ಶಿರಾಳಕೊಪ್ಪ: ಶುಲ್ಕದ ಮೊತ್ತ ಪರಿಷ್ಕರಿಸಿ ಹೊಸ ಮಾರ್ಗಸೂಚಿ ಪ್ರಕಟಣೆಯ ನಂತರ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಲ್ಲಿ ಮೀನುಗಾರಿಕೆಗೆ ಅವಕಾಶ ಮಾಡಿಕೊಡಲು ಮೀನುಗಾರಿಕೆ ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಇಲಾಖೆಯ ಈ ನಿರ್ಧಾರ ಶಿಕಾರಿಪುರ ತಾಲ್ಲೂಕಿನಲ್ಲಿ ಮೀನುಗಾರಿಕೆಗೆ ದೊಡ್ಡ ಹೊಡೆತ ನೀಡಿದೆ.
ರಾಜ್ಯದ ವಿವಿಧ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 40 ಹೆಕ್ಟೇರ್‌ಗೂ ಹೆಚ್ಚಿರುವ ಅಚ್ಚುಕಟ್ಟು ಪ್ರದೇಶದ 3,946 ಕೆರೆಗಳ 1.70 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮೀನು ಸಾಕಾಣಿಕೆ ಹಕ್ಕನ್ನು ಮೀನುಗಾರಿಕೆ ಇಲಾಖೆ ಹೊಂದಿದೆ. ಅದರಲ್ಲಿ 1,000ಕ್ಕೂ ಹೆಚ್ಚು ಕೆರೆಗಳು ಏತನೀರಾವರಿ ಯೋಜನೆಗೆ ಬಳಕೆಯಾಗುತ್ತಿವೆ. ಈ ಕೆರೆಗಳಲ್ಲಿ ಮೀನುಗಾರಿಕೆಗೆ 2 ವರ್ಷದಿಂದ ಹರಾಜು ಆಗದೇ ಇರುವುದು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟುಮಾಡಿದೆ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಈ ಮಧ್ಯೆ ಸರ್ಕಾರ ಹಾಲಿ ಇರುವ ಕೆರೆಗಳನ್ನು ಹರಾಜು ಮಾಡುವ ಬದಲು ಮೀನುಗಾರಿಕೆ ಕೆರೆಯ ಉಪಯುಕ್ತ ಜಲ ವಿಸ್ತೀರ್ಣದ ಮೊತ್ತ ₹500 ಪ್ರತಿ ಹೆಕ್ಟೇರ್ ಗೆ ಇದ್ದ ಮೊತ್ತವನ್ನು ದುಪ್ಪಟ್ಟು ಮಾಡುವ ಮೂಲಕ ರಾಜ್ಯದ ಮೀನುಗಾರರಿಗೆ ಬರೆ ಎಳೆಯಲು ಸಿದ್ದತೆ ನಡೆಸಿದೆ. ಈ ಕಾರಣದಿಂದಾಗಿಯೇ ಹರಾಜು ಪ್ರಕ್ರಿಯೆ ತಡವಾಗುತ್ತಿದೆ ಎಂಬ ಆರೋಪಗಳು ಮೀನುಗಾರರ ವಲಯದಲ್ಲಿ ಕೇಳಿಬರುತ್ತಿದೆ.
ಇದರಿಂದಾಗಿ ಮೀನುಗಾರಿಕೆ ಇಲಾಖೆ ಆರ್ಥಿಕ ನಷ್ಟ ಅನುಭವಿಸುವ ಜೊತೆಗೆ ಮೀನುಗಾರಿಕೆ ವೃತ್ತಿಯ ಮೇಲೆ ಅವಲಂಬಿತವಾಗಿರುವ ಒಳನಾಡು ಮೀನುಗಾರರ ಕುಟುಂಬಗಳ ತುತ್ತಿಗೂ ಸಂಚಕಾರ ತಂದಿದೆ.
ತಾಲ್ಲೂಕಿನಲ್ಲಿ ಸುಮಾರು 60ಕ್ಕೂ ಹೆಚ್ಚು ಕೆರೆಗಳಲ್ಲಿ ಏತ ನೀರಾವರಿ ಸೌಲಭ್ಯ ಇದೆ. ಸರ್ಕಾರದ ನಿರ್ದೇಶನ ಇಲ್ಲದೆ ಇರುವುದರಿಂದ ಅಲ್ಲಿ ಮೀನು ಬಿಡಲು ಅವಕಾಶ ನೀಡಿಲ್ಲ. ಉಳಿದ 70 ಕೆರೆಗಳನ್ನು ₹ 33.70 ಲಕ್ಷಕ್ಕೆ ಹರಾಜು ಮಾಡಲಾಗಿದೆ ಎಂದು ಶಿಕಾರಿಪುರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿನಯ್ ತಿಳಿಸಿದರು.
ಕಳೆದ ಎರಡು ವರ್ಷ ಮೀನುಗಾರರು ಸಂಕಷ್ಟ ಅನುಭವಿಸಿದ್ದಾರೆ. ಒಂದು ವರ್ಷ ಬರಗಾಲದಿಂದ ಬಸವಳಿದಿದ್ದಾರೆ. ಮತ್ತೊಂದು ವರ್ಷ ಮೀನುಗಾರರು ಅತಿವೃಷ್ಟಿಯಿಂದ ತೊಂದರೆ ಅನುಭವಿಸಿದ್ದಾರೆ. ಈಗ ಕೆರೆಗಳು ಸಮೃದ್ಧವಾಗಿದ್ದು ಮೀನು ಕೃಷಿ ಮಾಡಲು ನಿಸರ್ಗ ನೆರವು ನೀಡುತ್ತಿರುವ ಸಂದರ್ಭದಲ್ಲಿ ಮೀನುಗಾರಿಕೆಗೆ ಸರ್ಕಾರ ಅನುಮತಿ ನೀಡದಿರುವುದು ಮೀನು ಕೃಷಿ ವಲಯಕ್ಕೆ ಗಂಭೀರ ಹಾನಿಯಾಗಿದೆ.
ಕಳೆದ 2 ವರ್ಷದಿಂದ ಮೀನು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಮೀನುಗಾರಿಕೆ ಅವಲಂಬಿಸಿರುವ ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಈ ಬಗ್ಗೆ ಮೀನುಗಾರ ಇಲಿಯಾಸ್ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.