ADVERTISEMENT

ರಾಜ್ಯಸಭಾ ಸ್ಥಾನಕ್ಕೆ ಧರ್ಮಾಧಿಕಾರಿ ರಾಜೀನಾಮೆ ನೀಡಲಿ: ಸುಧೀರ್ ಕುಮಾರ್ ಮುರೊಳ್ಳಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 3:13 IST
Last Updated 21 ಜುಲೈ 2025, 3:13 IST
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಪಿಸಿಆರ್‌ ರಾಜ್ಯ ಘಟಕದ ಅಧ್ಯಕ್ಷ ಎಂ.ಎಚ್.ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿದರು
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಪಿಸಿಆರ್‌ ರಾಜ್ಯ ಘಟಕದ ಅಧ್ಯಕ್ಷ ಎಂ.ಎಚ್.ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿದರು    

ಶಿವಮೊಗ್ಗ: ‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ, ಕೊಲೆ ಮತ್ತು ಹೆಣಗಳನ್ನು ಹೂಳಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು’ ಎಂದು ಎಪಿಸಿಆರ್‌ ರಾಜ್ಯ ಘಟಕದ ಅಧ್ಯಕ್ಷ ಎಂ.ಎಚ್.ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಜಿಲ್ಲಾ ಸಮಿತಿಯಿಂದ ಪ್ರೆಸ್ ಟ್ರಸ್ಟ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಸಮಿತಿಯ ಘೋಷಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಧರ್ಮಸ್ಥಳದಲ್ಲಿ ನಡೆದಿರುವ ಕೊಲೆಗಳನ್ನು ಧರ್ಮಾಧಿಕಾರಿಯೇ ಮಾಡಿದ್ದಾರೆ ಎಂದು ಹೇಳುತ್ತಿಲ್ಲ. ಕೆಲವು ಮೃತ ದೇಹಗಳನ್ನು ಹೂತಿದ್ದೇನೆ ಎಂದು ವ್ಯಕ್ತಿಯೊಬ್ಬ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ನಾವು ಧ್ವನಿ ಎತ್ತಿದ್ದೇವೆ. ಪ್ರಕರಣ ಇತ್ಯರ್ಥವಾದ ಬಳಿಕ ಪುನಃ ಧರ್ಮಾಧಿಕಾರಿ ಅಧಿಕಾರ ಪಡೆದುಕೊಳ್ಳಲಿ’ ಎಂದು ಸಲಹೆ ನೀಡಿದರು.

ADVERTISEMENT

ಜನಾಧಿಕಾರದ ವಿರುದ್ಧ ನಿಂತಿರುವ ಧರ್ಮಾಧಿಕಾರದ ವಿರುದ್ಧ ನಮ್ಮ ಧ್ವನಿ‌. ಕಾನೂನು ಬದ್ಧ ಹೋರಾಟ, ಸಲಹೆ, ಅರಿವನ್ನು ಎಪಿಸಿಆರ್ ಮೂಡಿಸಲಿದೆ. ಸಾಮಾನ್ಯ ಜನರು ಪೊಲೀಸ್ ಠಾಣೆಗೆ ಹೋಗಲು ಭಯ ಪಡುತ್ತಾರೆ. ಹೆಣ್ಣು ಮಕ್ಕಳು, ಚಿಕ್ಕಮಕ್ಕಳು, ಶೋಷಿತರು, ರೈತರು, ಅಲ್ಪಸಂಖ್ಯಾತರ ಪರ ಕೆಲಸ ಮಾಡಲಿದ್ದೇವೆ ಎಂದರು.

‘ಜನಸೇವೆಗೆ ಎಂದು ಹುಟ್ಟಿದ ಅನೇಕ ಸಂಘನೆಗಳು ನಂತರ ರಾಜಕೀಯಕ್ಕೆ ಹೋಗಿ, ಅಧಃಪತನ ಕಂಡಿವೆ. ಆದರೆ, ಎಪಿಸಿಆರ್ ವಿಭಿನ್ನ. ಧರ್ಮಸ್ಥಳದ ವಿಷಯದಲ್ಲಿ ಇಡೀ ನಾಡು ಸಿಡಿದೆದ್ದರೆ ಮಾತ್ರ ಅನ್ಯಾಯಕ್ಕೊಳಗಾದ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲು ಸಾಧ್ಯ’ ಎಂದು ವಕೀಲ ಕೆ.ಪಿ.ಶ್ರೀಪಾಲ್ ಅಭಿಪ್ರಾಯಪಟ್ಟರು.

ದೇಶದಲ್ಲಿ ನಿಜವಾಗಲೂ ಪ್ರಜಾಪ್ರಭುತ್ವ‌ ವ್ಯವಸ್ಥೆ ಇದೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ಮೇಲ್ವರ್ಗದವರು ಎಷ್ಟು ಬೇಕಾದರೂ ಭೂಮಿ ಒತ್ತುವರಿ ಮಾಡಬಹುದು. ಆದರೆ, ಬಡವರು ಹಾಗೆ ಮಾಡಿದರೆ ಅವರನ್ನು ಗಡೀಪಾರು‌ ಮಾಡಲಾಗುತ್ತದೆ. ಈ ಪ್ರಭುತ್ವ ಯಾರನ್ನೂ ಜೀವಂತ ಉಳಿಯಲು ಬಿಡುವುದಿಲ್ಲ’ ಎಂದು ದಲಿತ ಸಂಘರ್ಷ ಸಮಿತಿಯ ಟಿ.ಎಚ್. ಹಾಲೇಶಪ್ಪ ಬೇಸರ ವ್ಯಕ್ತಪಡಿಸಿದರು.

‘ಧ್ವನಿ‌‌ ಇಲ್ಲದವರಿಗೆ ಧ್ವನಿ ನೀಡಲು ಎಪಿಸಿಆರ್ ಸಂಘಟನೆಯನ್ನು ರಚಿಸಲಾಗಿದೆ.‌ ಪ್ರಜೆಗಳೇ ಪ್ರಭುಗಳು ಎನ್ನುವುದು ಪುಸ್ತಕದಲ್ಲಿಯೇ ಉಳಿದಿದೆ. ಅನ್ಯಾಯದ ವಿರುದ್ಧ ಧ್ವನಿ‌ ಎತ್ತಿದವರ ಮೇಲೆ ಪ್ರಕರಣ ದಾಖಲಾಗುತ್ತಿವೆ. ಹಣ ಬಲ, ತೋಳ್ಬಲ ಇಲ್ಲದವರಿಗೆ ಎಪಿಸಿಆರ್ ಶಕ್ತಿಯಾಗಿ ನಿಲ್ಲಲಿದೆ’ ಎಂದು ಸಂಚಾಲಕಿ ಸರೋಜಾ ಪಿ. ಚಂಗೊಳ್ಳಿ ಹೇಳಿದರು.

ಮಹಿಳೆಯರ ರಕ್ಷಣೆ, ಜೀತ ಪದ್ದತಿ, ಅಸ್ಪೃಶ್ಯತೆ ಹೋಗಲಾಡಿಸಲು ನಿರಂತರ ಹೋರಾಟ ನಡೆದಿದೆ. ಯುವ ಜನರಲ್ಲಿ ಹೋರಾಟದ ಮನೋಭಾವ ಕಡಿಮೆಯಾಗುತ್ತಿದೆ. ಎಪಿಸಿಆರ್ ರಾಷ್ಟ್ರೀಯ ಸಂಘಟನೆಯಾಗಿದ್ದು, ಮಾನವ ಹಕ್ಕು ಹೋರಾಟಗಾರರು, ಹಿರಿಯ ನ್ಯಾಯವಾದಿಗಳು ಇದನ್ನು ರಚಿಸಿದ್ದಾರೆ ಎಂದು ಸಂಚಾಲಕ ಮುಸ್ತಫಾ ಬೇಗ್ ಹೇಳಿದರು.

ಜಮಾತೆ ಇಸ್ಲಾಮಿ ಹಿಂದ್‌ನ ವಹಾಬ್, ಷೆಹರಾಜ್ ಸಿದ್ಧಿಖಿ, ರಾಜಮ್ಮ, ಪ್ರೊ.ರಾಚಪ್ಪ ಇದ್ದರು. 

ಜಾತಿ ಸಮಾವೇಶದಲ್ಲಿ ‘ನ್ಯಾಯಾಧೀಶರು’

‘ಉನ್ನತ ಸ್ಥಾನದಲ್ಲಿರುವ ನ್ಯಾಯಾಧೀಶರು ಜಾತಿ ಸಮಾವೇಶಕ್ಕೆ ಹೋಗಿ ಕುಳಿತು ಕೊಳ್ಳುತ್ತಿದ್ದಾರೆ.‌ ಜಾತಿಯ ಪರವಾಗಿ ಭಾಷಣ ಮಾಡುತ್ತಾರೆ. ಶಿಕ್ಷಕರು ವೈದ್ಯರು ವಕೀಲರು ಜಾತಿ ಸಂಘಟನೆಯ ಭಾಗವಾಗಬಾರದು. ಪ್ರಭುತ್ವ ಶ್ರೀ ಸಾಮಾನ್ಯನಿಗೆ ಮೋಸ ಮಾಡಿದಾಗ ಅದರ ಬಗ್ಗೆ ಪ್ರಶ್ನೆ ಮಾಡುವುದು ಮಾನವೀಯತೆ’ ಎಂದು ಎಪಿಸಿಆರ್‌ ರಾಜ್ಯ ಘಟಕದ ಅಧ್ಯಕ್ಷ ಎಂ.ಎಚ್.ಸುಧೀರ್ ಕುಮಾರ್ ಮುರೊಳ್ಳಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.