ADVERTISEMENT

ಸರ್ಕಾರದ ಖಜಾನೆ ಖಾಲಿ, ಸಿಎಂ ರಾಜ್ಯದ ವಾಸ್ತವ ಸ್ಥಿತಿ ಬಿಚ್ಚಿಡಲಿ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 12:54 IST
Last Updated 15 ಅಕ್ಟೋಬರ್ 2018, 12:54 IST
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಸೋಮವಾರ ನಾಮಪತ್ರ ಸಲ್ಲಿಕೆಗೂ ಮೊದಲು ತೆರೆದ ವಾಹನದಲ್ಲಿ ಪಕ್ಷದ ಮುಖಂಡರ ಜತೆ ಮೆರವಣಿಗೆಯಲ್ಲಿ ಭಾಗವಹಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಸೋಮವಾರ ನಾಮಪತ್ರ ಸಲ್ಲಿಕೆಗೂ ಮೊದಲು ತೆರೆದ ವಾಹನದಲ್ಲಿ ಪಕ್ಷದ ಮುಖಂಡರ ಜತೆ ಮೆರವಣಿಗೆಯಲ್ಲಿ ಭಾಗವಹಿಸಿದರು.   

ಶಿವಮೊಗ್ಗ: ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆ ಗುತ್ತಿಗೆದಾರರಿಗೆಸುಮಾರು ₹ 10 ಸಾವಿರ ಕೋಟಿ ಬಾಕಿ ನೀಡಬೇಕಿದೆ. ಸರ್ಕಾರದ ಖಜಾನೆ ಬರಿದಾಗಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಾಸ್ತವ ಸ್ಥಿತಿಗತಿ ಜನರಿಗೆ ತಿಳಿಸಬೇಕು ಎಂದುಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಸೋಮವಾರ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್‌ ನಾಯಕರ ಮಧ್ಯೆ ಸಾಮರಸ್ಯ ಇಲ್ಲ. ಒಬ್ಬರ ಮುಖ ಒಬ್ಬರು ನೋಡದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲಎಂದು ಭವಿಷ್ಯ ನುಡಿದರು.

ADVERTISEMENT

ದೇಶದ ಜನ ಉಪ ಚುನಾವಣೆ ಫಲಿತಾಂಶ ಕಾತುರದಿಂದ ಕಾಯುತ್ತಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ 20-ರಿಂದ 22 ಲೋಕಸಭೆ ಕ್ಷೇತ್ರ ಗೆಲ್ಲಲು ಈ ಚುನಾವಣೆ ದಾರಿ ದೀಪವಾಗಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪೂರಕ ವಾತಾವರಣವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಚಾರ ಸಭೆಗಳಲ್ಲಿ ಪ್ರತಿಸ್ಪರ್ಧಿ ಅಭ್ಯರ್ಥಿಯ ಹೆಸರು ಹೇಳುವ ಮೂಲಕ ಮತದಾರರಿಗೆ ಅವರ ಪರಿಚಯ ಏಕೆ ಮಾಡಿಕೊಡಬೇಕು? ಅವರ ಕುರಿತು ಮಾತನಾಡದೇ ನಮ್ಮ ಅಭ್ಯರ್ಥಿಗಳ ಹೆಸರು ಜನರಿಗೆ ತಲುಪಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿಯೇ ಇಲ್ಲ. ರಾಜ್ಯದ ಪರಿಸ್ಥಿತಿ ಏನು? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಕಾಂಗ್ರೆಸ್ಸಿಗರು ಸೋಲಿಸಿದ್ದರು. ಮಧುಬಂಗಾರಪ್ಪ ಅವರನ್ನು ಹೇಗೆ ಗೆಲ್ಲಿಸುತ್ತಾರೆ. ಅಂಥವರನ್ನು ನಂಬಿ ಅವರು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್-–ಜೆಡಿಎಸ್ ಅಭ್ಯರ್ಥಿಗೆ ಸೊರಬದ ಜನತೆ ಈಗಾಗಲೇ ತಕ್ಕ ಉತ್ತರ ನೀಡಿ ಮೂಲೆಗೆ ಕೂರಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ್ರು ಮಾತನಾಡಿ, ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲದಂತಹ ದಯಾನೀಯ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಇದಕ್ಕೆ ಸ್ವಾರ್ಥ ರಾಜಕಾರಣ ಕಾರಣ ಎಮದು ಕಟುಕಿದರು.

