ಶಿವಮೊಗ್ಗ: ‘ಸರ್ಕಾರದ ಏಕಗವಾಕ್ಷಿ ಯೋಜನೆಯಡಿ ಪ್ರಕಟಿತ ಪುಸ್ತಕಗಳ ಖರೀದಿ ಸ್ಥಗಿತಗೊಳಿಸಲಾಗಿದೆ. 2021ರಿಂದ ಪ್ರಕಾಶಕರು, ಲೇಖಕರಿಗೆ ಗ್ರಂಥಾಲಯದ ಅನುದಾನ ಬಿಡುಗಡೆಯೇ ಆಗಿಲ್ಲ. ಇದು ದುರ್ದೈವದ ಸಂಗತಿ’ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಬೇಸರ ವ್ಯಕ್ತಪಡಿಸಿದರು.
ಹೊಂಗಿರಣ ತಂಡದಿಂದ ಇಲ್ಲಿನ ಪ್ರೆಸ್ ಟ್ರಸ್ಟ್ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಲೇಖಕ ಪ್ರೊ. ಚನ್ನೇಶ್ ಹೊನ್ನಾಳಿ ಅವರ ಸ್ವರಚಿತ ಕೃತಿ ‘ಅರಿವಿನ ಬೆಳಕು’ ಸೇರಿದಂತೆ ಸಂಗ್ರಹ ಕೃತಿಗಳಾದ ‘ಗಾಂಧಿ ಚರಿತ ಮತ್ತು ಸ್ವಾಗತ ಗೀತೆ’ ಹಾಗೂ ‘ಕಾವ್ಯಮಡಿಕೆ’ ಬಿಡುಗಡೆಗೊಳಿಸಿ ಮಾತನಾಡಿದರು.
ಸಾರ್ವಜನಿಕರಿಂದ ಲೈಬ್ರರಿ ಸೆಸ್ ರೂಪದಲ್ಲಿ ಸಂಗ್ರಹಿಸಿದ ₹5,00 ಕೋಟಿಯಿಂದ ₹1,000 ಕೋಟಿ ಹಣ ಸರ್ಕಾರದ ಬೊಕ್ಕಸದಲ್ಲಿದೆ. ಇದನ್ನು ಬಿಡುಗಡೆ ಮಾಡುವ ಚಂತೆಯೇ ಸರ್ಕಾರಗಳಿಗಿಲ್ಲ. ಉದ್ದೇಶ ಪೂರ್ವಕವಾಗಿ ಪುಸ್ತಕಗಳ ಸಂವಹನವನ್ನು ಹತ್ತಿಕ್ಕುವ ಕಾರ್ಯ ಸರ್ಕಾರದಿಂದ ಆಗುತ್ತಿದೆ ಎಂದು ದೂರಿದರು.
‘ಪುಸ್ತಕಗಳು ಚಲಾವಣೆ ಆಗದಂತೆ ತಡೆ ಹಿಡಿಯಲಾಗುತ್ತಿದೆ. ಈ ವಿಚಾರವಾಗಿ ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳಲಾಗಿದ್ದು, ಗ್ರಂಥಾಲಯ, ಶಾಲಾ–ಕಾಲೇಜು ಅಭಿವೃದ್ಧಿಗಿಂದ ದೇವಾಲಯಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲಾಗುತ್ತಿದೆ. ನಾನು ದೇವರ ವಿರೋಧಿಯಲ್ಲ, ಆದರೆ ಲೇಖಕರ ಪಂಚೇಂದ್ರಿಯಗಳನ್ನು ಸ್ಥಗಿತಗೊಳಿಸುವ ಕೆಲಸ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಇದು ಸರಿಯಲ್ಲ’ ಎಂದರು.
‘ಮಾತನಾಡಬೇಕಾದ ವೇದಿಕೆಯಲ್ಲಿ ನಾವು ಮಾತನಾಡುತ್ತಿಲ್ಲ. ವಿಮರ್ಶೆಯ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲದ ಸ್ಥಿತಿಗೆ ಬಂದಿದ್ದೇವೆ. ನಮ್ಮನ್ನು ಮೌಢ್ಯ ಆಳುತ್ತಿದ್ದು, ಇದನ್ನು ವಿಮರ್ಶೆ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಅಕ್ಷರಸ್ಥರೇ ವಿನಾ ಅನಕ್ಷರಸ್ಥರಲ್ಲ’ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಎಚ್.ಟಿ.ಕೃಷ್ಣಮೂರ್ತಿ ಬೇಸರಿಸಿದರು.
