ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಅಸಮರ್ಪಕ ಆಡಳಿತದ ಕುರಿತು ಸರ್ಕಾರ, ಉನ್ನತ ಮಟ್ಟದ ತನಿಖೆ ನಡೆಸಿ ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಆಗ್ರಹಿಸಿದರು.
ವಿಧಾನಪರಿಷತ್ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ರೂಪಿಸುವ ಮಹತ್ತರ ಜವಾಬ್ದಾರಿ ನಿರ್ವಹಿಸಬೇಕಾದ ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಏಕರೂಪದ ವೇಳಾಪಟ್ಟಿ ಅನುಸರಿಸುವಲ್ಲಿ ಲೋಪ, ವಿ.ವಿ.ಯ ಪ್ರಸಾರಾಂಗದಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ಆಗಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ವಿ.ವಿ ಯ ದೂರ ಶಿಕ್ಷಣ ಪ್ರವೇಶಾತಿ ಮತ್ತು ವ್ಯಾಸಂಗದ ಇನ್ನಿತರ ನಿರ್ವಹಣೆಗಳನ್ನು ಎಲ್.ಎಂ.ಎಸ್ ಮುಖಾಂತರ ನಡೆಸಲು ಬೆಂಗಳೂರಿನ ಫೆಮ್ ಸಾಫ್ಟ್‌ವೇರ್ ಲಿ. ಕಂಪೆನಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದ, ದರ ನಿರ್ಣಯಗಳಲ್ಲಿನ ತಪ್ಪುಗಳಿಂದಾಗಿ ವಿಶ್ವವಿದ್ಯಾಲಯಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ’ ಎಂದರು.
ಆಶ್ಚರ್ಯವೆಂದರೆ ಸದರಿ ಸಂಸ್ಥೆ ಈ ಹಿಂದೆ ಅಧ್ಯಯನ ಕೇಂದ್ರ ತೆರೆದು ವಿದ್ಯಾರ್ಥಿಗಳಿಂದ ಪಡೆಯಲಾಗಿದ್ದ ಶುಲ್ಕವನ್ನು ವಿಶ್ವವಿದ್ಯಾಲಯಕ್ಕೆ ಪಾವತಿಸದೆ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿದೆ. ವಿಶ್ವವಿದ್ಯಾಲಯಕ್ಕೆ ನೀಡಿದ್ದ ₹ 30 ಲಕ್ಷ ಮೊತ್ತದ ಚೆಕ್ ಬೌನ್ಸ್ ಆಗಿ ಪ್ರಕರಣ ನ್ಯಾಯಾಲಯದಲ್ಲಿದೆ. ಮತ್ತೊಮ್ಮೆ ಅದೇ ಸಂಸ್ಥೆಯೊಂದಿಗೆ ವ್ಯವಹರಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದರಲ್ಲಿ ಭ್ರಷ್ಟಚಾರ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.