ಶಾಸಕ ಹಾಲಪ್ಪ ಹರತಾಳು ಮಾತನಾಡಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ನಾಳೆ ಪ್ರಚಾರಕ್ಕೆ ಬರುತ್ತಾರೆ. ಈಡಿಗ ಸಮಾಜಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸಬೇಕು ಎಂದು ಜನರಿಗೆ ಸಲಹೆ ನೀಡಿದರು.

ಲೋಕಸಭಾ ಉಪ ಚುನಾವಣೆ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಅನಿರೀಕ್ಷಿತ ಹಾಗೂ ಅನಿವಾರ್ಯವಾಗಿ ಉಪ ಚುನಾವಣೆ ಎದುರಿಸುತ್ತಿದ್ದೇವೆ. ಪಕ್ಷದ ಕಾರ್ಯಕರ್ತರು ಹೆಚ್ಚು ಶ್ರಮವಹಿಸಬೇಕು ಎಂದು ಕೋರಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ರೇಣುಕಾಚಾರ್ಯ, ಕೋಟ ಶ್ರೀನಿವಾಸ ಪೂಜಾರಿ, ಗೊವಿಂದ ಕಾರಜೋಳ, ಬಸವರಾಜ್ ಬೊಮ್ಮಾಯಿ, ಕುಮಾರ್ ಬಂಗಾರಪ್ಪ, ಆರಗ ಜ್ಞಾನೇಂದ್ರ ,ಅಶೋಕ್ ನಾಯ್ಕ, ಆಯನೂರು ಮಂಜುನಾಥ್, ಕೆ.ಪಿ. ನಂಜುಂಡಿ, ಸುನಿಲ್ ಕುಮಾರ್, ಜೀವರಾಜ್, ರಘುಪತಿ ಭಟ್, ಮಾಡಾಳ್ ವಿರೂಪಾಕ್ಷಪ್ಪ, ಮುಖಂಡರಾದ ಸಂತೋಷ್, ಎಂ.ಬಿ. ಭಾನುಪ್ರಕಾಶ್, ಚಂದ್ರಪ್ಪ ಉಪಸ್ಥಿತರಿದ್ದರು.

ರಾಘವೇಂದ್ರ ಗೆಲುವು ಖಚಿತ

ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ರಾಘವೇಂದ್ರ ನಾಮಪತ್ರ ಸಲ್ಲಿಕೆಯ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ವಿಧಾನಸಭೆ ಚುನಾವಣೆಯಲ್ಲಿ ಮೋದಿ ಸರ್ಕಾರದ ಸಾಧನೆ, ಬಿಜೆಪಿ ಸಂಘಟನೆ ಹಾಗೂ ಹಿಂದುತ್ವದ ಆಧಾರದ ಮೇಲೆ ಚುನಾವಣೆ ನಡೆಸಿ, ಯಶಸ್ವಿಯಾಗಿದ್ದೇವೆ. ಈ ಚುನಾವಣೆಯಲ್ಲೂ ಅದೇ ವಿಷಯ ಇಟ್ಟುಕೊಂಡು ಪ್ರಚಾರ ನಡೆಸುತ್ತೇವೆ ಎಂದರು.

ವಿಧಾನಸಭಾ ಚುನಾವನೆಯಲ್ಲಿ ಕಾಂಗ್ರೆಸ್–ಜೆಡಿಎಸ್‌ಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಬಿಜೆಪಿ ಎದುರು ಮಧು ಬಂಗಾರಪ್ಪ ಪ್ರಬಲ ಅಭ್ಯರ್ಥಿಯೇ ಅಲ್ಲ. ಈಗಾಗಲೇ ಅವರು ಏನು ಎಂದು ಸೊರಬದ ಜನರು ಉತ್ತರ ನೀಡಿದ್ದಾರೆ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.