‘ಗಾಂಧಿ ಚರಿತ ಮತ್ತು ಸ್ವಾಗತ ಗೀತ ಹಾಗೂ ಕಾವ್ಯ ಮಡಿಕೆ ಕೃತಿಯಲ್ಲಿ ಹೊನ್ನಾಳಿ ಸೀಮೆಯ ಕಾವ್ಯ ಪರಂಪರೆ, ಚರಿತ್ರೆಯನ್ನು ಚನ್ನೇಶ್ ಅವರು ಕಟ್ಟಿಕೊಟ್ಟಿದ್ದಾರೆ. ಕೃತಿಯಲ್ಲಿ ರಾಜಪ್ರಭುತ್ವವು ಪ್ರಜಾಪ್ರಭುತ್ವಕ್ಕೆ ಹೊರಳುವ ಸಂಕ್ರಮಣ ಕಾಲವನ್ನು ನೋಡಬಹುದು’ ಎಂದು ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕಿ ಪಿ.ಭಾರತೀದೇವಿ ಹಳಿದರು.
ಚಿಂತಕ ರಾಜೇಂದ್ರ ಚೆನ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಹಾಗೂ ಲೇಖಕರೂ ಆದ ಪ್ರೊ.ಚನ್ನೇಶ್ ಹೊನ್ನಾಳಿ, ಹೊಂಗಿರಣ ತಂಡದ ರಂಗಭೂಮಿ ಕಲಾವಿದ ಸಾಸ್ವೆಹಳ್ಳಿ ಸತೀಶ್ ಇದ್ದರು.
ಒಂದು ಕೃತಿ ರಚಿಸುವುದೇ ಸವಾಲು. ಆದರೆ ಹೊನ್ನಾಳಿ ಸೀಮೆಯ ಬಗ್ಗೆ ಹೆಚ್ಚು ಪ್ರೀತಿ ಹೊಂದಿರುವ ಚನ್ನೇಶ್ ಅವರು ಒಂದೇ ಬಾರಿ ಮೂರು ಕೃತಿ ಹೊರ ತಂದಿದ್ದಾರೆ. ಇದು ಸಾಧನೆಯೇ ಸರಿಕುಂ.ವೀರಭದ್ರಪ್ಪ ಹಿರಿಯ ಸಾಹಿತಿ
‘ಶಿಕ್ಷಣದ ಮೇಲೆ ಕಾಳಜಿ ಇಲ್ಲ’
‘ಅತಿಥಿ ಉಪನ್ಯಾಸಕರು ನಿವೃತ್ತಿ ಸನಿಹಕ್ಕೆ ಬಂದಾಗ ಹುದ್ದೆ ಖಾಯಂಗೆ ಸರ್ಕಾರ ಮುಂದಾಗುತ್ತವೆ. ಇದರಿಂದ ಏನು ಪ್ರಯೋಜನ ಇದೆ’ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಎಚ್.ಟಿ.ಕೃಷ್ಣಮೂರ್ತಿ ಪ್ರಶ್ನಿಸಿದರು. ಶೈಕ್ಷಣಿಕ ಪಠ್ಯಕ್ರಮ ಗಂಭೀರವಾಗಿ ರಚನೆಗೊಳ್ಳುತ್ತಿಲ್ಲ. ಇದಕ್ಕೆ ಬೇರೆ–ಬೇರೆ ಕಾರಣ ಇರಬಹುದು. ಪಸ್ತುತ ಸರ್ಕಾರಗಳಿಗೆ ಶಿಕ್ಷಣದ ಮೇಲೆ ಯಾವುದೇ ಕಾಳಜಿ ಇಲ್ಲ. ಮಕ್ಕಳು ಓದುವುದಿಲ್ಲ ಎಂದು ಹೇಳುತ್ತಿದ್ದೇವೆ. ಆದರೆ ಮಕ್ಕಳಿಗೆ ಯಾವ ಶಿಕ್ಷಣ ನೀಡುತ್ತಿದ್ದೇವೆ. ಈ ಎಲ್ಲಾ ಸಂಗತಿಗಳಿಂದ ಕಿರಿಯರಿಗೆ ಹಿರಿಯರ ಮೇಲೆ ನಂಬಿಕೆ ಹೋಗಿದೆ. ಆದ್ದರಿಂದ ಅವರವರ ಜೀವನ ಕಟ್ಟಿಕೊಳ್ಳಲು ಇತರೆ ಮಾರ್ಗ ಕಂಡುಕೊಳ್ಳುತ್ತಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.