್ಥಿರ ಆಡಳಿತದ ನಿರೀಕ್ಷೆಯ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 2:18 IST
Last Updated 9 ಏಪ್ರಿಲ್ 2021, 2:18 IST
ಭದ್ರಾವತಿ ನಗರಸಭಾ ಕಚೇರಿ
ಭದ್ರಾವತಿ ನಗರಸಭಾ ಕಚೇರಿ   

ಭದ್ರಾವತಿ: ಬಿಸಿಲ ತಾಪಕ್ಕೆ ಜನ ತತ್ತರಿಸಿದ್ದರೆ ಮತ್ತೊಂದೆಡೆ ಚುನಾವಣಾ ಪ್ರಚಾರದ ಭರಾಟೆಯಲ್ಲಿ ತೊಡಗಿರುವ ಅಭ್ಯರ್ಥಿಗಳು, ಪಕ್ಷದ ಮುಖಂಡರು ಬೆವರಿಳಿಸಿಕೊಂಡು ಮತದಾರರ ಸಾಮೀಪ್ಯಕ್ಕೆ ತೆರಳಿ, ಬೆಂಬಲ ಕೋರುತ್ತಿದ್ದಾರೆ.

ಎರಡು ವರ್ಷಗಳಿಂದ ನನೆಗುದಿಯಲ್ಲಿದ್ದ ನಗರಸಭಾ ಚುನಾವಣೆಗೆ ಕೊನೆಗೂ ಚುನಾವಣಾ ಆಯೋಗ ನಿಶಾನೆ ತೋರಿತ್ತು. ಏ.27ಕ್ಕೆ ಮತದಾನ ನಿಗದಿಯಾಗಿದೆ. 35 ವಾರ್ಡ್‌ಗಳಲ್ಲಿ 20ಕ್ಕೂ ಅಧಿಕ ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಪಕ್ಷಗಳ ಪಾಲಿಗೆ ಅಭ್ಯರ್ಥಿಗಳ ಹುಡುಕಾಟದ ಕಾವು ಹೆಚ್ಚಿದೆ.

5ನೇ ಚುನಾವಣೆ: 1994ರಲ್ಲಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ನಡೆಯುತ್ತಿರುವ ಐದನೇ ಚುನಾವಣೆ. ಎಲ್ಲ ಪಕ್ಷಗಳ ಭವಿಷ್ಯದ ಶಾಸಕ ಸ್ಥಾನದ ಗೆಲುವಿಗೆ ಈ ಚುನಾವಣೆ ಮೇಲ್ಪಂಕ್ತಿ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ADVERTISEMENT

ನಗರಸಭೆ ಸ್ಥಾನಮಾನ ಸಿಕ್ಕಿದ ದಿನದಿಂದ ವ್ಯಕ್ತಿ ಪ್ರತಿಷ್ಠೆ ಕಣವಾಗಿದ್ದ ಸ್ಥಳೀಯ ಸಂಸ್ಥೆ ಚುನಾವಣೆ ಈ ಬಾರಿ ‘ಅಪ್ಪಾಜಿ’ ಇಲ್ಲದ ಪಕ್ಷಗಳ ನಡುವಿನ ಹೋರಾಟದ ಕಣವಾಗಿದೆ.

ಹೊಂದಾಣಿಕೆ ರಾಜಕಾರಣವೇ ಹೆಚ್ಚು: ನಗರಸಭೆ ಅಸ್ತಿತ್ವಕ್ಕೆ ಬಂದ ನಂತರ ಮೂರು ಬಾರಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿರಲಿಲ್ಲ. ಹಾಗಾಗಿ, ಹೊಂದಾಣಿಕೆ ರಾಜಕಾರಣದ ಮೇಲೆ ಇಲ್ಲಿನ ಆಡಳಿತ ನಡೆದಿತ್ತು. ಆದರೆ, 2014ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ 23 ಸದಸ್ಯರನ್ನು ಗೆಲ್ಲಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಅದರ ಹಿಂದಿನ ಮೂರು ಬಾರಿಯ ಅಧಿಕಾರವೂ ಅಪ್ಪಾಜಿ, ಸಂಗಮೇಶ್ವರ ಅವರ ವೈಯಕ್ತಿಕ ಪ್ರತಿಷ್ಠೆಗೆ ತಕ್ಕಂತೆ ಪಕ್ಷಾಂತರ ಪರ್ವದೊಂದಿಗೆ ಆಡಳಿತ ನಡೆದಿತ್ತು.

ಕಾಂಗ್ರೆಸ್ ಶಾಸಕ ಬಲ: ಸದ್ಯ ಕಾಂಗ್ರೆಸ್ ಪಕ್ಷದ ಜಿಲ್ಲೆಯ ಏಕೈಕ ಶಾಸಕರಾಗಿರುವ ಬಿ.ಕೆ.ಸಂಗಮೇಶ್ವರ ಅವರ ಬಲವಿದೆ. ಪಕ್ಷ ಸಂಘಟನೆಗಿಂತ ವ್ಯಕ್ತಿ ಆಧಾರದ ಮೇಲಿನ ಶಕ್ತಿಯನ್ನೇ ನೆಚ್ಚಿಕೊಂಡಿರುವ ಪಕ್ಷವು ಎಲ್ಲ 35 ವಾರ್ಡ್‌ಗಳಲ್ಲಿ
ತನ್ನ ಶಕ್ತಿ ಹೊಂದಿದೆ. ಟಿಕೆಟ್ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇರುವುದು ಮುಖಂಡರ ತಲೆಬಿಸಿಗೆ ಕಾರಣವಾಗಿದೆ.

