
ಶಿವಮೊಗ್ಗ: ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ ಒಂದರ್ಥದಲ್ಲಿ ಕರ್ನಾಟಕ ತಂಡದ ಪಾಲಿನ ಅದೃಷ್ಟದ ಮೈದಾನವೂ ಹೌದು. ಈ ಅಂಗಳದಲ್ಲಿ ಈ ಹಿಂದೆ ಆಡಿರುವ ಮೂರು ಪಂದ್ಯಗಳಲ್ಲಿ ರಾಜ್ಯ ತಂಡ ಎರಡರಲ್ಲಿ ಗೆದ್ದು ಒಂದರಲ್ಲಿ ಡ್ರಾ ಸಾಧಿಸಿದೆ.
2017ರಲ್ಲಿ ಕರ್ನಾಟಕ ತಂಡವು ಹೈದರಾಬಾದ್ ಎದುರು ಆಡಿತ್ತು. ಆಗ ಕರ್ನಾಟಕ 59ರನ್‌ಗಳಿಂದ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಕರುಣ್ ನಾಯರ್ ಅಮೋಘ ಆಟ ಆಡಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.
‘ದಾವಣಗೆರೆ ಎಕ್ಸ್‌ಪ್ರೆಸ್’ ಖ್ಯಾತಿಯ ಆರ್.ವಿನಯ್‌ಕುಮಾರ್ ಸಾರಥ್ಯದ ರಾಜ್ಯ ತಂಡವು ಮೊದಲು ಬ್ಯಾಟ್ ಮಾಡಿ 62.2 ಓವರ್‌ಗಳಲ್ಲಿ 183ರನ್‌ಗಳಿಗೆ ಆಲೌಟ್ ಆಗಿತ್ತು. ಸದ್ಯ ಭಾರತ ತಂಡದ ಪ್ರಮುಖ ವೇಗದ ಬೌಲರ್ ಎನಿಸಿರುವ ಮೊಹಮ್ಮದ್ ಸಿರಾಜ್ ಆ ಇನಿಂಗ್ಸ್‌ನಲ್ಲಿ 4 ವಿಕೆಟ್ ಉರುಳಿಸಿದ್ದರು.
ಅಂಬಟಿ ರಾಯುಡು ನೇತೃತ್ವದ ಹೈದರಾಬಾದ್ ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್ ಅವರ ಸ್ಪಿನ್ ಬಲೆಗೆ ಸಿಲುಕಿ ನಲುಗಿತ್ತು. ಈ ತಂಡ 64.4 ಓವರ್‌ಗಳಲ್ಲಿ 136ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು.
ಎರಡನೇ ಇನಿಂಗ್ಸ್‌ನಲ್ಲಿ ಕರುಣ್ ಶತಕ (134) ಸಿಡಿಸಿ ಮಿಂಚಿದ್ದರು. ಅವರ ದಿಟ್ಟ ಆಟದಿಂದಾಗಿ ಕರ್ನಾಟಕ 105.4 ಓವರ್‌ಗಳಲ್ಲಿ 332ರನ್‌ಗಳನ್ನು ಕಲೆಹಾಕಿತ್ತು. ಹೈದರಾಬಾದ್ 109.4 ಓವರ್‌ಗಳಲ್ಲಿ 320ರನ್ ಕಲೆಹಾಕಿ ಸೋಲೊಪ್ಪಿಕೊಂಡಿತ್ತು. ಎರಡನೇ ಇನಿಂಗ್ಸ್‌ನಲ್ಲೂ ಶ್ರೇಯಸ್ ಮತ್ತು ಕೆ.ಗೌತಮ್ ತಲಾ 4 ಮತ್ತು 3 ವಿಕೆಟ್ ಕಬಳಿಸಿದ್ದರು.
ಮರು ವರ್ಷ (2018) ಕರ್ನಾಟಕವು ರೈಲ್ವೇಸ್ ಎದುರು ಪೈಪೋಟಿ ನಡೆಸಿತ್ತು. ಆ ಹೋರಾಟದಲ್ಲಿ ಆತಿಥೇಯರಿಗೆ 176ರನ್‌ಗಳ ಗೆಲುವು ದಕ್ಕಿತ್ತು. ಆ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದವರು ಮನೀಷ್ ಪಾಂಡೆ.
