ADVERTISEMENT

ಶಿಕಾರಿಪುರ| ಬಸ್‌ನಿಲ್ದಾಣ ಜಾಗ ಕಬಳಿಕೆ ಆರೋಪ : ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 5:36 IST
Last Updated 10 ನವೆಂಬರ್ 2025, 5:36 IST
ಶಿರಾಳಕೊಪ್ಪ ಸಮೀಪದ ಹುಲುಗಿನಕೊಪ್ಪ ಗ್ರಾಮದಲ್ಲಿ ಶನಿವಾರ ಬಸ್‌ನಿಲ್ದಾಣ ಜಾಗೆ ಕಬಳಿಸಿರುವ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಶಿರಾಳಕೊಪ್ಪ ಸಮೀಪದ ಹುಲುಗಿನಕೊಪ್ಪ ಗ್ರಾಮದಲ್ಲಿ ಶನಿವಾರ ಬಸ್‌ನಿಲ್ದಾಣ ಜಾಗೆ ಕಬಳಿಸಿರುವ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.   

ಶಿರಾಳಕೊಪ್ಪ(ಶಿಕಾರಿಪುರ): 25 ವರ್ಷದಿಂದ ಇದ್ದ ಹುಲುಗಿನಕೊಪ್ಪ ಗ್ರಾಮದ ಬಸ್‌ನಿಲ್ದಾಣ ಜಾಗೆ ವ್ಯಕ್ತಿಯೊಬ್ಬರು ಕಬಳಿಸಿಕೊಂಡಿದ್ದಾರೆ ಪುನಃ ಅಲ್ಲಿಯೇ ಬಸ್‌ನಿಲ್ದಾಣ ನಿರ್ಮಿಸಬೇಕು ಎಂದು ಗ್ರಾಮದ ಮಹಿಳೆಯರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮದ ಬಸ್‌ನಿಲ್ದಾಣ ಜಾಗೆ ಗ್ರಾ.ಪಂ. ಹೆಸರಿಗೆ ಇಲ್ಲ ಅದಕ್ಕೆ ಹೊಂದಿಕೊಂಡಂತೆ ಇದ್ದ ಜಾಗೆ ಗ್ರಾಮದ ವ್ಯಕ್ತಿಯೊಬ್ಬರು ಖರೀದಿಸಿದ್ದು ಹಳೆ ಬಸ್‌ನಿಲ್ದಾಣ ಬೀಳುವಂತೆ ಮಾಡಿ ಅದನ್ನು ಕಬಳಿಸಿ ಮನೆ ನಿರ್ಮಿಸಲು ಹೊರಟಿದ್ದಾರೆ ಅವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು, ಗ್ರಾಮದಲ್ಲಿ ಬಸ್‌ನಿಲ್ದಾಣ ಇಲ್ಲದ ಕಾರಣಕ್ಕೆ ಮಹಿಳೆಯರು, ವಿದ್ಯಾರ್ಥಿಗಳು ಮಳೆಯಲ್ಲೆ ನಿಲ್ಲುವಂತಾಗಿದೆ, ಅಂಗಡಿಯಲ್ಲಿ ಜನವಿದ್ದಾಗ ಮಹಿಳೆಯರು ಅಲ್ಲಿಗೆ ತೆರಳಿ ನಿಲ್ಲುವುದಕ್ಕೂ ಆಗುತ್ತಿಲ್ಲ, ಬಿಸಿಲು, ಮಳೆಯಿಂದ ರಕ್ಷಣೆ ಇಲ್ಲದೆ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಬಸ್‌ನಿಲ್ದಾಣ ಮಳೆಗೆ ಬಿದ್ದಿದೆ ಎನ್ನುವಂತೆ ಮಾಡಿರುವ ವ್ಯಕ್ತಿಯ ವಿರುದ್ಧ ತನಿಖೆ ನಡೆಸಬೇಕು ಪುನಃ ಅಲ್ಲಿಯೇ ಬಸ್‌ನಿಲ್ದಾಣ ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವಿಶ್ವನಾಥ್, ವಿನೋಧಮ, ಬಸವರಾಜಪ್ಪ, ಕರಿಬಸಪ್ಪ, ಉಜ್ಜಪ್ಪ, ರುದ್ರಣ್ಣ, ಸುಮಾ, ಬಸಮ್ಮ, ಗೌರಮ್ಮ, ಜ್ಯೋತಿ, ಶಶಿಕಲಾ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ದಾನದ ಜಾಗೆ: ಹಳೆ ಮುತ್ತಗಿ ಗ್ರಾಮದ ಕುಟುಂಬ ಸರ್ಕಾರಿ ಶಾಲೆಗೆ 2 ಎಕರೆ, ಬಸ್‌ನಿಲ್ದಾಣ ನಿರ್ಮಾಣಕ್ಕೆ 10 ಗುಂಟೆ ಜಾಗೆ 1979ರಲ್ಲಿ ದಾನ ಮಾಡಿದ್ದರು. ಆ ಜಾಗೆ ಪಂಚಾಯಿತಿ ತನ್ನ ಹೆಸರಿಗೆ ಮಾಡಿಕೊಂಡಿಲ್ಲ. ಸದರಿ ಕುಟುಂಬದ ಆಸ್ತಿ ಹಿಸ್ಸೆಯಾಗಿದ್ದು ಇದೀಗ ಬೇರೊಬ್ಬರು ಅದನ್ನು ಖರೀದಿಸಿದ್ದಾರೆ. ಸದರಿ ಜಾಗೆ ಖರೀದಿ ವಿವಾದ ನ್ಯಾಯಾಲಯದ ಮೆಟ್ಟಿಲು ಏರಿ ಅಂತಿಮವಾಗಿ ನ್ಯಾಯಾಲಯ ಆದೇಶದ ಮೇರೆಗೆ ಖಾತೆಯಾಗಿದೆ. ಇದೀಗ ಅದೇ ಜಾಗೆಯಲ್ಲಿ ಬಸ್‌ನಿಲ್ದಾಣ ಬೇಕು ಎನ್ನುವುದು ಜನರ ಒತ್ತಾಯವಾಗಿದ್ದು ಬಸ್‌ನಿಲ್ದಾಣ ಜಾಗೆ ವಿವಾದದ ಕೇಂದ್ರವಾಗಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ಬಸ್‌ನಿಲ್ದಾಣ ಕಬಳಿಸಿದವರ ವಿರುದ್ಧ ಪ್ರತಿಭಟನೆ ಮಾಡುವ ವೇಳೆ ಮಹಿಳೆಯರು ಮತ್ತು ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಈ ಕುರಿತು ಶಿರಾಳಕೊಪ್ಪ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಲಾಗಿದೆ. ಸಾರ್ವಜನಿಕ ಉದ್ದೇಶದ ಜಾಗೆ ಉಳಿಸುವುದಕ್ಕೆ ಅಧಿಕಾರಿಗಳು ಮುಂದಾಗಬೇಕು.
ಮಲ್ಲಿಕಾರ್ಜುನ ಗ್ರಾ.ಪಂ. ಮಾಜಿ ಸದಸ್ಯ
ನ್ಯಾಯಾಲಯದ ಆದೇಶದ ಮೇರೆಗೆ ಜಾಗೆ ನಮ್ಮ ಹೆಸರಿಗೆ ಖಾತೆಯಾಗಿದೆ, ಬಸ್‌ನಿಲ್ದಾಣ ಮಳೆಗೆ ಬಿದ್ದಿದ್ದರೂ ನಮ್ಮ ಮೇಲೆ ವಿನಾಕಾರಣ ಅರೋಪ ಹೋರಿಸುವ ಕೆಲಸ ಆಗಿದೆ. ಈ ಹಿಂದೆಯೂ ಠಾಣೆಗೆ ದೂರು ನೀಡಿದ್ದು ನಮ್ಮ ಕುಟುಂಬದ ಮೇಲೆ ನಿರಂತರ ದ್ವೇಷ ಸಾಧನೆ ಮಾಡಲಾಗುತ್ತಿದೆ.
ಸೋಮಶೇಖರ್ ಜಾಗೆ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.