ಸಾಗರ: ಸಮಾನತೆ, ಸಹೋದರತೆ, ಜಾತ್ಯಾತೀತತೆಯಂತಹ ಸಂವಿಧಾನದ ಉನ್ನತ ಮೌಲ್ಯಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಪರಸ್ಪರ ಸಾಹಿತ್ಯ ವೇದಿಕೆ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಮಂಗಳವಾರ ಏರ್ಪಡಿಸಿದ್ದ ಸಂವಿಧಾನ ಅಭಿಯಾನ ಕಾರ್ಯಕ್ರಮದಲ್ಲಿ ಹರ್ಷಕುಮಾರ್ ಕುಗ್ವೆ ಅವರ ‘ನಮ್ಮ ಸಂವಿಧಾನ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಂವಿಧಾನ ಪ್ರತಿಪಾದಿಸುವ ಪ್ರಮುಖ ಆಶಯಗಳ ಮಹತ್ವವನ್ನು ಕಡಿಮೆ ಮಾಡುವ ಹುನ್ನಾರ ನಡೆಯುತ್ತಿದೆ. ಸಂವಿಧಾನದಿಂದಲೇ ಭಾರತದಲ್ಲಿ ಅನೇಕ ಪ್ರಮುಖ ಬದಲಾವಣೆಗಳು ಆಗಿವೆ ಎಂಬ ಅರಿವನ್ನು ವಿದ್ಯಾರ್ಥಿ, ಯುವಜನರಿಗೆ ಮೂಡಿಸಬೇಕಿದೆ ಎಂದರು.
ಮನುಷ್ಯನ ಘನತೆಯನ್ನು ಕಾಪಾಡುವುದು ನಮ್ಮ ಸಂವಿಧಾನದ ಪ್ರಮುಖ ಉದ್ದೇಶವಾಗಿದೆ. ಭಾರತದಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಧ್ವನಿ ಎತ್ತುವ ಶಕ್ತಿಯನ್ನು ಕೊಟ್ಟಿದ್ದು ನಮ್ಮ ಸಂವಿಧಾನ ಎಂಬುದನ್ನು ಮರೆಯುವಂತಿಲ್ಲ ಎಂದು ಕೃತಿಕಾರ ಹರ್ಷಕುಮಾರ್ ಕುಗ್ವೆ ಹೇಳಿದರು.
ಯುವ ಸಮುದಾಯವನ್ನು ಅತಿರೇಕದ ಸಿದ್ಧಾಂತಗಳ ಹಿಂದೆ ಹೋಗಿ ಅವರ ಭವಿಷ್ಯವನ್ನು ಹಾಳು ಮಾಡಲು ಯತ್ನಿಸುವವರ ಬಗ್ಗೆ ಎಚ್ಚರ ಬೇಕಿದೆ. ಸಂವಿಧಾನದ ಅಧ್ಯಯನದ ಮೂಲಕ ವೈಚಾರಿಕತೆಯನ್ನು ರೂಢಿಸುವುದರಿಂದ, ವಿದ್ಯಾರ್ಥಿಗಳು ಇದರ ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಪರಸ್ಪರ ಸಾಹಿತ್ಯ ವೇದಿಕೆಯ ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.
ವಕೀಲ ಎಂ. ರಾಘವೇಂದ್ರ ಕೃತಿಯ ಕುರಿತು ಮಾತನಾಡಿದರು. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶಿವಾನಂದ ಕುಗ್ವೆ, ಸುರೇಶ್ ಸಹಾನೆ, ಪರಮೇಶ್ವರ ದೂಗೂರು, ಬಿ.ಟಾಕಪ್ಪ , ಸತ್ಯನಾರಾಯಣ, ಮೋಹನ್ ಮೂರ್ತಿ, ಎಸ್.ಎಂ. ಗಣಪತಿ, ಎಂ.ಸಿ. ವೀರಪ್ಪ ಭದ್ರಾಪುರ, ಜ್ಯೋತಿ ಕುಗ್ವೆ ಇದ್ದರು. ವಿದ್ಯಾ ಹಾಗೂ ಯಶವಂತ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.