ಶಿರಾಳಕೊಪ್ಪ (ಶಿಕಾರಿಪುರ): ರಕ್ತದಾನದ ಮೂಲಕ ಯುವಜನತೆ ಸಮಾಜದ ಆರೋಗ್ಯ ಕಾಪಾಡಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ.ಗಿರಿರಾಜ್ ಇಸಳೂರು ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿವಿಧ ಸಂಘಟನೆಯ ಸಹಯೋಗದಲ್ಲಿ ಈಚೆಗೆ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಅದು ದಾನಿಗಳಿಂದ ಮಾತ್ರ ಸಾಕಾರಗೊಳ್ಳುತ್ತದೆ. ಪ್ರತಿ ರಕ್ತದಾನಿಯೂ ಸಮಾಜದಲ್ಲಿ ಒಬ್ಬ ಹೀರೊ ಎಂದರೆ ತಪ್ಪಾಗಲಾರದು ಎಂದು ಮಕ್ಕಳ ತಜ್ಞ ಡಾ.ಮಹಾಲಿಂಗ ಕೊಲ್ಲೆ ಹೇಳಿದರು.
ಮಳೆಗಾಲದಲ್ಲಿ ರಕ್ತ ನಿಧಿಯಲ್ಲಿ ರಕ್ತದ ಕೊರತೆ ಹೆಚ್ಚಾಗುತ್ತದೆ. ಅದಕ್ಕಾಗಿ ಪಟ್ಟಣದ ಸಂಘ ಸಂಸ್ಥೆಗಳು ರಕ್ತದಾನ ಶಿಬಿರ ಆಯೋಜಿಸಲು ಮುಂದಾಗಬೇಕು ಎಂದು ಎಸ್‌ಐ ಸಂಘಟನೆಯ ಮೊಹಮ್ಮದ್ ಆಸಿಫ್ ಹೇಳಿದರು.
ಎಸ್‌ಐ, ಓಸಾಲಿಡ್ ಯೂಥ್ ಮೂಮೆಂಟ್, ಮೆಸ್ಕಾಂ, ಪೊಲೀಸ್ ಠಾಣೆ, ಕದಂಬ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಮಲ್ಲಿಕಾರ್ಜುನ ಐಟಿಐ ಕಾಲೇಜು, ಎಸ್‌ಜೆಪಿ ಐಟಿಐ ಕಾಲೇಜು ಸಹಕಾರದಿಂದ ದಾನಿಗಳಿಂದ ಸಂಗ್ರಹವಾದ 120 ಯೂನಿಟ್ ರಕ್ತವನ್ನು ಮೆಗ್ಗಾನ್ ರಕ್ತ ನಿಧಿಗೆ ನೀಡಲಾಯಿತು.
ಸಾಲಿಡಾರಿಟಿ ಯೂತ್ ಮೂಮೆಂಟ್ ವತಿಯಿಂದ ಆಶಾ ಕಾರ್ಯಕರ್ತರಾದ ಶಿಲ್ಪಾ, ಮುಬಾಶಿರ, ಜಯಮ್ಮ, ಧನಲಕ್ಷ್ಮಿ, ಭಾಗ್ಯ, ನಾಜಿಯಾ, ಲೀಲಾ, ರೂಪಾ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.