ADVERTISEMENT

ಜಾತಿ ವ್ಯವಸ್ಥೆ ಜೀವಂತವಾಗಿರಬೇಕು ಎನ್ನುವುದು ಬಿಜೆಪಿ ಆಶಯ: ಕಿಮ್ಮನೆ ರತ್ನಾಕರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 12:10 IST
Last Updated 23 ಫೆಬ್ರುವರಿ 2021, 12:10 IST
ಮಾಜಿ ಸಚಿವ ಕಿಮ್ಮನೆ ರತ್ನಾಕರ
ಮಾಜಿ ಸಚಿವ ಕಿಮ್ಮನೆ ರತ್ನಾಕರ    

ಶಿವಮೊಗ್ಗ: ಜಾತಿ ವ್ಯವಸ್ಥೆ ಜೀವಂತವಾಗಿರಬೇಕು ಎನ್ನುವುದು ಬಿಜೆಪಿ ಆಶಯ. ಅದಕ್ಕಾಗಿಯೇ, ಬಿಜೆಪಿ ನಾಯಕರು ಜಾತಿ ಹೆಸರಲ್ಲಿ ಮೀಸಲಾತಿ ಹೋರಾಟ ರೂಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪಿಸಿದರು.

ಜಾತಿಯ ಹೆಸರಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಗಳು ಹಿಂದೂ ಧರ್ಮದ ಮಧ್ಯೆ ಕಂದಕ ಸೃಷ್ಟಿಸುತ್ತಿವೆ. ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕ ಯತ್ನಾಳ್ ಸೇರಿದಂತೆ ಹಲವು ಬಿಜೆಪಿ ನಾಯಕರು ಜಾತಿಯ ಹೆಸರಲ್ಲಿ ಹೋರಾಟ ನಡೆಸುತ್ತಿದ್ದಾರೆ. ದೊಡ್ಡ ಜಾತಿಗಳೇ ಹೋರಾಟಕ್ಕೆ ಇಳಿದರೆ ಸಣ್ಣಸಣ್ಣ ಜಾತಿಗಳ ಪಾಡೇನು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಬಿಜೆಪಿ ನಾಯಕರಿಗೆ ಗಾಂಧಿ, ಅಂಬೇಡ್ಕರ್, ಲೋಹಿಯಾ, ನೆಹರು ಅವರ ಸಿದ್ಧಾಂತ, ಹೋರಾಟಗಳು ಅರ್ಥವಾಗಿಲ್ಲ. ಜಾತ್ಯತೀತ ಎನ್ನುವುದು ಆರ್‌ಎಸ್‌ಎಸ್ ಶಬ್ದಕೋಶದಲ್ಲೇ ಇಲ್ಲ. ಬಡವರ ಬದುಕು ಭಾರವಾಗುತ್ತಿದ್ದರೂ ರಾಮ ಭಜನೆ, ಮೀಸಲಾತಿ ಹೋರಾಟಕ್ಕೆ ಕುಮ್ಮಕ್ಕು ನೀಡುತ್ತಾ ರಾಜಕಾರಣ ಮಾಡುತ್ತಿದ್ದಾರೆ ಎಂದು ಕುಟುಕಿದರು.

ADVERTISEMENT

ಯತ್ನಾಳ್ ಸೇರಿದಂತೆ ಹಲವರು ತಮಗೆ ಮುಸ್ಲಿಂ ಮತಗಳೇ ಬೇಡ ಎಂದು ಬಹಿರಂಗವಾಗಿ ಹೇಳುತ್ತಾರೆ. ಅದೇ ಮುಸ್ಲಿಂ ತಮಗೆ ಹಿಂದುಗಳ ಮತ ಬೇಡ ಎಂದು ಹೇಳಿದರೆ ಅವರ ಪ್ರತಿಕ್ರಿಯೆ ಹೇಗಿರುತ್ತದೆ. ಮುಸ್ಲಿಮರ ಪರ ಮಾತನಾಡಿದರೆ ಸಾಕು ಓಲೈಕೆ ಎನ್ನುತ್ತಾರೆ ಎಂದು ಕುಟುಕಿದರು.

ಸಿಬಿಐ ತನಿಖೆಗೆ ಒತ್ತಾಯ: ಶಿವಮೊಗ್ಗ, ಚಿಕ್ಕಬಳ್ಳಾಪುರದಲ್ಲಿ ನಡೆದ ಸ್ಪೋಟ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು. ಕಲ್ಲು ಕ್ವಾರೆಗಳ ಗುತ್ತಿಗೆದಾರರು, ಅವರ ಹಿಂದಿರುವವರು ಬಿಜೆಪಿ ಮುಖಂಡರು ಎನ್ನುವ ಮಾಹಿತಿ ಇದೆ. ತನಿಖೆ ನಡೆಸಿದರೆ ಎಲ್ಲಾ ಸತ್ಯಗಳು ಹೊರಬರುತ್ತವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.