ADVERTISEMENT

ಶಿವಮೊಗ್ಗ: ಡೆಕ್ಸಾ ಸ್ಕ್ಯಾನ್ ಸಹಿತ ಎಲುಬು ಆರೋಗ್ಯ ತಪಾಸಣೆಗೆ ಚಾಲನೆ

ಸನ್ ಬೋನ್ ಆ್ಯಂಡ್‌ ಸ್ಪೈನ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 4:32 IST
Last Updated 9 ಜನವರಿ 2026, 4:32 IST
ಶಿವಮೊಗ್ಗದಲ್ಲಿ ನಡೆದ ಎಲುಬು ಆರೋಗ್ಯ ತಪಾಸಣಾ ಕಾರ್ಯಕ್ರಮದ ಉದ್ಘಾಟನೆಯ ನೋಟ
ಶಿವಮೊಗ್ಗದಲ್ಲಿ ನಡೆದ ಎಲುಬು ಆರೋಗ್ಯ ತಪಾಸಣಾ ಕಾರ್ಯಕ್ರಮದ ಉದ್ಘಾಟನೆಯ ನೋಟ   

ಶಿವಮೊಗ್ಗ: ಇಲ್ಲಿನ ದುರ್ಗಿಗುಡಿಯ ಸನ್ ಬೋನ್ ಆ್ಯಂಡ್‌ ಸ್ಪೈನ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡೆಕ್ಸಾ ಸ್ಕ್ಯಾನ್ ಸಹಿತ ಎಲುಬು ಆರೋಗ್ಯ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಈ ವೇಳೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಬೋನ್ ಮಿನರಲ್ ಡೆನ್ಸಿಟಿ, ಡೆಕ್ಸಾ ಸ್ಕ್ಯಾನ್ ತಂತ್ರಜ್ಞಾನವನ್ನು ಒಳಗೊಂಡ ಎಲುಬು ಆರೋಗ್ಯ ತಪಾಸಣೆ ನಡೆಸಲಾಯಿತು. ಹಿರಿಯ ಮೂಳೆ ತಜ್ಞ ಡಾ. ಬಿ.ಆರ್. ತಹಶೀಲ್ದಾರ್, ಐಎಂಎ ಶಿವಮೊಗ್ಗ ಶಾಖೆಯ ಉಪಾಧ್ಯಕ್ಷ ಡಾ. ಬಿ.ಎ.ಸುಭಾಷ್ ಇದನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ‘ಆಸ್ಟಿಯೋಪೊರೋಸಿಸ್ ಹಾಗೂ ಇತರ ಮೂಳೆ ಸಂಬಂಧಿತ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಈ ತಪಾಸಣೆ ಸಹಕಾರಿಯಾಗುತ್ತದೆ’ ಎಂದರು.

‘ಡ್ಯೂಯಲ್ ಎನರ್ಜಿ ಎಕ್ಸ್-ರೇ ಅಬ್ಸರ್‌ಪ್ಟಿಯೋಮೆಟ್ರಿ ಸ್ಕ್ಯಾನ್ ಅನ್ನು ಎಲುಬಿನ ಖನಿಜ ಸಾಂಧ್ರತೆ ಅಳೆಯುವ ಮಾನದಂಡ ಎಂದು ಪರಿಗಣಿಸಲಾಗಿದೆ. ಇದು ನೋವುರಹಿತ, ಶಸ್ತ್ರಚಿಕಿತ್ಸೆ ಇಲ್ಲದ ಪರೀಕ್ಷೆಯಾಗಿದೆ. ಕಡಿಮೆ ಪ್ರಮಾಣದ ಕ್ಷ-ಕಿರಣಗಳನ್ನು ಬಳಸಿಕೊಂಡು ಎಲುಬಿನ ಬಲವನ್ನು ಅಳೆಯುತ್ತದೆ ಹಾಗೂ ಮುರಿತಗಳು ಸಂಭವಿಸುವ ಮುನ್ನವೇ ಎಲುಬಿನ ದುರ್ಬಲತೆಯನ್ನು ಪತ್ತೆಹಚ್ಚುತ್ತದೆ’ ಎಂದು ಹೇಳಿದರು.

ADVERTISEMENT

‘ಆಸ್ಟಿಯೋಪೊರೋಸಿಸ್ ಅನ್ನು ಸಾಮಾನ್ಯವಾಗಿ ‘ನಿಶ್ಶಬ್ದ ರೋಗ’ ಎಂದು ಕರೆಯಲಾಗುತ್ತದೆ. ಎಲುಬಿನ ಸವೆತ ಆಗುತ್ತಿದ್ದು, ಮುರಿತ ಸಂಭವಿಸಿದಾಗ ಮಾತ್ರ ಇದು ಗಮನಕ್ಕೆ ಬರುತ್ತದೆ. ಈ ಹೊಸ ತಪಾಸಣಾ ಕಾರ್ಯಕ್ರಮ ಶಿವಮೊಗ್ಗದ ಜನರಿಗೆ ಎಲುಬಿನ ಆರೋಗ್ಯದ ಬಗ್ಗೆ ಎಚ್ಚರಿಕೆ ಮತ್ತು ಸೂಕ್ತ ಆರೈಕೆ ಪಡೆಯಲು ಸಹಕಾರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಡಾ. ಆಕಾಶ್ ಹೊಸ್ತೋಟ ಮತ್ತು ಡಾ.ಎಂ.ಬಿ.ಅಭಿಷೇಕ್ ಅವರು ಡೆಕ್ಸಾ ಸ್ಕ್ಯಾನ್ ಪ್ರಕ್ರಿಯೆ ಬಗ್ಗೆ ವಿವರಿಸಿದರು. ‘ಆರಂಭಿಕ ಹಂತದಲ್ಲೇ ಎಲುಬಿನ ಸಮಸ್ಯೆ ಪತ್ತೆಹಚ್ಚುವುದರಿಂದ ಗಂಭೀರ ಸಮಸ್ಯೆಗಳನ್ನು ತಡೆಗಟ್ಟಬಹುದು ಹಾಗೂ ಜೀವನಮಟ್ಟ ಉತ್ತಮಗೊಳಿಸಬಹುದು’ ಎಂದು ತಿಳಿಸಿದರು. ಡಾ.ಎಚ್.ಡಿ.ಭರತ್ ಎಲುಬಿನ ಆರೋಗ್ಯ ತಪಾಸಣೆಯ ಮಹತ್ವದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ರಾಮಚಂದ್ರ ಬಾದಾಮಿ, ಡಾ. ಕೆ.ಎಸ್. ಶುಭ್ರತಾ, ಡಾ. ಶ್ವೇತಾ ಬಾದಾಮಿ, ಐಎಂಎ ಹಿರಿಯ ವೈದ್ಯರಾದ ಡಾ. ವಿಮಲಾ ಬಾಯಿ, ಡಾ. ಪಾಟೀಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.