ಮೊದಲ ಇನಿಂಗ್ಸ್‌ನಲ್ಲಿ ಮನೀಷ್ ಪಡೆ 214ರನ್‌ಗಳಿಗೆ ಆಲೌಟ್ ಆದರೆ, ರೈಲ್ವೇಸ್ 143ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು. ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 290ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದ ಕರ್ನಾಟಕ ಎದುರಾಳಿಗಳ ಗೆಲುವಿಗೆ 362ರನ್‌ಗಳ ಗುರಿ ನೀಡಿತ್ತು. ಅರಿಂದಮ್ ಘೋಷ್ ನೇತೃತ್ವದ ರೈಲ್ವೇಸ್ 185ರನ್‌ಗಳಿಗೆ ಸರ್ವಪತನ ಕಂಡಿತ್ತು. ಕೆ.ಗೌತಮ್ 6 ವಿಕೆಟ್ ಪಡೆದರೆ, ಶ್ರೇಯಸ್ 2 ವಿಕೆಟ್ ಉರುಳಿಸಿ ತಂಡದ ಸಂಭ್ರಮಕ್ಕೆ ಕಾರಣರಾಗಿದ್ದರು.
2020ರಲ್ಲಿ ಕರ್ನಾಟಕ ಮತ್ತು ಮಧ್ಯಪ್ರದೇಶ ಮುಖಾಮುಖಿಯಾಗಿದ್ದವು. ಆಗ ರಾಜ್ಯ ತಂಡದ ಸಾರಥ್ಯ ವಹಿಸಿದ್ದವರು ಕರುಣ್ ನಾಯರ್. ಆ ಪಂದ್ಯದಲ್ಲಿ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 426ರನ್ ಬಾರಿಸಿತ್ತು. ಮಧ್ಯಪ್ರದೇಶ 431ರನ್ ದಾಖಲಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಕರುಣ್ ಬಳಗ 1 ವಿಕೆಟ್‌ಗೆ 62ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು.
ಈ ಮೂರೂ ಪಂದ್ಯಗಳಲ್ಲೂ ಹೆಜ್ಜೆ ಗುರುತು ಮೂಡಿಸಿರುವ ಶ್ರೇಯಸ್ ಮತ್ತು ಕರುಣ್ ಈಗಲೂ ತಂಡದಲ್ಲಿದ್ದಾರೆ. ಹಿಂದಿನ ಅವಿಸ್ಮರಣೀಯ ನೆನಪುಗಳೊಂದಿಗೆ ಮತ್ತೊಂದು ಪಂದ್ಯ ಆಡಲು ಸಜ್ಜಾಗಿದ್ದು, ನೆಚ್ಚಿನ ಅಂಗಳದಲ್ಲಿ ಮತ್ತೆ ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ.
9 ಪಂದ್ಯಗಳಿಗೆ ಆತಿಥ್ಯ
ಶಿವಮೊಗ್ಗ ಜಿಲ್ಲೆ ಇದುವರೆಗೂ 9 ರಣಜಿ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. 1974ರಲ್ಲಿ ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ರಣಜಿ ಪಂದ್ಯ ನಡೆದಿತ್ತು. ಆಗ ಕರ್ನಾಟಕ ಮತ್ತು ಆಂಧ್ರಪ್ರದೇಶ ಮುಖಾಮುಖಿಯಾಗಿದ್ದವು. 1979ರಲ್ಲಿ ಕರ್ನಾಟಕ–ಕೇರಳ (ಶಿವಮೊಗ್ಗ) 1985ರಲ್ಲಿ ಕರ್ನಾಟಕ–ಗೋವಾ (ಭದ್ರಾವತಿ) 1992 ಮತ್ತು 1996ರಲ್ಲಿ ಭದ್ರಾವತಿಯಲ್ಲಿ ತಮಿಳುನಾಡು ವಿರುದ್ಧದ ಪಂದ್ಯಗಳು ಜರುಗಿದ್ದವು. 2011ರಲ್ಲಿ ಶಿವಮೊಗ್ಗದಲ್ಲಿ ಕರ್ನಾಟಕ ಮತ್ತು ಉತ್ತರಪ್ರದೇಶ ತಂಡಗಳ ನಡುವೆ ಹೋರಾಟ ನಡೆದಿತ್ತು. 2017 2018 ಮತ್ತು 2020ರಲ್ಲಿ ನಡೆದ ಪಂದ್ಯಗಳಿಗೆ ನವುಲೆಯ ಮೈದಾನ ವೇದಿಕೆ ಕಲ್ಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.