ADVERTISEMENT

ಕೆ.ಎಸ್. ಈಶ್ವರಪ್ಪ ನಿವಾಸಕ್ಕೆ ಬಿಜೆಪಿ ನಾಯಕರ ದೌಡು: ಮನವೊಲಿಕೆ ಯತ್ನ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 8:01 IST
Last Updated 17 ಮಾರ್ಚ್ 2024, 8:01 IST
   

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಮನವೊಲಿಸುವ ಪ್ರಯತ್ನ ಬಿಜೆಪಿ ಮುಖಂಡರಿಂದ ನಡೆಯುತ್ತಿದೆ.

ಭಾನುವಾರ ಬೆಳಗ್ಗೆಯಿಂದಲೇ ಕೆ.ಎಸ್.ಈಶ್ವರಪ್ಪ ಮನೆಗೆ ಬಿಜೆಪಿ ನಾಯಕರು ಬರುತ್ತಿದ್ದು, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಬಂದು ಈಶ್ವರಪ್ಪ ‌ಅವರ ಮನವೊಲಿಸುವ ಪ್ರಯತ್ನ ಮಾಡಿದರು. ಸಂಧಾನಕ್ಕೆ ಈಶ್ವರಪ್ಪ ಮಣಿಯದ ಹಿನ್ನೆಲೆಯಲ್ಲಿ ವಾಪಸ್ ಮರಳಿದರು.

ಮಧ್ಯಾಹ್ನ ಬಿಜೆಪಿ ಹೈಕಮಾಂಡ್ ಪರವಾಗಿ ಈಶ್ವರಪ್ಪ ಮನೆಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೋಹನ ಅಗರವಾಲ್ ಹಾಗೂ ರಾಜೇಶ್ ಬಂದಿದ್ದು, ಈಶ್ವರಪ್ಪ ನಿವಾಸದಲ್ಲಿ ಸಭೆ ನಡೆಸುತ್ತಿದ್ದಾರೆ.

ADVERTISEMENT

ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಚುನಾವಣಾ ಪ್ರಚಾರ ಕಾರ್ಯಕ್ಕೆ ಶಿವಮೊಗ್ಗಕ್ಕೆ ಬರುತ್ತಿದ್ದು, ಮುನ್ನಾದಿನ ಈಶ್ವರಪ್ಪ ಮನವೊಲಿಕೆ ಕಾರ್ಯಕ್ಕೆ ಪಕ್ಷದ ಮುಖಂಡರು ದೌಡಾಯಿಸುತ್ತಿರುವುದು ಕುತೂಹಲ ಕೆರಳಿಸಿದೆ.

ಈಶ್ವರಪ್ಪ ಶನಿವಾರ ಸಾಗರ ಬಳಿಯ ವರದಾಪುರದ ಶ್ರೀಧರ ಆಶ್ರಮಕ್ಕೆ ಭೇಟಿ ನೀಡಿದ ನಂತರ ಲೋಕಸಭಾ ಚುನಾವಣೆಗೆ ಪ್ರಚಾರ ಕಾರ್ಯ ಆರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.