ADVERTISEMENT

ಹುಣಸೋಡು ಸ್ಫೋಟ ಪ್ರಕರಣ: ಕ್ರಷರ್‌ಗಳ ಸ್ಥಳಾಂತರದ ಸುಳಿವು

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 13:27 IST
Last Updated 23 ಜನವರಿ 2021, 13:27 IST
ಘಟನಾ ಸ್ಥಳದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಘಟನಾ ಸ್ಥಳದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.   

ಶಿವಮೊಗ್ಗ: ಹುಣಸೋಡು, ಗೆಜ್ಜೇನಹಳ್ಳಿ, ಕಲ್ಲುಗಂಗೂರು ಭಾಗದ ಎಲ್ಲ ಕ್ರಷರ್‌ಗಳನ್ನೂ ಸುರಕ್ಷಾ ವಲಯಕ್ಕೆ ಸ್ಥಳಾಂತರಿಸುವ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಹುಣಸೋಡು ಸ್ಫೊಟದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಪರಿಶೀಲಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಗಣಿಗಾರಿಕೆ ಪ್ರದೇಶ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿರುವ ಕಾರಣ ಸ್ಥಳಾಂತರಿಸಬೇಕು ಎನ್ನುವ ಬೇಡಿಕೆ ಇದೆ. ಈಗ ಕಾಲಕೂಡಿ ಬಂದಿದೆ ಎಂದು ಸ್ಥಳಾಂತರವನ್ನು ಖಚಿತಪಡಿಸಿದರು.

ADVERTISEMENT

ರಸ್ತೆ, ಸೇತುವೆ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ, ಗೃಹಗಳ ನಿರ್ಮಾಣಕ್ಕೆ ಜಲ್ಲಿಕಲ್ಲುಗಳ ಆವಶ್ಯಕತೆ ಇರುತ್ತದೆ. ಹಾಗಾಗಿ, ಅನಧಿಕೃತ ಕ್ವಾರಿಗಳನ್ನು ಮುಚ್ಚಿಸಿ, ಅಧಿಕೃತ ಕ್ವಾರಿಗಳ ನಿರ್ವಹಣೆಗೆ ಅವಕಾಶ ನೀಡಲಾಗುವುದು. ಈ ಪ್ರದೇಶದ ಎಲ್ಲ ಕ್ರಷರ್‌ಗಳೂ ಪರವಾನಗಿ ಪಡೆದಿವೆ. ಆದರೆ, ಕ್ವಾರಿಗಳಲ್ಲಿ ಸ್ಫೋಟಕಗಳನ್ನು ಬಳಸಲು ಅನುಮತಿ ನೀಡಿರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಕರಣ ಕುರಿತು ವಿಜ್ಞಾನಿಗಳು, ತಜ್ಞರು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರದಿ ಬಂದ ನಂತರ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾವಿನ ಸಂಖ್ಯೆ 6ಕ್ಕೇರಿಕೆ
ಸ್ಫೋಟದ ಸ್ಥಳದಲ್ಲಿ ಶುಕ್ರವಾರ ಐವರ ಮೃತದೇಹ ಪತ್ತೆಯಾಗಿದ್ದವು. ಅಂದು ಸ್ಥಳದಲ್ಲಿದ್ದವರ ಮಾಹಿತಿ ಆಧಾರದಲ್ಲಿ 6 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಮೃತದೇಹ ಪತ್ತೆಯಾಗಿಲ್ಲ. ಆತ ಯಾರು ಎನ್ನುವ ಮಾಹಿತಿಯೂ ಲಭ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.