ಶಾಸಕರು, ಪಕ್ಷದ ನಗರ ಘಟಕದ ಅಧ್ಯಕ್ಷ ಟಿ.ಚಂದ್ರೇಗೌಡ ಸೇರಿ ಇನ್ನಿತರ ಮುಖಂಡರು ಆಕಾಂಕ್ಷಿಗಳ ಬಲಾ ಬಲ ಪರೀಕ್ಷೆ ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಶತಪ್ರಯತ್ನ ನಡೆಸಿದ್ದಾರೆ.

ಜೆಡಿಎಸ್ ಒಗ್ಗಟ್ಟಿನ ಮಂತ್ರ: ಅಪ್ಪಾಜಿ ನಿಧನ ನಂತರ ಜೆಡಿಎಸ್ ತನ್ನ ಸಂಘಟನಾ ಶಕ್ತಿಗಾಗಿ ಒಂದಿಷ್ಟು ತಳಮಟ್ಟದ ಕೆಲಸವನ್ನು ಮಾಡಿಕೊಂಡು ಬಂದಿದ್ದರೂ, ಈಗ ಚುನಾವಣೆ ಸಮೀಪದಲ್ಲಿ ನಡೆಸಿದ ಕಾರ್ಯಕರ್ತರ ಸಭೆಯಲ್ಲಿ ಒಗ್ಗಟ್ಟಿನ ಮೂಲಕ ಸಂಘಟನಾ ಶಕ್ತಿ ಹೆಚ್ಚು ಮಾಡಿಕೊಳ್ಳುವ ಕೆಲಸಕ್ಕೆ ಮುಂದಡಿ ಇಟ್ಟಿದೆ.

ಎಲ್ಲ ಕಡೆ ತಮ್ಮ ಪಕ್ಷದ ಕಾರ್ಯಕರ್ತರ ಮುಖಂಡರ ಜತೆ ಸಮಾಲೋಚನೆ ನಡೆಸಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಕೆಲಸಕ್ಕೆ ಜೆಡಿಎಸ್‌ ಮುಂದಾಗಿದೆ. ಆಯ್ಕೆಯಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳದೆ ಎಲ್ಲವೂ ಒಮ್ಮತಕ್ಕೆ ಎಂಬ ರೀತಿಯಲ್ಲಿ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ನಡೆಸಿರುವುದು ಮುಖಂಡರ ಆತ್ಮವಿಶ್ವಾಸ ಹೆಚ್ಚಿಸಿದೆ.

ಪಕ್ಷ ಸಿದ್ಧಾಂತಕ್ಕೆ ಬಿಜೆಪಿ ಒತ್ತು: ನಗರಸಭೆ ಅಸ್ತಿತ್ವಕ್ಕೆ ಬಂದ ದಿನದಿಂದ ಯಾವುದೇ ಅಧಿಕಾರ ಹಿಡಿಯದ ಬಿಜೆಪಿ ಒಂದಂಕಿ ಸ್ಥಾನ ದಾಟಿಲ್ಲ ಎಂಬ ಕೊರಗು ಎದುರಿಸುತ್ತಿದೆ. ಸದ್ಯ ರಾಜ್ಯ ಮತ್ತು ಕೇಂದ್ರದಲ್ಲಿನ ಅಧಿಕಾರ ಪ್ರಭಾವ ಕ್ಷೇತ್ರದಲ್ಲಿ ಕಾಣುವ ಭಾಗವಾಗಿ ಜಿಲ್ಲಾ ಮುಖಂಡರ ಆಣತಿಯಂತೆ ಪಕ್ಷವು ನಗರಸಭಾ ಚುನಾವಣೆಯಲ್ಲಿ ಎಲ್ಲದರಲ್ಲೂ ಪ್ರಥಮ ಎನಿಸುವಂತೆ ಪ್ರಚಾರ ನಡೆಸಿದೆ.

ಪ್ರಮುಖ ವೃತ್ತದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಈಗಾಗಲೇ ಫ್ಲೆಕ್ಸ್ ಹಾಕಿರುವ ಬಿಜೆಪಿ, ಎಲ್ಲರಿಗಿಂತ ಮೊದಲು 21 ಅಭ್ಯರ್ಥಿಗಳ ಮೊದಲಪಟ್ಟಿ ಬಿಡುಗಡೆ ಮಾಡಿದೆ. ಪಕ್ಷದ ನಿಷ್ಠಾವಂತ ಮುಖಂಡರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದೆ. ಮೂರು ಬಾರಿಯ ನಗರಸಭಾ ಸದಸ್ಯರಾಗಿದ್ದ ವಿ.ಕದಿರೇಶ್ ಅವರ ಅಭ್ಯರ್ಥಿತನ ಮೊದಲ ಪಟ್ಟಿಯಲ್ಲಿ ಪ್ರಕಟಿಸದಿರುವುದು ಹಿರಿಯರ ಮನದಲ್ಲಿ ಒಂದಷ್ಟು ಬೇಸರ ಮೂಡಿಸಿದೆ.

ಒಟ್ಟಿನಲ್ಲಿ 5ನೇ ನಗರಸಭಾ ಚುನಾವಣೆ ಘೋಷಣೆ ನಂತರ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಚಲನಶೀಲತೆ ಹೆಚ್ಚಿದೆ. ಎಎಪಿ, ಜೆಡಿಯು, ಸ್ನೇಹಜೀವಿ ಉಮೇಶ್ ಬಳಗ, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಗಳು ಸೇರಿದಂತೆ ಹಲವು ಪಕ್ಷೇತರರು ಕಣಕ್ಕೆ ಇಳಿಯುವ ಸಿದ್ಧತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.